ಸರ್ಕಾರ ಮಕ್ಕಳ ಪಂಚಮಿ ಆಚರಣೆ ಬಗ್ಗೆ ಚಿಂತಿಸಲಿ

ಸರ್ಕಾರ ಮಕ್ಕಳ ಪಂಚಮಿ ಆಚರಣೆ ಬಗ್ಗೆ ಚಿಂತಿಸಲಿ

ದಾವಣಗೆರೆ, ಆ. 21- ನಾಗರ ಪಂಚಮಿಯನ್ನು ಮಕ್ಕಳ ಪಂಚಮಿ ಹಬ್ಬವನ್ನಾಗಿ ಆಚರಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಲಹೆ ನೀಡಿದರು.

ಶುಕ್ರವಾರ ನಗರದ ಬಿಜೆಎಂ ಶಾಲೆಯಲ್ಲಿ  ನಾಗರ ಪಂಚಮಿ ಪ್ರಯುಕ್ತ ಏರ್ಪಡಿಸಿದ್ದ `ಕಲ್ಲ ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು’ ಸಪ್ತಾಹ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ವಿತರಿಸಿ ಅವರು ಮಾತನಾಡಿದರು.

ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಚಾರಿಕ  ಪ್ರಜ್ಞೆ ಉಳ್ಳವರು. ಅವರು ಮೌಢ್ಯಕ್ಕೆ ಒತ್ತು ನೀಡುವುದಿಲ್ಲ. ಹೀಗಾಗಿ, ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ಶಾಲಾ-ಕಾಲೇಜುಗಳಲ್ಲಿ  ನಾಗರ ಪಂಚಮಿ ಹಬ್ಬವನ್ನು ಮಕ್ಕಳ ಪಂಚಮಿ ಹಬ್ಬವನ್ನಾಗಿ ಆಚರಿಸಲು ಕ್ರಮ ಕೈಗೊಳ್ಳಲಿ ಎಂದರು.

ಭಾರತದಲ್ಲಿ ಆಹಾರ ಭದ್ರತೆಯ ಕೊರತೆ ಇದೆ. ಹಸಿವಿನಿಂದ ಬಹಳಷ್ಟು ಜನರು ಸಾಯುತ್ತಿದ್ದಾರೆ. ಹೀಗಾಗಿ, ದೇವರ ಹೆಸರಿನಲ್ಲಿ ಆಹಾರ ಪದಾರ್ಥವನ್ನು ಹಾಳು ಮಾಡದೇ, ಅವುಗಳನ್ನು ಅವಶ್ಯಕತೆ ಇರುವವರಿಗೆ ನೀಡುವ ಮೂಲಕ ಜೀವಗಳಲ್ಲಿ ಪರಮಾತ್ಮನನ್ನು ಕಾಣಬೇಕು ಎಂದು ಕಿವಿಮಾತು ಹೇಳಿದರು.

ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಸಮಾಜದಲ್ಲಿ ಮನೆ ಮಾಡಿರುವ ಕಂದಾಚಾರಗಳನ್ನು ತೊಡೆದು ಹಾಕಲು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಇಂತಹ ವಿನೂತನ ಕಾರ್ಯಕ್ರಮ ನಡೆಸುತ್ತಿರುವುದು ಶ್ಲ್ಯಾಘನೀಯ ಎಂದು ಹೇಳಿದರು.

  ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್, ಮಹಾನಗರ ಪಾಲಿಕೆ ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ನಿವೃತ್ತ ಸರ್ಕಾರಿ ಅಭಿಯೋಜಕ ಎಸ್.ವಿ. ಪಾಟೀಲ್, ವೀಣಾ ಮಂಜುನಾಥ್,  ಬಿಜೆಎಂ ಶಾಲೆ ಕಾರ್ಯದರ್ಶಿ ಮಂಜುನಾಥ್ ಅಗಡಿ ಮತ್ತಿತರರಿದ್ದರು.

error: Content is protected !!