ಹೊರ ರಾಜ್ಯಗಳಲ್ಲಿ ಕನ್ನಡ ಸಂಸ್ಕೃತಿ ಬೆಳೆಸುವ ಕಾರ್ಯ ಅಭಿನಂದನಾರ್ಹ

ಹೊರ ರಾಜ್ಯಗಳಲ್ಲಿ ಕನ್ನಡ ಸಂಸ್ಕೃತಿ ಬೆಳೆಸುವ ಕಾರ್ಯ ಅಭಿನಂದನಾರ್ಹ

ಪುಣೆಯ ಕನ್ನಡ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಮೆಚ್ಚುಗೆ

ಪುಣೆ, ಆ.21-  ಭಗವಂತ ಒಲಿದರೆ ಅಸಾಧ್ಯವೂ ಸಾಧ್ಯವಾಗುತ್ತೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬಿಟ್ಟು ಜೀವನಕ್ಕಾಗಿ ಹೊರ ರಾಜ್ಯಗಳಲ್ಲಿರುವ ನಮ್ಮ ಕನ್ನಡಿಗರು  ತಮ್ಮದೇ ಆದ ಅಸ್ತಿತ್ವ ಉಳಿಸಿಕೊಂಡು ಕನ್ನಡ ಸಂಸ್ಕೃತಿ  ಬೆಳೆಸುವ ಮಹತ್ಕಾರ್ಯ ಮಾಡುತ್ತಿರುವುದು ಅಭಿನಂದ ನಾರ್ಹ  ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿನ ಕನ್ನಡ ಸಂಘದ ಕಾವೇರಿ ಶಿಕ್ಷಣ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆದ `ತುಮ್ಹಾರೆ ಸಿವಾ ಔರ್ ಕೋಯಿ ನಹೀ’  ವಚನ ಸಂಸ್ಕೃತಿ ಅಭಿಯಾನದ ಸಾನ್ನಿಧ್ಯ ವಹಿಸಿ  ಅವರು ಮಾತನಾಡಿದರು.   

ಅಲ್ಲದೇ ಇಲ್ಲಿ ಕನ್ನಡ ಸಂಘವನ್ನು ಪ್ರಾರಂಭ ಮಾಡಿ ಅದರ ಮೂಲಕ ಶಾಲೆಯನ್ನು ತೆರೆದು ಆ ಶಾಲೆ ಇವತ್ತು ವಜ್ರಮಹೋತ್ಸವ ಆಚರಿಸುತ್ತಿ ರುವುದು ಸಂತೋಷದ ಸಂಗತಿ. ಕನ್ನಡ ನಾಡಿನಲ್ಲೇ ಕನ್ನಡ ಕಳೆದು ಹೋಗ್ತಾ ಇದೆ.  ಆಂಗ್ಲಭಾಷೆಯ ವ್ಯಾಮೋಹದಲ್ಲಿ ಕನ್ನಡಿಗರು ಕನ್ನಡತನ ವನ್ನು, ಕನ್ನಡ ಸಂಸ್ಕೃತಿಯನ್ನು, ಕನ್ನಡ ಭಾಷೆಯನ್ನು ಕಳೆದುಕೊಳ್ತಾ ಇದ್ದಾರೆ. ಆದರೆ ಕನ್ನಡ ನಾಡಿನಿಂದ ಹೊರಗಿರುವ ದೆಹಲಿ, ಮುಂಬೈ, ಪೂನಾ ಕನ್ನಡಿಗರು ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ವಿಶೇಷ ಕಾಳಜಿಯನ್ನಿಟ್ಟು ಕೊಂಡಿರುವುದನ್ನು ಗಮನಿಸಿದ್ದೇವೆ ಎಂದರು.

ದೂರವಿದ್ದಾಗ ಸಂಬಂಧಗಳು ಹತ್ತಿರ ವಾಗುತ್ತವೆ. ಹತ್ತಿರವಿದ್ದಾಗ ಸಂಬಂಧಗಳು ಕಳಚಿಹೋಗುತ್ತವೆ. ಹಾಗೆಯೇ ನೀವು ಕನ್ನಡ ನಾಡಿನಿಂದ ದೂರವಿದ್ದರೂ ಆ ಸಂಬಂಧವನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡುತ್ತಿರುವುದು ಅಭಿನಂದನಾರ್ಹ.

ನಮ್ಮಲ್ಲಿ ಪಠ್ಯಾಧಾರಿತವಾದ ಶಿಕ್ಷಣ ಮಾತ್ರ ಕೊಡುವ ಪದ್ಧತಿ ಇದೆ. ಆದರೆ ಪಠ್ಯಾಧಾರಿತವಾದ ಶಿಕ್ಷಣ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಪಠ್ಯೇತರ ಚಟುವಟಿಕೆಗಳನ್ನು ಮಕ್ಕಳಿಗೆ ಕಲಿಸಬೇಕು. ನಮ್ಮನ್ನು ಮಕ್ಕಳು ಹೂವನ್ನು ಹಾಕ್ತಾ ಪೂರ್ಣಕುಂಭದೊಂದಿಗೆ ಸ್ವಾಗತ ಮಾಡಿದರು. ಇದು ಕೂಡ ಕನ್ನಡ ನಾಡಿನ ಸಂಸ್ಕೃತಿ. ಇಂತಹ ಸಂಸ್ಕೃತಿಯನ್ನು ನಾವು ಎಲ್ಲೇ ಹೋದರೂ ಮರೆಯೋದಿಲ್ಲ ಅನ್ನೋದನ್ನು ನೀವು ತೋರಿಸಿಕೊಟ್ಟಿದ್ದೀರಿ ಎಂದು ಸ್ವಾಮೀಜಿ ನುಡಿದರು.

ನಮ್ಮ ಕನ್ನಡ ಭಾಷೆಯ ಸೊಗಡನ್ನು ಭಾರತೀಯರಿಗೆ ಮುಟ್ಟಿಸಬೇಕು ಎನ್ನುವ ಹಿನ್ನೆಲೆಯಲ್ಲಿ ನಾಟಕಗಳ ಮೂಲಕ ಜನರನ್ನು ಜಾಗೃತಗೊಳಿಸುವ ಕೆಲಸವನ್ನು ಕಳೆದ 25 ವರ್ಷಗಳಿಂದಲೂ ಮಾಡುತ್ತಾ ಬಂದಿದ್ದೇವೆ. ಕನ್ನಡದ ನಾಟಕಗಳನ್ನು ನಮ್ಮ ಕಲಾವಿದರು  ಅನ್ಯಭಾಷಿಗರಿಗೆ ತೋರಿಸಿದ್ದಾರೆ. ಕನ್ನಡದ ಸೊಬಗನ್ನು ಹಿಂದಿಯ ಮೂಲಕ ತೋರಿಸಿದ್ದಾರೆ 

ಈಗ ಮತ್ತೊಂದು ಹೊಸ ಯೋಜನೆಯನ್ನು ನಮ್ಮ ಶ್ರೀ ಶಿವಕುಮಾರ ಕಲಾಸಂಘ ಹಾಕಿಕೊಂಡಿದೆ. ಶರಣರ ವಚನಗಳನ್ನು ಅನ್ಯಭಾಷೆಯ ಜನರಿಗೂ ಮುಟ್ಟಿಸಬೇಕು ಎಂದು. ಆ ಹಿನ್ನಲೆಯಲ್ಲಿ ಬಸವಣ್ಣನವರ 44 ವಚನಗಳನ್ನು ಹಿಂದಿ ಭಾಷೆಗೆ ಅನುವಾದ ಮಾಡಿಸಿ ಸಿ. ಅಶ್ವತ್ಥ್‍ರವರ ಸಂಗೀತವನ್ನು ಉಳಿಸಿಕೊಂಡು 24 ಜನ ನೃತ್ಯ ಕಲಾವಿದೆಯರು ಆ ವಚನಗಳಿಗೆ ಹೆಜ್ಜೆಯನ್ನು ಹಾಕುತ್ತಾರೆ. ಅದರ ಜೊತೆಗೆ  ಆ ವಚನ ಏನು ಹೇಳುತ್ತೆ ಅನ್ನೋದನ್ನು ಅವರ ಭಾವದಿಂದ, ಆಂಗಿಕ ಅಭಿನಯದಿಂದ ತೋರಿ ಸುತ್ತಾರೆ. ಈ ನೃತ್ಯ ನೋಡಿದಾಗ ಇಷ್ಟು ಚೆನ್ನಾಗಿ ಕನ್ನಡ ಇದೆಯಾ ಅಂತ ನಿಮಗೆ ಆಶ್ಚರ್ಯ ಆಗುತ್ತೆ ಎಂದರು. 

ಇಲ್ಲಿನ ಕನ್ನಡ ಸಂಘದ ಅಧ್ಯಕ್ಷ   ಕುಶಾಲ ಹೆಗಡೆ   ಅಧ್ಯಕ್ಷತೆ  ವಹಿಸಿದ್ದರು.  ಚಂದ್ರಕಾಂತ್ ಹಾರಕೂಡೆ ಕಾರ್ಯಕ್ರಮ  ಸಂಘಟಿಸಿದ್ದರು.

error: Content is protected !!