ಪತ್ರಕರ್ತರಿಂದ ಸಮಾಜದ ಸಂಕಷ್ಟಕ್ಕೆ ಮಿಡಿಯುವ ಕೆಲಸ

ಪತ್ರಕರ್ತರಿಂದ ಸಮಾಜದ ಸಂಕಷ್ಟಕ್ಕೆ ಮಿಡಿಯುವ ಕೆಲಸ

ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಶ್ಲ್ಯಾಘನೆ

ಹರಪನಹಳ್ಳಿ, ಜು.31- ಪತ್ರಕರ್ತರು ನೋವು, ನಲಿವುಗಳ ಜೊತೆಗೆ ಸಮಾಜದ ಸಂಕಷ್ಟಕ್ಕೆ ಮಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ತೆಗ್ಗಿನಮಠ ಸಂಸ್ಥಾನದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಜ್ಞಾನಗಂಗೋತ್ರಿ ಆವರಣದಲ್ಲಿ ಎಸ್‍ಸಿಎಸ್ ಇನ್‍ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದಿಂದ ಪತ್ರಿಕಾ ದಿನಾಚರಣೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ವಿಜ್ಞಾನ ಎಷ್ಟೇ ಮುಂದುವರೆದರೂ ಕೂಡ ಪತ್ರಿಕೆ ಓದು ಮಾತ್ರ ನಿರಂತರವಾಗಿದೆ. ದಿನನಿತ್ಯದ ಚಟುವಟಿಕೆ ಆರಂಭವಾಗುವುದೇ ಪತ್ರಿಕೆಯಿಂದ ಎಂದ ಅವರು ಜಗತ್ತಿನ, ದೇಶದ, ರಾಜ್ಯ ಒಳಗೊಂಡು ಸ್ಥಳೀಯ ಘಟನೆಗಳನ್ನು ವರದಿಗಳಿಂದ ತಿಳಿಯಬಹುದಾಗಿದೆ. ನಿಷ್ಪಕ್ಷಪಾತ ವರದಿಗೆ ಸಮಾಜದಲ್ಲಿ ಗೌರವವಿದ್ದು, ಪ್ರಸ್ತುತ ವಿದ್ಯಾರ್ಥಿಗಳು ತಮ್ಮ ಮೆದುಳಿಗೆ ಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದರು.

ಶಾಸಕರಾದ  ಎಂ.ಪಿ.ಲತಾ ಮಲ್ಲಿಕಾರ್ಜುನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾಷಾ ಜ್ಞಾನ, ಪ್ರಚಲಿತ ಮಾಧ್ಯಮವಾಗಿದ್ದು, ಉತ್ತಮ ಮಾಧ್ಯಮ ಪತ್ರಿಕಾ ಮಾಧ್ಯಮ ಆಗಿದೆ. ಪತ್ರಿಕೆಗಳ ಸೇವೆ ಅಪಾರವಾಗಿದ್ದು, ಹಿಂದಿನ ಪತ್ರಿಕಾ ಮೌಲ್ಯಗಳು ಇಂದು ಇಲ್ಲದಂತಾಗಿ ವ್ಯವಹಾರವಾಗಿ ಪರಿಣಮಿಸಿದೆ. ಸಮಾಜದ ಅಂಕು, ಡೊಂಕುಗಳನ್ನು ತಿದ್ದುವ ಕೆಲಸ ಪತ್ರಕರ್ತರಿಂದ ಆಗಬೇಕು. ಅದು ವಸ್ತುನಿಷ್ಟ ವರದಿಗಾರಿಕೆಯಿಂದ ಸಮಾಜವನ್ನು ಸುಧಾರಿಸುವ ಕೆಲಸ ಮಾಡುವಂತಾಗಬೇಕು ಎಂದರು.

ಪತ್ರಿಕಾ ಭವನದ ತಾತ್ಕಾಲಿಕ ದುರಸ್ತಿಗೆ ಪುರಸಭೆಯಿಂದ ಕ್ರಮ ವಹಿಸಲು ಮುಖ್ಯಾಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದ ಅವರು, ಪುರಸಭೆಯಿಂದ ಸ್ಥಳ ಸಿಕ್ಕಲ್ಲಿ ಹಂತ ಹಂತವಾಗಿ ಎಲ್ಲಾ ಪತ್ರಕರ್ತರಿಗೂ ನಿವೇಶನ ನೀಡಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಡಿವೈಎಸ್‍ಪಿ ವಿ.ಎಸ್.ಹಾಲಮೂರ್ತಿ ಮಾತನಾಡಿ ಸಂವಿಧಾನದಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗವನ್ನು ಸರಿಪಡಿಸಲು ಪತ್ರಿಕಾರಂಗ ಒಂದಾಗಿದ್ದು, ಮುದ್ರಣ ಮಾಧ್ಯಮದಲ್ಲಿ ತನ್ನದೇಯಾದ ಛಾಪನ್ನು ಮೂಡಿಸಿದ್ದು, ಭ್ರಷ್ಟಾಚಾರದಂತಹ ನಿರ್ಮೂಲನೆಗೆ ಸಕ್ರಿಯ ಪತ್ರಕರ್ತರ ಅಗತ್ಯವಿದೆ ಎಂದರು.

ಮುಖ್ಯಾಧಿಕಾರಿ ಶಿವಕುಮಾರ ಎರಗುಡಿ ಮಾತನಾಡಿ,  ಇಂದಿನ ಸಾಮಾಜಿಕ ಜಾಲತಾಣ ಬಳಕೆಯಿಂದ ಹೆಚ್ಚು ಉಪಯೋಗದ ಬದಲು ಅಪಾಯ ಹೆಚ್ಚಾಗುತ್ತಿದೆ. ಇದು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಮಕ್ಕಳ ಕೈಗೆ ಮೊಬೈಲ್, ಲ್ಯಾಪ್‍ಟಾಪ್ ಹಾಗೂ ಟ್ಯಾಬ್‍ಗಳನ್ನು ಕೊಡುವ ಬದಲು ಉತ್ತಮ ಪುಸ್ತಕ ಸ್ನೇಹಿಯಾಗುವಂತೆ ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್ ಮಾತನಾಡಿ, ಸಮಾಜವನ್ನು ತಿದ್ದಿ ಸರಿದಾರಿಗೆ ತರುವ ಕೆಲಸವನ್ನು ಪತ್ರಿಕಾ ರಂಗ ಮಾಡುತ್ತಿದ್ದು  ಹರಪನಹಳ್ಳಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದರು.

ಟಿಎಂಎಇ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ, ಕಾನಿಪ ಜಿಲ್ಲಾ ಅಧ್ಯಕ್ಷ ಪಿ.ಸತ್ಯನಾರಾಯಣ, ಮಾಜಿ ಪುರಸಭೆ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಲಾಟಿ ದಾದಾಪೀರ್, ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ್, ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ನಾಯಕ್, ಭೀಮರಾವ್, ಜಿಲ್ಲಾ ಸಮಿತಿ ಸದಸ್ಯರಾದ ಸಿ.ನಾಗರಾಜನಾಯ್ಕ, ಟಿ.ಬಿ.ರಾಜು, ತಾಲ್ಲೂಕು ಅಧ್ಯಕ್ಷ ತಳವಾರ ಚಂದ್ರಪ್ಪ, ಕಾರ್ಯದರ್ಶಿ ಹೆಚ್.ದೇವೆಂದ್ರಪ್ಪ, ಖಜಾಂಚಿ ಸುರೇಶ್ ಮಂಡಕ್ಕಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ಬಿ.ರಾಮಪ್ರಸಾದ ಗಾಂಧಿ, ಕೆ.ಉಚ್ಚೆಂಗೆಪ್ಪ, ಪಿ.ಕರಿಬಸಪ್ಪ, ಬಿ.ಮಾಧವರಾವ್, ಕೆ.ಬಸವರಾಜ, ತಳವಾರ ರಾಜು ಸೇರಿದಂತೆ ಇತರರು ಇದ್ದರು.

error: Content is protected !!