ಮಲೇಬೆನ್ನೂರಿನಲ್ಲಿ ಶೇ.83.40 ರಷ್ಟು ಮತದಾನ

ಮಲೇಬೆನ್ನೂರಿನಲ್ಲಿ ಶೇ.83.40 ರಷ್ಟು ಮತದಾನ

ಮಲೇಬೆನ್ನೂರು, ಮೇ 10- ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬುಧವಾರ ನಡೆದ ಹರಿಹರ ವಿಧಾನಸಭಾ ಕ್ಷೇತ್ರದ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಎಲ್ಲಾ ಕಡೆ ಬಿರುಸಿನ ಮತದಾನ ನಡೆಯಿತು. ಮಲೇಬೆನ್ನೂರು ಪಟ್ಟಣದಲ್ಲಿ 17490 ಮತದಾರರ ಪೈಕಿ 14581 ಮತದಾರರು ಮತದಾನ ಮಾಡಿದ್ದು, ಶೇ.83.40 ರಷ್ಟು ಮತದಾನ ನಡೆದಿದೆ.

ಪಟ್ಟಣದಲ್ಲಿ ಈ ಬಾರಿ 21 ಮತಗಟ್ಟೆ
ಗಳನ್ನು ಸ್ಥಾಪಿಸಲಾಗಿತ್ತು. ಮತಗಟ್ಟೆ ಸಂಖ್ಯೆ 193 ರಲ್ಲಿ ಅತಿ ಹೆಚ್ಚು ಶೇ.89.81 ರಷ್ಟು ಮತದಾನವಾಗಿದ್ದರೆ, ಮತಗಟ್ಟೆ ಸಂಖ್ಯೆ 196 ರಲ್ಲಿ ಶೇ.69 ರಷ್ಟು ಕಡಿಮೆ ಮತದಾನವಾಗಿದೆ.

ಪುರಸಭೆ ಎದುರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಮತ್ತು ಆಶ್ರಯ ಕಾಲೋನಿಯ ಮತಗಟ್ಟೆಯಲ್ಲಿ ಮತಯಂತ್ರದ ಬ್ಯಾಟರಿ ಲೋ ಆಗಿದ್ದರಿಂದ ಸ್ವಲ್ಪ ಹೊತ್ತು ಮತದಾನಕ್ಕೆ ತೊಂದರೆ ಉಂಟಾಗಿ ಮತದಾರರು ಬಿಸಿಲಿನಲ್ಲಿ ಕಾಯುವಂತಾಯಿತು. ಬ್ಯಾಟರಿ ಬದಲಾವಣೆ ಮಾಡಿದ ನಂತರ ಎರಡೂ ಕಡೆ ಮತ್ತೆ ಮತದಾನ ನಡೆಯಿತು.

ಪಟ್ಟಣದ ಎರಡು ವಾರ್ಡ್‌ಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಪೊಲೀಸರು ಮಧ್ಯ ಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಈ ಎರಡೂ ವಾರ್ಡ್‌ಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು ಎಂದು ಪಿಎಸ್ಐ ಪ್ರಭು ಕೆಳಗಿಮನಿ ತಿಳಿಸಿದರು.

ಇದನ್ನು ಹೊರತು ಪಡಿಸಿದರೆ, ಇನ್ನುಳಿದ ಕಡೆ ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ಶಾಂತಿಯುತ ಮತದಾನ ನಡೆದಿದೆ. ಮಲೇಬೆನ್ನೂರು ಸೇರಿದಂತೆ ಎಲ್ಲಾ ಮತಗಟ್ಟೆಗಳಿಗೆ ಬಿಜೆಪಿ ಅಭ್ಯರ್ಥಿ ಬಿ.ಪಿ.ಹರೀಶ್, ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್.ಶಿವಶಂಕರ್, ಕಾಂಗ್ರೆಸ್ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ಭೇಟಿ ನೀಡಿ, ಕಾರ್ಯಕರ್ತರಿಂದ ಮತದಾನದ ವಿವರ ಪಡೆದರು.

ಜಿಗಳಿಯಲ್ಲಿ 2996ಕ್ಕೆ 2509, ಕುಂಬಳೂರಿನಲ್ಲಿ 3080ಕ್ಕೆ 2745, ನಿಟ್ಟೂರಿನಲ್ಲಿ 1907ಕ್ಕೆ 1569, ಬೂದಿಹಾಳ್‌ನಲ್ಲಿ 1215ಕ್ಕೆ 1068, ಭಾನುವಳ್ಳಿಯಲ್ಲಿ 6984ಕ್ಕೆ 6145, ಹೊಳೆಸಿರಿಗೆರೆಯಲ್ಲಿ 4579ಕ್ಕೆ 3814, ಕೆ.ಎನ್.ಹಳ್ಳಿಯಲ್ಲಿ 2698ಕ್ಕೆ 2320, ಕೊಕ್ಕನೂರಿನಲ್ಲಿ 521ಕ್ಕೆ 453, ಜಿ.ಬೇವಿನಹಳ್ಳಿಯಲ್ಲಿ 2088ಕ್ಕೆ 1826, ಕೊಮಾರನಹಳ್ಳಿಯಲ್ಲಿ 1424ಕ್ಕೆ 1204 ಮತದಾರರು ಮತದಾನ ಮಾಡಿದ್ದಾರೆ.

ಎಲ್ಲಾ ಮತಗಟ್ಟೆಗಳಿಗೆ ಪೊಲೀಸರ ಜೊತೆ ವಿವಿಧ ಪಡೆಗಳ ಸೈನಿಕರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

error: Content is protected !!