ರಾಜ್ಯದಲ್ಲಿ ಕಾಂಗ್ರೆಸ್ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ

ರಾಜ್ಯದಲ್ಲಿ ಕಾಂಗ್ರೆಸ್ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ

ಮಾಜಿ ಸಂಸದ ಅವಿನಾಶ್ ಪಾಂಡೆ

ದಾವಣಗೆರೆ, ಮೇ 1- ಎಐಸಿಸಿ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ಹರಿಹರಕ್ಕೆ ಆಗಮಿಸಲಿದ್ದು, ಮಧ್ಯಾಹ್ನ 1 ಗಂಟೆಗೆ ಗಾಂಧಿ ಮೈದಾನದಲ್ಲಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳೂ, ಮಾಜಿ ಸಂಸದರೂ ಆದ ಅವಿನಾಶ್ ಪಾಂಡೆ ತಿಳಿಸಿದ್ದಾರೆ.

ಸೋಮವಾರ ಬಾಪೂಜಿ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಏಳೂ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದರು.

ಬಿಜೆಪಿಯ 40 ಪರ್ಸೆಂಟ್ ಭ್ರಷ್ಟಾಚಾರಕ್ಕೆ ಬೇಸತ್ತಿರುವ ರಾಜ್ಯದ ಜನತೆ ಸರ್ಕಾರ ಬದಲಿಸಲು ನಿರ್ಧರಿಸಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ಬೆಲೆ ಏರಿಕೆಯಿಂದಾಗಿ ಬಡವರು, ಮಧ್ಯಮ ವರ್ಗದವರು, ರೈತರು ಜೀವನ ನಡೆಸುವುದೇ ಕಷ್ಟವಾಗಿದೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ ಸೇರಿದಂತೆ ಬಿಜೆಪಿ ತೆಗೆದುಕೊಂಡ ನಿರ್ಧಾರಗಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿವೆ ಎಂದು ಹೇಳಿದರು.

ಈಗಾಗಲೇ ಜನತೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡುತ್ತಾ, ಹಲವು ಯೋಜನೆಗಳನ್ನು ಘೋಷಿಸಿದೆ. ಖಂಡಿತವಾಗಿಯೂ ಅವುಗಳನ್ನು ಈಡೇರಿಸಲಾಗುವುದು.  ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವುದು ಬರೀ ಸುಳ್ಳಿನ ಘೋಷಣೆಗಳು. 

ಜನರ ಖಾತೆಗೆ 15 ಲಕ್ಷ ರೂ. ನೀಡುವುದು, ಉದ್ಯೋಗ ಕಲ್ಪಿಸುವುದು ಸೇರಿದಂತೆ ಅವರ ಸುಳ್ಳು ಭರವಸೆಗಳ ಬಗ್ಗೆ ಜನತೆಗೆ ಅರಿವಿದೆ ಎಂದು ಹೇಳಿದರು.

ಎಸ್ಸೆಸ್‌ಗೆ ಸೆಲ್ಯೂಟ್ : 92ನೇ ವರ್ಷದಲ್ಲೂ ಶಾಮನೂರು ಶಿವಶಂಕರಪ್ಪ ನವರು ಚುನಾವಣೆಯಲ್ಲಿ ಸ್ಪರ್ಧಿಸಿ, ಅತ್ಯುತ್ಸಾಹದಿಂದ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷಕ್ಕಾಗಿ ದುಡಿಯುವ ಅವರಿಗೆ ನನ್ನದೊಂದು ಸೆಲ್ಯೂಟ್ ಎಂದು ಪಾಂಡೆ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್. ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಕೆ.ವಿ. ಗೌತಮ್, ಕೋ ಆರ್ಡಿನೇಟರ್ ರಮೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಈ ಸಂದರ್ಭದಲ್ಲಿದ್ದರು.

error: Content is protected !!