ದಾವಣಗೆರೆ, ಮೇ 27- ಕೊರೊನಾದಿಂದ ಮೃತ ಪಟ್ಟ ಶವವನ್ನು ಹೊತ್ತ ಆಂಬ್ಯುಲೆನ್ಸ್ ಚಾಲನೆ ಮಾಡುತ್ತಾ ಚಿತಾಗಾರದ ವರೆಗೆ ಕೊಂಡೊಯ್ಯುವ ಮೂಲಕ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತೊಮ್ಮೆ ಮಾನವೀಯತೆ ಮೆರೆಯುವ ಕಾರ್ಯ ಮಾಡಿದ್ದಾರೆ.
ಕಳೆದ ಹತ್ತು ದಿನಗಳಿಂದ ಹೊನ್ನಾಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಘ ಪರಿವಾರದ ಕಾರ್ಯಕರ್ತ ಸಾಸ್ವೇಹಳ್ಳಿ ರಂಗಪ್ಪ ಎಂಬುವವರ ತಾಯಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು.
ಮೃತದೇಹವನ್ನು ಆತನ ಸ್ವಗ್ರಾಮಕ್ಕೆ ಕೊಂಡೊ ಯ್ಯಲು ಸಂಬಂಧಿಕರು ಆಂಬ್ಯುಲೆನ್ಸ್ಗಾಗಿ ಹುಡುಕಾಡಿ ದ್ದಾರೆ. ಆದರೆ, ಈ ಸಂದರ್ಭದಲ್ಲಿ ಅಲ್ಲಿ ಬೇರೆ ಯಾವ ಆಂಬ್ಯುಲೆನ್ಸ್ಗಳು ಇರಲಿಲ್ಲ. ಈ ವೇಳೆ ಅಲ್ಲಿಯೇ ಇದ್ದ ರೇಣುಕಾಚಾರ್ಯ ನಿನ್ನೆಯಷ್ಟೆ ತಾಲ್ಲೂಕು ಆಸ್ಪತ್ರೆಗೆ ತಾವೇ ನೀಡಿದ್ದ ಆಂಬ್ಯುಲೆನ್ಸ್ಏರಿ ತಾವೇ ಚಾಲನೆ ಮಾಡಿಕೊಂಡು ಹೋಗಿ ಅವರ ಮನೆಗೆ ಶವ ತಲುಪಿಸಿದ್ದಾರೆ. ಅಲ್ಲದೇ, ಮೃತನ ಕುಟುಂಬಸ್ಥರಿಗೆ ವೈಯಕ್ತಿಕ ವಾಗಿ ರೂ. 15 ಸಾವಿರ ರೂ. ಸಹಾಯ ಮಾಡಿದ್ದಾರೆ.
ನಿನ್ನೆಯಷ್ಟೆ ಹೊನ್ನಾಳಿ ತಾಲ್ಲೂಕು ಆಸ್ಪತ್ರೆಗೆ ನಾಲ್ಕು ಆಂಬ್ಯುಲೆನ್ಸ್ಗಳನ್ನು ಕೊಡುಗೆಯಾಗಿ ನೀಡಿದ್ದ ಅವರು, ಇಂದು ಬೆಳಿಗ್ಗೆಯಿಂದಲೂ ತಾಲ್ಲೂಕು ಆಸ್ಪತ್ರೆಯಲ್ಲಿಯೇ ಇದ್ದು, ಸೋಂಕಿತರ ಆರೋಗ್ಯ ವಿಚಾರಿಸುವುದು ಹಾಗೂ ಅಲ್ಲಿ ಅವರಿಗೆ ಸೂಕ್ತ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ.
ಈ ಹಿಂದೆ ಸೋಂಕಿತರಿಗೆ ವಿವಿಧ ಬಗೆಯ ಊಟ ನೀಡಿದ್ದ ರೇಣುಕಾಚಾರ್ಯ, ಮೊನ್ನೆಯಷ್ಟೇ ಕೋವಿಡ್ ಕೇರ್ ಸೆಂಟರ್‌ನಲ್ಲಿ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ತಾವೂ ಹೆಜ್ಜೆ ಹಾಕಿ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಿದ್ದರು.