ದಾವಣಗೆರೆ ಅರ್ಬನ್ ಬ್ಯಾಂಕ್‌ನಿಂದ ಸಾಲ ಪಡೆದವರಿಗೆ ಬಡ್ಡಿ ರಿಯಾಯ್ತಿ

ದಾವಣಗೆರೆ ಅರ್ಬನ್ ಬ್ಯಾಂಕ್‌ನಿಂದ ಸಾಲ ಪಡೆದವರಿಗೆ ಬಡ್ಡಿ ರಿಯಾಯ್ತಿ - Janathavaniದಾವಣಗೆರೆ, ಮೇ 27- ತನ್ನಲ್ಲಿ ಸಾಲ ಪಡೆದ ಗ್ರಾಹಕರಿಗೆ ಮೂರು ತಿಂಗಳುಗಳ ಅವಧಿಗೆ ಮಾತ್ರ ಬಡ್ಡಿಯಲ್ಲಿ ಶೇ.1ರಂತೆ ರಿಯಾಯಿತಿ ನೀಡಲು ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿರ್ಧರಿಸಿದೆ.

ಪ್ರಸ್ತುತ ಮೇ ಮತ್ತು ಬರುವ ಜೂನ್ ಹಾಗೂ ಜುಲೈ ಮಾಹೆಗಳ ಮೂರು ತಿಂಗಳ ಕಾಲ ಅಸಲು ಮತ್ತು ಬಡ್ಡಿಯನ್ನು ಆಯಾ ತಿಂಗಳ 10ನೇ ತಾರೀಖಿನೊಳಗೆ ಕಟ್ಟಿದ ಗ್ರಾಹಕರಿಗೆ ಮಾತ್ರ ವಿಶೇಷವಾಗಿ ಬಡ್ಡಿಯಲ್ಲಿ ಶೇ.1ರಂತೆ ರಿಯಾಯಿತಿ ನೀಡಲಾಗುತ್ತದೆ. 

 ಕೊರೊನಾ ಸೋಂಕು ಕಾರಣದಿಂದ ಆಗಿರುವ ಲಾಕ್ ಡೌನ್ ಪರಿಣಾಮ ವ್ಯವಹಾರಗಳು ಸ್ಥಗಿತಗೊಂಡಿದ್ದು, ಇದರಿಂದಾಗಿ ಸಾಲ ಪಡೆದ ಗ್ರಾಹಕರು ಪರದಾಡುವಂತಾಗಿದೆ. ಆ ಗ್ರಾಹಕರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಬ್ಯಾಂಕಿನ ಸಭಾಂಗಣದಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಮಹತ್ವದ ಈ ತೀರ್ಮಾನ ಕೈಗೊಳ್ಳಲಾಯಿತು.

ಸಾಲ ಪಡೆದ ಗ್ರಾಹಕರು ಲಿಖಿತ ಮೂಲಕ ಮಾಡಿಕೊಂಡ ಮನವಿ ಮೇರೆಗೆ ಬ್ಯಾಂಕಿಗೆ ಆಗಬಹುದಾದ ನಷ್ಟವನ್ನು ಪರಿಗಣಿಸುವುದರ ಜೊತೆಗೆ, ಸಂದಿಗ್ಧ ಪರಿಸ್ಥಿತಿಯಲ್ಲಿರುವ ಸಾಲ ಪಡೆದ ಗ್ರಾಹಕರಿಗೆ ಸಹಕರಿಸುವ ದೃಷ್ಟಿಯಿಂದ ಈ ತೀರ್ಮಾನ ಮಾಡಲಾಗಿದೆ ಎಂದು ಬಕ್ಕೇಶಪ್ಪ ತಿಳಿಸಿದ್ದಾರೆ.

ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲೂ ಇದೇ ರೀತಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಿದ್ದನ್ನು ಮೆಲುಕು ಹಾಕಿದ ಅವರು, ಸಾಲ ಪಡೆದ ಗ್ರಾಹಕರಿಗೆ ಸ್ಪಂದಿಸುತ್ತಿರುವುದು ಬಹುಶಃ ಸಹಕಾರಿ ಬ್ಯಾಂಕುಗಳಲ್ಲೇ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಪ್ರಪ್ರಥಮವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಬಕ್ಕೇಶಪ್ಪ, ಈ ಕ್ರಮ ಗ್ರಾಹಕರು ಮತ್ತು ಬ್ಯಾಂಕ್ ನಡುವಿನ ಸಂಬಂಧವನ್ನು ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಂಕಿನ ಉಪಾಧ್ಯಕ್ಷ ಅಂದನೂರು ಮುಪ್ಪಣ್ಣ,  ನಿರ್ದೇಶಕರುಗಳಾದ ಬಿ.ಸಿ.ಉಮಾಪತಿ, ಮತ್ತಿಹಳ್ಳಿ ವೀರಣ್ಣ, ಪಲ್ಲಾಗಟ್ಟೆ ಶಿವಾನಂದಪ್ಪ, ಅಜ್ಜಂಪುರ ಶೆಟ್ರು ವಿಜಯಕುಮಾರ್, ಎಂ. ಚಂದ್ರಶೇಖರ್, ಇ.ಎಂ.ಮಂಜುನಾಥ, ನಲ್ಲೂರು ಎಸ್. ರಾಘವೇಂದ್ರ, ವಿ. ವಿಕ್ರಂ,   ವೃತ್ತಿಪರ ನಿರ್ದೇಶಕರುಗಳಾದ ಮುಂಡಾಸ ವೀರೇಂದ್ರ, ಮಲ್ಲಿಕಾರ್ಜುನ ಕಣವಿ,   ವಿಶೇಷ ಆಹ್ವಾನಿತರಾದ ಎಂ. ದೊಡ್ಡಪ್ಪ, ಬೆಳ್ಳೂಡಿ ಮಂಜುನಾಥ್ ಸಭೆಯಲ್ಲಿ ಉಪಸ್ಥಿತರಿದ್ದರು.

ಬ್ಯಾಂಕಿನ ನಿರ್ವಹಣಾ ಮಂಡಳಿ ಅಧ್ಯಕ್ಷ ಟಿ.ಎಸ್. ಜಯರುದ್ರೇಶ್, ಸದಸ್ಯರುಗಳಾದ ದೇವರಮನೆ ಶಿವಕುಮಾರ್, ಕಂಚಿಕೆರೆ ಮಹೇಶ್, ಬೆಳಗಾವಿ ಬಸವರಾಜಪ್ಪ, ಜಂಬಗಿ ರಾಧೇಶ್, ಕೆ.ಕೊಟ್ರೇಶ್ ಅವರುಗಳು ಉಪಸ್ಥಿತರಿದ್ದರು.

ಪ್ರಧಾನ ವ್ಯವಸ್ಥಾಪಕ ಡಿ.ವಿ. ಆರಾಧ್ಯಮಠ ಅವರು ವಿಷಯ ಮಂಡಿಸಿದರು.

error: Content is protected !!