ಹಳ್ಳಿಗಳಲ್ಲಿ ಕಂಟೈನ್‌ಮೆಂಟ್ ವಲಯ

ಗ್ರಾಮೀಣ ಸೋಂಕು ನಿವಾರಣೆಗೆ ಕ್ರಮ: ಇಂದು ಗ್ರಾ.ಪಂ. ಸದಸ್ಯರ ಜೊತೆ ಸಿ.ಎಂ. ಚರ್ಚೆ

ಬೆಂಗಳೂರು, ಮೇ 25 – ಬೆಂಗ ಳೂರು ಸೇರಿದಂತೆ, ನಗರ ಪ್ರದೇಶಗಳಲ್ಲಿ ಸೋಂಕಿನ ಸರಪಳಿ ಕಡಿತಗೊಳಿಸುವಲ್ಲಿ ಯಶಸ್ವಿ ಹಾದಿ ತುಳಿದಿರುವ ಸರ್ಕಾರ ಇದೀಗ ಗ್ರಾಮೀಣ ಪ್ರದೇಶದ ಹರಡಿರುವ ಸೋಂಕು ನಿವಾರಣೆಗೆ ಮುಂದಾಗಿದೆ. 

ಯಾವ ಗ್ರಾಮಗಳಲ್ಲಿ ಹೆಚ್ಚು ಸೋಂಕು ಕಂಡು ಬಂದಿದೆಯೋ ಆ ಗ್ರಾಮವನ್ನು ಕಂಟೈನ್‌ಮೆಂಟ್‌ ವಲಯ ಎಂದು ಪರಿಗಣಿಸಿ, ಬಿಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸರ್ಕಾರ ಸೂಚಿಸಿದೆ. 

ಅಷ್ಟೇ ಅಲ್ಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವತಃ ತಾವೇ ನಾಳೆ ಸೋಂಕು ಹೆಚ್ಚಿರುವ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರೊಟ್ಟಿಗೆ ಚರ್ಚೆ ಮಾಡಲಿದ್ದಾರೆ. 

ಸೋಂಕು ಹೆಚ್ಚಿರುವ ಪ್ರದೇಶದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುವ ಮುಖ್ಯಮಂತ್ರಿಯವರು ಕೆಲವು ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ. 

ಗ್ರಾಮಗಳಲ್ಲಿ ಸೋಂಕು ಹೆಚ್ಚಲು ಕಾರಣವೇನು ಎಂಬುದರ ಬಗ್ಗೆ ಸ್ಥಳೀಯರಿಂದಲೇ ಮಾಹಿತಿ ಪಡೆಯುವ ಮುಖ್ಯಮಂತ್ರಿಯವರು ಇದನ್ನು ತಡೆಯಲು ಸ್ಥಳೀಯ ಮಟ್ಟದಲ್ಲಿ ಕೈಗೊಂಡಿರುವ ಕಾರ್ಯಕ್ರಮದ ಬಗ್ಗೆಯು ಮಾಹಿತಿ ಪಡೆಯಲಿದ್ದಾರೆ. 

ಅಲ್ಲದೆ ಸೋಂಕು ಕಂಡು ಬಂದ ವ್ಯಕ್ತಿಯನ್ನು ತಕ್ಷಣವೇ ಕೋವಿಡ್ ಕೇರ್ ಸೆಂಟರ್‍ಗಳಿಗೆ ಸ್ಥಳಾಂತರಿಸಿ, ಸೋಂಕಿತರಿಗೆ ಅಗತ್ಯ ಕಂಡು ಬಂದಲ್ಲಿ ಆಸ್ಪತ್ರೆ ಚಿಕಿತ್ಸೆ ಕಲ್ಪಿಸಿ ಇಲ್ಲದಿದ್ದರೆ, ಕೋವಿಡ್ ಕೇಂದ್ರದಲ್ಲೇ ಆಹಾರ ಮತ್ತು ಔಷಧಿ ವ್ಯವಸ್ಥೆ ಮಾಡಿ ಎಂದು ಪಂಚಾಯ್ತಿ ಆಡಳಿತಕ್ಕೆ ಆದೇಶಿಸಲಿದ್ದಾರೆ. 

ಸೋಂಕಿತ ಕುಟುಂಬದವರು ಮತ್ತು ಅವರ ಹತ್ತಿರದವರನ್ನು ಪರೀಕ್ಷೆಗೆ ಒಳಪಡಿಸಿ, ಆ ಗ್ರಾಮದಲ್ಲಿ ಶುಚಿತ್ವಕ್ಕೆ ಹೆಚ್ಚು ಒತ್ತು ಕೊಡಿ. ಮುನ್ನೆಚ್ಚರಿಕೆಯಾಗಿ ಗ್ರಾಮಸ್ಥರಿಗೆ ರೋಗ ನಿರೋಧಕ ಶಕ್ತಿ ಬರುವ ಔಷಧಿಗಳನ್ನು ನೀಡುವಂತೆ ವೈದ್ಯರಿಗೆ ತಿಳಿಸಲಿದ್ದಾರೆ. 

ಸೋಂಕಿನ ಹಿನ್ನೆಲೆಯಲ್ಲಿ 2000ಕ್ಕೂ ಹೆಚ್ಚು ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ನೇಮಕಗೊಂಡವ ರನ್ನು ಗ್ರಾಮೀಣ ಸೇವೆಗೆ ನಿಯೋಜಿಸಲಾಗುವುದು. 

ಕೊರೊನಾ ಸೋಂಕು ನಿವಾರಣೆಗಾಗಿ ಇದುವರೆಗೂ ಹಿರಿಯ ಅಧಿಕಾರಿಗಳು ಜಿಲ್ಲಾಡಳಿತದ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದ ಮುಖ್ಯಮಂತ್ರಿಯವರು ಗ್ರಾಮೀಣ ಮಟ್ಟದಲ್ಲೂ ವಿಡಿಯೋ ಕಾನ್ಫರೆನ್ಸ್ ಮಾಡುವುದರ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಖುದ್ದಾಗಿ ಆಲಿಸಲಿದ್ದಾರೆ. 

error: Content is protected !!