ದೇವನಗರಿಯಲ್ಲಿ ರಾಗ ರಂಗಿನ ರಂಗು ರಂಗೋಲಿ…

ದೇವನಗರಿಯಲ್ಲಿ ರಾಗ ರಂಗಿನ ರಂಗು ರಂಗೋಲಿ…

ದೇವನಗರಿಯಲ್ಲಿ ರಾಗ ರಂಗಿನ ರಂಗು ರಂಗೋಲಿ... - Janathavani

ಬಣ್ಣದಾಟದಲ್ಲಿ ಮೀಯ್ಯುತ್ತಾ, ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ ಜನತೆ

ದಾವಣಗೆರೆ, ಮಾ.14- ನಗರದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.  ಬೆಳಿಗ್ಗೆಯಿಂದ ಮಧ್ಯಾಹ್ನ 1 ಗಂಟೆವರೆಗೂ ನಗರ ಬಣ್ಣಮಯವಾಗಿತ್ತು.

ಯುವಕ, ಯುವತಿಯರು ಪರಸ್ಪರ ಹೋಳಿ ಶುಭಾಶಯ ಹೇಳುತ್ತಾ, ಬಣ್ಣ ಹಚ್ಚುತ್ತಾ ಸಂಭ್ರಮಿಸಿದರು ಮಕ್ಕಳು ಪಿಚಕಾರಿಯಲ್ಲಿ ಬಣ್ಣದ ನೀರು ಎರಚುತ್ತಾ ಕುಣಿದಾಡಿದರು.

ಜಾಲಿನಗರ, ನಿಟುವಳ್ಳಿ, ವಿದ್ಯಾನಗರ, ವಿನೋಬನಗರ, ಸರಸ್ವತಿ ನಗರ, ಭಗತ್ ಸಿಂಗ್ ನಗರ, ಕೆ.ಬಿ. ಬಡಾವಣೆ, ಎಂ.ಸಿ. ಕಾಲೋನಿ, ಪಿ.ಜೆ. ಬಡಾವಣೆ ಸೇರಿದಂತೆ, ವಿವಿಧ ಬಡಾವಣೆಗಳಲ್ಲಿ ರಂಗಿನಾಟ ಹೆಚ್ಚಾಗಿತ್ತು.

ಮನೆಗಳ ಮುಂದೆ ಬಣ್ಣದಲ್ಲಿ ಮೀಯ್ಯುತ್ತಾ, ಸ್ನೇಹಿತರಿಗೆ ಬಣ್ಣ ಹಚ್ಚಿದ ಯುವ ಪಡೆ ನಂತರ ಬರುತ್ತಿದ್ದುದು ರಾಂ ಅಂಡ್ ಕೋ ವೃತ್ತದ ಕಡೆಗೆ. ಈ ವೃತ್ತವಂತೂ ಅಕ್ಷರಶಃ ಬಣ್ಣದಿಂದ ತುಂಬಿತ್ತು. ಒಬ್ಬರನ್ನೊಬ್ಬರು ಗುರುತು ಹಿಡಿಯದಷ್ಟು ಬಣ್ಣದ ಮುಖಗಳು.

ಯುವಕರು ಡಿಜೆ ನೃತ್ಯಕ್ಕೆ ಕುಣಿದು ಕುಪ್ಪಳಿಸಲೆಂದೇ ಬಂದರೆ, ಪೋಷಕರು ತಮ್ಮ ಮಕ್ಕಳಿಗೆ ತೋರಿಸಲು ಹಾಗೂ ತಾವೂ ನೋಡಿ ಸಂಭ್ರಮಿಸಲು ಆಗಮಿಸುತ್ತಿದ್ದರು. ಮಕ್ಕಳೊಂದಿಗೆ ಇಡೀ ಕುಟುಂಬಗಳೂ ಬಣ್ಣದಾಟ ನೋಡಲು ಆಗಮಿಸುತ್ತಿದ್ದುದು ವಿಶೇಷವಾಗಿತ್ತು.

ಪೋಷಕರು ಚಿಕ್ಕ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿತ ತೋರಿಸಲಾಗುತ್ತಿತ್ತು. ಇನ್ನು ಕೆಲವರಂತೂ ಮಕ್ಕಳನ್ನು ಮೇಲಕ್ಕೆ ಎಸೆದು ಹಿಡಿಯುತ್ತಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಬನಿಯನ್, ಶರ್ಟ್‌ಗಳನ್ನು ಪರಸ್ಪರ ಹರಿದುಕೊಂಡು ಮೇಲಿನ ವಿದ್ಯುತ್ ಲೈನ್‌ಗೆ ಎಸೆಯುತ್ತಿದ್ದರು. ಬಣ್ಣದಾಟದ ಗಲಾಟೆಯಲ್ಲಿ ಪುನೀತ್ ರಾಜ್ ಕುಮಾರ್, ಭಾವಚಿತ್ರಗಳೂ ರಾರಾಜಿಸಿದವು.

ಯುವತಿಯರಂತೂ ತಾವೇನು ಹುಡುಗರಿಗೆ ಕಡಿಮೆ ಇಲ್ಲ ಎಂಬಂತೆ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿದರು. ಹುಡುಗಿಯರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತಾದರೂ ತಮಗಿಷ್ಟ ಬಂದೆಡೆ ಕುಣಿದು ಕುಪ್ಪಳಿಸಿದರು. ಮಧ್ಯಾಹ್ನವಾಗುತ್ತಲೇ ಯುವಕರು ಚಾನಲ್ ಕಡೆ ಹಾಗೂ ಮನೆ ಕಡೆ ತೆರಳಿದರು. ಈ ವೇಳೆ ಪೊಲೀಸರು ತ್ರಿಬಲ್ ರೈಡಿಂಗ್ ವಾಹನಗಳನ್ನು ತಡೆದು ತಂಡ ಹಾಕುತ್ತಿದ್ದರು. ಕೆಲವು ಟ್ರಾಫಿಕ್ ಪೇದೆಗಳು ಮೊಬೈಲ್‌ಗಳಲ್ಲಿ ಬೈಕ್‌ಗಳ ಫೋಟೋ ತೆಗೆದುಕೊಳ್ಳುತ್ತಿದ್ದರು.

ರಾಂ ಅಂಡೇ ಕೋ ವೃತ್ತ ಸೇರಿದಂತೆ ಪ್ರಮುಖ ವೃತ್ತದಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದರು. ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ದಟ್ಟಣೆ ನಿಯಂತ್ರಿಸಿದರು.

ಹರ್ಬಲ್ ಹೋಳಿ: ಎಸ್.ಎಸ್. ಬಡಾವಣೆಯ ಎ ಬ್ಲಾಕ್​ನ ಮಹಿಳೆಯರು ಸೇರಿ ಮನೆಯಲ್ಲೇ ಸಿಗುವ ತರಕಾರಿ, ಸೊಪ್ಪು, ಹಣ್ಣು, ಮಜ್ಜಿಗೆ, ಮೊಸರಿನಿಂದ ನೈಸರ್ಗಿಕ ಬಣ್ಣವನ್ನು ತಯಾರಿಸಿ ಹೋಳಿ ಆಚರಿಸಿದರು.

ವಿವಿಧ ತರಕಾರಿ, ದಾಸವಾಳ, ಸೇಬು, ಕಲ್ಲಂಗಡಿ, ಆರೆಂಜ್, ಸೊಪ್ಪು, ಮೆಹಂದಿ, ಬೀಟ್​ರೂಟ್, ಕ್ಯಾರೆಟ್, ಕಡ್ಲೆ ಹಿಟ್ಟು, ಟೊಮೆಟೊ, ಅಕ್ಕಿ ಹಿಟ್ಟು, ಅಲೋವೆರಾ, ಮೊಸರು ಈ ಎಲ್ಲಾ ಪೇಸ್ಟ್​​ಗಳನ್ನು ಮಾಡಿ ನೈಸರ್ಗಿಕ ಬಣ್ಣ ಬಳಕೆ ಮಾಡಿದ್ದರು. ಈ ತಂಡ 12 ವರ್ಷಗಳಿಂದ ಕೆಮಿಕಲ್‌ರಹಿತ ಹೋಳಿ ಆಚರಣೆ ಮಾಡುತ್ತಿದೆ.

error: Content is protected !!