ಹರಿಹರ, ಮಾ. 14 – ನಗರದಲ್ಲಿ ಇದೇ ದಿನಾಂಕ 18 ರಿಂದ 22 ರವರೆಗೆ ನಡೆಯುವ ಗ್ರಾಮದೇವತೆ ಊರಮ್ಮ ದೇವಿ ಜಾತ್ರೆಯ ಅಂಗವಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ನಗರ ಸಭೆಯ ಸಭಾಂಗಣದಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಭೆಯನ್ನು ನಡೆಸಿ, ಹಬ್ಬಕ್ಕೆ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಶಿಸ್ತು ಬದ್ಧತೆಯಿಂದ ಕರ್ತವ್ಯ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದರು.
ನಂತರ ದೇವಸ್ಥಾನ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಚೌಕಿ ಮನೆ ಮುಂಭಾಗದಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನು ವೀಕ್ಷಿಸಿ ತ್ವರಿತವಾಗಿ ಕಾಮಗಾರಿಯನ್ನು ಮುಗಿಸುವಂತೆ ತಿಳಿಸಿದರು. ಹರಕೆ ಒಪ್ಪಿಸುವ ಸಮಯದಲ್ಲಿ ಭಕ್ತರಿಗೆ ಬಟ್ಟೆಗಳನ್ನು ಬದಲಿಸಲು ಪ್ರತ್ಯೇಕವಾದ ಸ್ಥಳ ನಿಗದಿ ಮಾಡುವಂತೆ ಸೂಚನೆ ನೀಡಿ ಹಬ್ಬಕ್ಕೆ ನಾಡಿನಾದ್ಯಂತಹ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಬ್ಬದ ಸಮಯದಲ್ಲಿ ಬರುವಂತಹ ಭಕ್ತರಿಗೆ ವಾಹನಗಳ ನಿಲುಗಡೆಗೆ, ಪಾರ್ಕಿಂಗ್ ಸ್ಥಳಗಳು, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಪೂರೈಕೆ, ಜೊತೆಗೆ ರೋಗಗಳು ಬಾರದಂತೆ ಪ್ರತಿಯೊಂದು ವಾರ್ಡ್ ಗಳು ಸ್ವಚ್ಚತೆಯಿಂದ ಇರುವಂತೆ ನೋಡಿಕೊಳ್ಳಲು ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಯವರಿಗೆ ತಿಳಿಸಿದರು.
ನಂತರ ಡಿ.ಆರ್.ಎಂ. ಪ್ರೌಢ ಶಾಲೆಗೆ ಭೇಟಿ ಕೊಟ್ಟು ಶಾಲೆಯ ಸ್ಥಳವನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಕಟ್ಟಡ ತೆರವು ಗೊಳಿಸುವುದಕ್ಕೆ ದಾಖಲೆಗಳನ್ನು ಸಿದ್ದತೆ ಮಾಡಿಕೊಳ್ಳಲು ಸೂಚನೆ ನೀಡಿದರು.
ಈ ವೇಳೆ ನಗರ ಸಭೆ ಉಪಾಧ್ಯಕ್ಷ ಜಂಬಣ್ಣ ಗುತ್ತೂರು ಅವರು ನಿತ್ಯ ಬೆಳಗ್ಗೆ ವಾರ್ಡ್ಗಳಿಗೆ ಭೇಟಿ ಕೊಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಾ, ಜನಪರ ಕಾಳಜಿ ವಹಿಸುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಕಾರ್ಯ ವೈಖರಿ ಬಗ್ಗೆ ಶ್ಲ್ಯಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾ ಅಧಿಕಾರಿ ಮಹಾಂತೇಶ್, ನಗರಸಭೆ ಉಪಾಧ್ಯಕ್ಷ ಜಂಬಣ್ಣ ಗುತ್ತೂರು, ನಗರಸಭೆ ಸದಸ್ಯ ಪಿ.ಎನ್. ವಿರುಪಾಕ್ಷಪ್ಪ, ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಎಇಇ ವಿನಯ್ ಕುಮಾರ್, ಜಲಸಿರಿ ಇಲಾಖೆ ಎಇಇ ನವೀನ್ ಕುಮಾರ್, ಗುತ್ತಿಗೆದಾರ ಸುಭಾಷ್, ಡಿ.ಆರ್.ಎಂ. ಶಾಲೆಯ ಎಸ್.ಡಿ.ಎಂ ಅಧ್ಯಕ್ಷ ಜಬಿವುಲ್ಲಾ, ಇತರರು ಹಾಜರಿದ್ದರು.