ಬೆಂಗಳೂರು, ಮಾ.6- ಗಣಿಗಾರಿಕೆಯ ವಿಚಾರದಲ್ಲಿ ರಾಜಕೀಯ ನುಸುಳಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ವಿಧಾನಸಭಾ ಕಲಾಪದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಶಾಸಕ ಐವಾನ್ ಡಿಸೋಜಾ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಕಳೆದ ಎರಡು ವರ್ಷಗಳಿಂದ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿ ದೆಯೇ? ಈ ಬಗ್ಗೆ ಮಾಹಿತಿ ಇದೇಯೆ? ಇದೇ ಪ್ರಶ್ನೆಯನ್ನು ಪುನಃ ಪುನಃ ಕೇಳಲಾಗಿದ್ದು, ನಾವೂ ಸಹ ಅದೇ ಉತ್ತರ ಕೊಡುತ್ತಲೇ ಬಂದಿದ್ದೇವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಕೆಲಸ ನೀಡಲಾಗಿದೆ. ಇಲಾಖೆಯಲ್ಲಿನ ದಕ್ಷ ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿದ್ದು, ರಾಜಧನ ಸೋರಿಕೆಯನ್ನು ತಡೆಗಟ್ಟುತ್ತಿದ್ದಾರೆ. ಪ್ರಮಾಣಿಕವಾಗಿ ಅವರಿಗೆ ಕೆಲಸ ಮಾಡಲು ಬಿಡಬೇಕು ಎಂದು ಸಚಿವರು ಹೇಳಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯಚಟುವಟಿಕೆಯ ಮೇಲೆ ರಾಜಕೀಯ ಹಸ್ತಕ್ಷೇಪ ಮಾಡಿದರೆ ಈ ರೀತಿಯ ಸಮಸ್ಯೆಗಳು ತಲೆದೋರಲಿವೆ. ರಾಜಕೀಯ ಮಾಡುವುದನ್ನು ಬಿಟ್ಟರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತವೆ. ಉಡುಪಿ ಮತ್ತು ಮಂಗಳೂರು ಭಾಗದಲ್ಲಿ ನೋಡಿ ನಮ್ಮ ಇಲಾಖೆಯಿಂದ ಎಷ್ಟು ಉತ್ತಮ ಕಾರ್ಯಗಳು ನಡೆಯುತ್ತಿವೆ. ಒನ್ ಟೈಂ ಸೆಟ್ಲ್‌ಮೆಂಟ್ ಜಾರಿಯಾದರೆ ಇನ್ನಷ್ಟು ಸಮಸ್ಯೆಗಳಿಗೆ ಪರಿಹಾರ ಲಭಿಸುವುದು ಎಂದು ಸಚಿವರು ಶಾಸಕ ಐವಾನ್ ಡಿಸೋಜಾ ಪ್ರಶ್ನೆಗೆ ಉತ್ತರಿಸಿದರು.