ನೋಂದಣಿ, ಮುದ್ರಾಂಕ ಕಚೇರಿಗೆ ಬಿಜೆಪಿ ನಿಯೋಗ ಭೇಟಿ

ನೋಂದಣಿ, ಮುದ್ರಾಂಕ ಕಚೇರಿಗೆ ಬಿಜೆಪಿ ನಿಯೋಗ ಭೇಟಿ

ದಾವಣಗೆರೆ, ಫೆ.5- ನಗರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಯಲ್ಲಿ ಕಾವೇರಿ-2 ತಂತ್ರಾಂಶದಲ್ಲಿ ತಾಂತ್ರಿಕ ದೋಷ ಉಂಟಾಗುತ್ತಿರುವ ಹಿನ್ನೆಲೆ ಆಸ್ತಿ ನೋಂದಣಿಗಾಗಿ ಬರುವ ಜನರ ಪರದಾಟ ಮನಗಂಡ ಜಿಲ್ಲಾ ಬಿಜೆಪಿಯ ಪದಾಧಿಕಾರಿಗಳು ನಗರದ ಸಬ್‌ರಿಜಿಸ್ಟಾರ್‌ ಕಚೇರಿಗೆ ಇಂದು ಭೇಟಿ ನೀಡಿದ್ದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ರಾಜಶೇಖರ್ ನಾಗಪ್ಪ ಅವರ ನೇತೃತ್ವದ ನಿಯೋಗವು ಅಲ್ಲಿನ ವಸ್ತು ಸ್ಥಿತಿ ಅಧ್ಯಯನ ನಡೆಸಿ ಸಾರ್ವಜನಿಕರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ರಾಜಶೇಖರ ನಾಗಪ್ಪ ಅವರು, ಕಾವೇರಿ ತಂತ್ರಾಂಶ ನಿರ್ವಹಣೆ ಮಾಡುತ್ತಿರುವ ಸಂಸ್ಥೆಗೆ, ಪಾವತಿಸಬೇಕಾದ 660 ಕೋಟಿ ಹಣವನ್ನು ರಾಜ್ಯ ಸರ್ಕಾರ ತಡೆಹಿಡಿದಿದ್ದರಿಂದ ಇಂತಹ ಸಮಸ್ಯೆ ಎದುರಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ ಎಂದು ಆರೋಪಿಸಿದರು.

ನಾವು ತಿಳಿದ ಮಾಹಿತಿ ಪ್ರಕಾರ ಇ-ಖಾತಾ ವೆಬ್‌ಸೈಟ್‌ ನಿರ್ವಹಿಸುವ ಸಂಸ್ಥೆ ಮತ್ತು ರಿಜಿಸ್ಟ್ರೇಷನ್‌ ನಿರ್ವಹಣೆ ಮಾಡುವ ತಂತ್ರಾಂಶದ ಸಂಸ್ಥೆಯೇ ಬೇರೆ-ಬೇರೆ. ಆದರೆ ಅಧಿಕಾರಿಗಳು ಇ-ಖಾತಾ ಮತ್ತು ರಿಜಿಸ್ಟ್ರೇಷನ್‌ ಇವೆರಡನ್ನು ಜೋಡನೆ ಮಾಡಿದ್ದರಿಂದ ತಾಂತ್ರಿಕ ದೋಷ ಎದುರಾಗುತ್ತಿದೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಪ್ರತಿದಿನ 7ರಿಂದ 8ಸಾವಿರದಷ್ಟು ರಿಜಿಸ್ಟ್ರೇಷನ್‌ ಆಗಬೇಕಿತ್ತು. ಆದರೆ ಕಳೆದ ಶನಿವಾರದಿಂದ ಈತನಕ ಕೇವಲ ಆರು ನೂರರಷ್ಟು ರಿಜಿಸ್ಟ್ರೇಷನ್‌ ಆಗಿವೆ. ಈ ಅವ್ಯವಸ್ಥೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ಕಿಡಿಕಾರಿದರು.

ರಿಜಿಸ್ಟ್ರೇಷನ್‌ ಮಾಡಲು ಬರುವಂತಹ ಜನ ತಮ್ಮ ದಿನ ನಿತ್ಯದ ಕೆಲಸ ಬದಿಗಿಟ್ಟು ಬರುತ್ತಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಬರುವ ಆದಾಯವೂ ಕಡಿಮೆ ಆಗಿದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಇಲ್ಲ. ಅವರು ತಮ್ಮ ಯೋಗ್ಯತೆಯನ್ನು ತಾವೇ ರಾಜ್ಯದ ಜನರ ಮುಂದೆ ತೋರಿಸುತ್ತಿದ್ದಾರೆ ಎಂದು ಟೀಕಿಸಿದ ಅವರು, ಕೂಡಲೇ ತಾಂತ್ರಿಕ ದೋಷ ಸರಿಪಡಿಸಿ, ರಾಜ್ಯದ ಜನರಿಗೆ ಅನುಕೂಲ ಮಾಡದೇ ಇದ್ದರೆ ಹೋರಾಟಕ್ಕೆ ದುಮುಕುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಈ ವೇಳೆ ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ.ಎಂ. ಸತೀಶ್, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳ್, ಬಿ.ಜಿ. ಅಜಯಕುಮಾರ್, ಪಿ.ಸಿ.ಶ್ರೀನಿವಾಸ ಭಟ್, ಕಡ್ಲೆಬಾಳ್ ಬಸಣ್ಣ, ಪ್ರವೀಣ್ ಜಾಧವ್, ಹೆಚ್.ಪಿ. ವಿಶ್ವಾಸ್, ಜಯರುದ್ರಪ್ಪ ಮತ್ತಿತರರಿದ್ದರು.

error: Content is protected !!