ಹೊರಗುತ್ತಿಗೆ ಪದ್ಧತಿ ಕೈ ಬಿಡಿ, ನೇರ ಪಾವತಿ ಜಾರಿಗೆ ತನ್ನಿ

ಹೊರಗುತ್ತಿಗೆ ಪದ್ಧತಿ ಕೈ ಬಿಡಿ, ನೇರ ಪಾವತಿ ಜಾರಿಗೆ ತನ್ನಿ

ಕಸ ವಿಲೇವಾರಿ ಸ್ಥಗಿತಗೊಳಿಸಿ ಮಹಾನಗರ ಪಾಲಿಕೆ ಹೊರಗುತ್ತಿಗೆ ನೌಕರರ ಪ್ರತಿಭಟನೆ

ದಾವಣಗೆರೆ, ಫೆ. 4- ಹೊರಗುತ್ತಿಗೆ ನೌಕರರನ್ನು ಪೌರ ಕಾರ್ಮಿಕರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಹೊರಗುತ್ತಿಗೆ ನೌಕರರ ಸಂಘ, ಪಾಲಿಕೆಯ ಹೊರಗುತ್ತಿಗೆ ಘನತ್ಯಾಜ್ಯ ವಿಲೇವಾರಿ ವಾಹನ ಚಾಲಕರ ಸಂಘಗಳ ನೇತೃತ್ವದಲ್ಲಿ ಕಸ ವಿಲೇವಾರಿ ವಾಹನಗಳನ್ನು ಸ್ಥಗಿತಗೊಳಿಸಿ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಮಹಾನಗರ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದ ಹೊರಗುತ್ತಿಗೆ ನೌಕರರು ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಬಗೆಯ ಕಾರ್ಮಿಕರಿಗೆ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ, ನೇರಪಾವತಿ ಪದ್ಧತಿ ಜಾರಿಗೆ ತರುವ ಪ್ರಸ್ತಾವನೆಯನ್ನು ಬಜೆಟ್‌ನಲ್ಲಿ ಘೋಷಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸ್ಥಳೀಯ ಸಂಸ್ಥೆಗಳಲ್ಲಿನ ಕುಡಿಯುವ ನೀರು, ಸ್ವಚ್ಛತೆ ವಿಭಾಗದ ಸಹಾಯಕರು, ಸ್ಯಾನಿಟರಿ ಸೂಪರ್‌ವೈಜರ್‌ಗಳು, ಕಸದ ವಾಹನಗಳ ಚಾಲಕರು, ಲೋಡರ್ಸ್‌, ಕ್ಲೀನರ್ಸ್, ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕರು,ತ್ಯಾಜ್ಯ ವಿಲೇವಾರಿ ಸಹಾಯಕರು ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಜನ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಕಾಲಕ್ಕೆ ಬಾರದ ವೇತನ, ಅಧಿಕಾರಿಗಳು, ಗುತ್ತಿಗೆದಾರರ ಕಿರುಕುಳದಿಂದ ಬೇಸತ್ತು ಹೋಗಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಪೌರ ಕಾರ್ಮಿಕರೊಟ್ಟಿಗೆ ಕರ್ತವ್ಯ ನಿರ್ವಹಿಸುವ ಇನ್ನುಳಿದ ಕಾರ್ಮಿಕರನ್ನೂ ಸಹ ಗುತ್ತಿಗೆ ಪದ್ಧತಿಯಿಂದ ಬಿಡುಗಡೆಗೊಳಿಸಿ,ನೇರ ಪಾವತಿಗೆ ತರುವ ಬೇಡಿಕೆಯನ್ನು ಈ ಬಾರಿ ಈಡೇರಿಸಬೇಕು ಎಂದು ಆಗ್ರಹಿಸಿದರು.

ಹೊರಗುತ್ತಿಗೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಮಹಾನಗರ ಪಾಲಿಕೆಯ ಕಸದ ವಾಹನ ಚಾಲಕರು ಮತ್ತು ಎಲ್ಲಾ ಹೊರಗುತ್ತಿಗೆ ನೌಕರರಿಗೂ ಬೆಳಗಿನ ಉಪಹಾರ ಜಾರಿಗೊಳಿಸುವ ಜೊತೆಗೆ ಈವರೆಗೆ ಜಾರಿಗೊಳಿಸುವ ಅವಧಿಯ ಉಪಹಾರದ ಭತ್ಯೆಯನ್ನು ಚಾಲಕರ ಖಾತೆಗೆ ತುಂಬಬೇಕು ಎಂದು ಮನವಿ ಮಾಡಿದರು.

2023 ರಲ್ಲಿ ಪ್ರತಿಭಟನೆ ನಡೆಸಿದ ಕಸದ ವಾಹನ ಚಾಲಕರ ಮೇಲೆ ವಿಧಿಸಿದ ದಂಡದ ಮೊತ್ತ 4.5 ಲಕ್ಷ ರೂ. ಗಳನ್ನು ಹಿಂತಿರುಗಿಸಬೇಕು. ಎಲ್ಲಾ ಹೊರಗುತ್ತಿಗೆ ನೌಕರರಿಗೂ ಕಡ್ಡಾಯವಾಗಿ ಕಾರ್ಮಿಕ ಕಾಯ್ದೆಯ ಅನುಸಾರ ವಾರದ ರಜೆ ನೀಡಬೇಕು ಎಂದು ಹೇಳಿದರು.

ಜಗಳೂರು ಪಟ್ಟಣ ಪಂಚಾಯತಿಯ ನೀರು ಸರಬರಾಜು ಸಹಾಯಕರು ಸೇರಿದಂತೆ ಎಲ್ಲಾ ಹೊರಗುತ್ತಿಗೆ ನೌಕರರಿಗೆ ಬಾಕಿ ಉಳಿದಿರುವ 9 ತಿಂಗಳ ವೇತನವನ್ನು ಕೂಡಲೇ ಪಾವತಿಸಬೇಕು. ಸ್ವಚ್ಛತಾ ಕಾರ್ಮಿಕರನ್ನು ಗೃಹಭಾಗ್ಯ ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಸರ್ಕಾರ ಆದೇಶಿಸಿದೆ. ಜಿಲ್ಲಾಡಳಿತ ವಿಶೇಷ ಆದ್ಯತೆ ಮೇರೆಗೆ ಈ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಸಫಾಯಿ ಕರ್ಮಚಾರಿ ಕಾರ್ಡ್ ವಿತರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಎಂ. ವೀರೇಶ್, ಎಂ.ಬಿ. ನಾಗಣ್ಣಗೌಡ, ಎಂ.ಆರ್.ದುಗ್ಗೇಶ್, ಪಿ. ಮಂಜಪ್ಪ, ಕಿರಣ್ ಕುಮಾರ್, ಆರ್‌. ಮಂಜಪ್ಪ, ಸುರೇಶ್ ಬಿರಾದಾರ್, ಟಿ. ಸಂತೋಷ್, ಎನ್. ನವೀನ್ ಮತ್ತಿತರರು ಪಾಲ್ಗೊಂಡಿದ್ದರು. 

error: Content is protected !!