ದಾವಣಗೆರೆ, ಜ. 2 – ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಸಾಮಾಜಿಕ ಕಳಕಳಿ, ದೇಶಭಕ್ತಿ ಮೇಳೈಸಿದ ಮೇರು ವ್ಯಕ್ತಿತ್ವ ವಾಗಿದ್ದರು ಎಂದು ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸ ಡಾ. ಗುರುರಾಜ ಗುಡಿ ಬಣ್ಣಿಸಿದರು.
ಅಖಿಲ ಭಾರತ ಮಾಧ್ವ ಮಹಾಮಂಡಲ ದಾವಣಗೆರೆ ಶಾಖೆ, ಶ್ರೀ ಪೇಜಾವರ ಅಧೋಕ್ಷಜ ಮಠದ ಸಂಯುಕ್ತ ಆಶ್ರಯದಲ್ಲಿ ನಗರದ ಪಿ.ಜೆ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಪಂಚಮ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಜಾತಿ, ಮತ, ಪಂಥ ಭೇದವಿಲ್ಲದೇ ಎಲ್ಲರ ಕಣ್ಣೀರು ಒರೆಸಿದರು. ದೀನ-ದಲಿತರ ಸಂಕಷ್ಟಗಳಿಗೆ ಸ್ಪಂದಿಸಿದರು. ಶಾಲೆ, ಕಾಲೇಜು, ಹಾಸ್ಟೆಲ್ ಸ್ಥಾಪಿಸಿ ಶೈಕ್ಷಣಿಕ ಕೊಡುಗೆಯನ್ನೂ ನೀಡಿದರು ಎಂದು ವಿಶ್ಲೇಷಿಸಿದರು.
ಒಂಬತ್ತು ಸುದೀರ್ಘ ವರ್ಷಗಳ ಕಾಲ ಸನ್ಯಾಸ ಧರ್ಮವನ್ನು ನಿಷ್ಠೆಯಿಂದ ಪಾಲಿಸಿದರು. ದೇಶಕ್ಕೆ ಅಪಾಯ ಬಂದಾಗಲೆಲ್ಲ ಮಿಡಿದು ರಾಷ್ಟ್ರ ಭಕ್ತಿಯನ್ನು ಮೆರೆದರು. ಮತಾಂತರ ತಡೆಗೆ ಪ್ರಯತ್ನಿಸಿದರು ಎಂದು ಸಮಾಜಕ್ಕೆ ಗುರುಗಳು ಮಾಡಿದ ಸಹಾಯವನ್ನು ಸ್ಮರಿಸಿದರು.
ಪೇಜಾವರ ಶ್ರೀಗಳು ಮಾಧ್ವ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಮಧ್ವ ಸಿದ್ಧಾಂತ ಗಟ್ಟಿಗೊಳಿಸಲು ಅವರ ಪಾತ್ರ ದೊಡ್ಡದು. ಅವರದು ವಿಶಿಷ್ಟ ವ್ಯಕ್ತಿತ್ವ. ಪಂಡಿತರನ್ನು ಪೋಷಣೆ ಮಾಡಿದರು. ಬಡ ವಿದ್ಯಾರ್ಥಿಗಳಿಗೆ ಸಹಾಯ ನೀಡಿದರು. ಹಾಸ್ಟೆಲ್, ಪಾಠಶಾಲೆ ಆರಂಭಿಸಿದರು. ಶಿಷ್ಯರ ಮೇಲೆ ಅವರಿಗೆ ಕರುಣೆ ಇತ್ತು. ಅವರ ನೆನಪಿನ ಶಕ್ತಿ ಅಗಾಧ.
– ಪಾಂಡುರಂಗಾಚಾರ್ ಮಣ್ಣೂರು, ಪಂಡಿತರು
ಮೂರ್ತಿ ವಾಮನ, ಕಾರ್ಯ ತ್ರಿವಿಕ್ರಮ
ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ನೋಡಲು ವಾಮನ ಮೂರ್ತಿಯಂತೆ ಕಂಡರೂ, ಅವರು ಬದುಕಿನಲ್ಲಿ ಸಾಧಿಸಿದ ಕಾರ್ಯಗಳಿಂದ ತ್ರಿವಿಕ್ರಮರೆನಿಸಿದರು ಎಂದು ಪಂಡಿತ ವೆಂಕಟಗಿರೀಶಾಚಾರ್ ಹೇಳಿದರು.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವುದಕ್ಕೆ ಅನ್ವರ್ಥವಾಗಿ ಶ್ರೀ ವಿಶ್ವೇಶತೀರ್ಥರು ಕೆಲಸ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿ ಸಿದರು. ಸಮಾಜದಲ್ಲಿ ದೊಡ್ಡ ಕ್ರಾಂತಿ ಮಾಡಿ ದರು. ಪೂರ್ಣಪ್ರಜ್ಞ ವಿದ್ಯಾಪೀಠವನ್ನು ಸ್ಥಾಪಿಸಿದ್ದು ಅವರು ಮಾಡಿದ ದೊಡ್ಡ ಕಾರ್ಯಗಳಲ್ಲಿ ಒಂದಾಗಿದೆ. ಸಣ್ಣ ಕಾರ್ಯಕ್ರಮದಿಂದ ಹಿಡಿದು ದೊಡ್ಡ ಸಮಾವೇಶಗಳ ವರೆಗೆ ಯಾರೇ ಕರೆದರೂ ಭಾಗವಹಿಸುತ್ತಿದ್ದರು ಎಂದು ತಿಳಿಸಿದರು.
ಭಗವಂತನು ಅನಂತ ಸಾಧನಗಳ ಮೂಲಕ ಜಗತ್ತನ್ನು ರಕ್ಷಣೆ ಮಾಡುತ್ತಾನೆ, ಆದ್ದರಿಂದ ನಾವು ಕ್ಷೇಮದಿಂದ ಇದ್ದೇವೆ. ದೇವರು ಹೇಗೆ ಕಾಪಾಡುತ್ತಾನೆ ಎಂಬುದನ್ನು ಊಹಿಸುವುದೂ ಅಸಾಧ್ಯ. ಭಕ್ತರ ರಕ್ಷಣೆ ಜವಾಬ್ದಾರಿ ದೇವರದು ಎಂದರು.
ಹಿಂದೂ ಸಮಾಜದ ರಕ್ಷಣೆಗೆ ಪಣ ತೊಟ್ಟಿದ್ದ ಅವರು ವಿಶ್ವ ಹಿಂದೂ ಪರಿಷತ್‌ನ ಸಮ್ಮೇಳನ ಆಯೋಜನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ರಾಜಕೀಯ ಕ್ಷೇತ್ರದ ನಾಯಕರೊಂದಿಗೆ ಒಳ್ಳೆಯ ಸಂಬಂಧ ಹೊಂದಿ, ಸಮಾಜಕ್ಕೆ ಉತ್ತಮ ಕೆಲಸ ಗಳಾಗಲು ಆ ಪ್ರಭಾವವನ್ನು ಬಳಸಿದರು ಎಂದರು.
ಶ್ರೀ ವಿಶ್ವೇಶತೀರ್ಥ ಗುರುಗಳು ಶಿಷ್ಯಂದಿರ ಬಗ್ಗೆ ತಂದೆ, ತಾಯಿಗಿಂತ ಹೆಚ್ಚು ಕಾಳಜಿ ತೋರಿದರು, ಪ್ರೀತಿಯನ್ನು ನೀಡಿದರು.
ಪಾಲಕರು ಮಕ್ಕಳಿಗೆ ಎಲ್ಲ ಸೌಲಭ್ಯ ನೀಡುತ್ತಾರೆ. ಆದರೆ ಧಾರ್ಮಿಕ ಸಂಸ್ಕಾರ ನೀಡುವಲ್ಲಿ ಹಿಂದೆ ಬಿದ್ದಿದ್ದಾರೆ. ಇದನ್ನು ಮನಗಂಡು ಗುರುಗಳು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದರು. ತ್ಯಾಗ, ವೈರಾಗ್ಯದ ಪ್ರತೀಕವಾಗಿದ್ದರು ಎಂದು ಹೇಳಿದರು.
ಕಂಪ್ಲಿ ಗುರುರಾಜಾಚಾರ್, ಜಯತೀರ್ಥಾಚಾರ ವಡೇರ ಮಾತನಾಡಿದರು.
ಹೋಟೆಲ್ ಉದ್ಯಮಿ ವಿಠ್ಠಲ ರಾವ್, ಅನಂತಯ್ಯ ಇದ್ದರು. ಸುಮೇಧಾ ಪ್ರಾರ್ಥಿಸಿದರು. ಇದಕ್ಕೂ ಮೊದಲು ಋಗ್ವೇದ ಸ್ವಾಹಾಕಾರ ಹೋಮದ ಪೂರ್ಣಾಹುತಿ ನೆರವೇರಿತು.