ದಾವಣಗೆರೆ, ನ. 4- ಮಹಾನಗರ ಪಾಲಿಕೆ ವ್ಯಾಪ್ತಿಯ ಆಟೋರಿಕ್ಷಾಗಳು ಮೀಟರ್ ಅಳವಡಿಕೆ ಮೂಲಕ ಪ್ರಯಾಣಿಕರ ಸೇವೆಗೆ ಸಜ್ಜಾಗುವಂತೆ ಒಂದು ವಾರದ ಗಡುವು ನೀಡಲಾಗಿದೆ.
ಗಡುವು ನಂತರ ಮೀಟರ್ ಅಳವಡಿಕೆ ಮಾಡದೇ ಇರುವ ಆಟೋಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಮೈದಾನದಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಜೊತೆ ಪೊಲೀಸ್ ಇಲಾಖೆ ನಿನ್ನೆ ಆಯೋಜಿಸಿದ್ದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ
ಡಾ. ಜಿ.ಎನ್. ಗಂಗಾಧರಸ್ವಾಮಿ, ಆಟೋಗ ಳು ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳ ಬೇಕು. ಮೀಟರ್ ಆಧಾರದ ಮೇರೆಗೆ ಬಾಡಿಗೆ ನಿಗದಿಪಡಿಸಬೇಕು. ನಿಗದಿತ ಕಾಲ ಮಿತಿಯೊಳಗೆ ಮೀಟರ್ ಅಳವಡಿಸಿಕೊಳ್ಳ ದಿದ್ದರೆ ತೊಂದರೆ ಅನುಭವಿಸುವುದು ನಿಶ್ಚಿತ. ನಿಯಮ ಉಲ್ಲಂಘಿಸಿದವರಿಗೆ ಐದು ಸಾವಿರದವರೆಗೂ ದಂಡ ವಿಧಿಸಲು ಅವಕಾಶವಿದೆ. ಚಾಲಕರಿಗೆ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ ಎಂದರು.
ನಗರ ಸಾರಿಗೆಯನ್ನು ಮತ್ತಷ್ಟಿ ಬಲಗೊಳಿ ಸುವ ಉದ್ದೇಶವಿದ್ದು, ನಿಮ್ಮ ಹೊಟ್ಟೆಯ ಮೇಲೆ ಹೊಡೆಯಲು ನಾವು ಸಿದ್ಧರಿಲ್ಲ. ಆಟೋ ನಿಲ್ದಾಣಗಳಿಗೆ ಸ್ಥಳ ನಿಗದಿಪಡಿಸಲು ಮಹಾ ನಗರ ಪಾಲಿಕೆ ಆಯುಕ್ತರಾದ ರೇಣುಕ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು. ಈ ಸಮಿತಿ ಶಿಫಾರಸ್ಸು ಆಧರಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೇವಲ ಐದು ಅಧಿಕೃತ ಆಟೋ ನಿಲ್ದಾಣಗಳಿವೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೇವಲ ಐದು ಆಟೋ ನಿಲ್ದಾಣಗಳು ಮಾತ್ರ ಅಧಿಕೃತವಾಗಿವೆ. 50 ಕ್ಕೂ ಹೆಚ್ಚು ಆಟೋ ನಿಲ್ದಾಣಗಳು ಅನಧಿಕೃತವಾಗಿವೆ. ಎಲ್ಲೆಂದರಲ್ಲಿ ಆಟೋ ನಿಲ್ದಾಣಗಳಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ನಿಲ್ದಾಣಕ್ಕೆ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ಜಿಲ್ಲೆಯಲ್ಲಿ ಹದಿನೈದು ವರ್ಷ ಮೇಲ್ಪಟ್ಟ ಆರು ಸಾವಿರಕ್ಕೂ ಅಧಿಕ ಆಟೋಗಳು ಇರುವ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ಮಾಹಿತಿ ಇದೆ. ಸುಸ್ಥಿತಿ ಕಳೆದುಕೊಂಡಿರುವ ಈ ಆಟೋಗಳ ಸಂಖ್ಯೆ ನಗರ ವ್ಯಾಪ್ತಿಯಲ್ಲಿ ಹೆಚ್ಚಾಗಿದೆ ಎಂದರು.
ಮೀಟರ್, ಸುಸ್ಥಿತಿ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ನಿಯಮಗಳನ್ನು ಪಾಲಿಸಬೇಕು. ಇಲ್ಲವಾದರೆ ದಂಡ ಖಂಡಿತ ಎಂದು ಹೇಳಿದರು.
ಪ್ರೀಪೇಯ್ಡ್ ಆಟೋ ಸೇವೆಗೆ ಚಿಂತನೆ: ರೈಲ್ವೆ ನಿಲ್ದಾಣದ ಬಳಿ ಮುಂಗಡ ಪಾವತಿ (ಪ್ರೀಪೇಯ್ಡ್) ಆಟೋ ಸೇವೆ ನೀಡುವ ಚಿಂತನೆ ಮಾಡಲಾಗಿದೆ. ಇದು ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ಬರಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದರು.
524 ಕ್ಯಾಮೆರಾ ಅಳವಡಿಕೆ: ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ 524 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ಈ ಕ್ಯಾಮೆರಾಗಳು ನಿಗಾ ವಹಿಸುತ್ತವೆ. ಕಮಾಂಡರ್ ಕಂಟ್ರೋಲ್ ಸೆಂಟರ್ನಿಂದ ಕ್ಯಾಮೆರಾಗಳನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸ್ಮಾರ್ಟ್ ಸಿಟಿ ಯೋಜನೆಯ ಐಟಿ ವಿಭಾಗದ ಡಿಜಿಎಂ ಮಮತಾ ಅವರು ಮಾಹಿತಿ ನೀಡಿದರು.
ಏಕ ಕಾಲಕ್ಕೆ ಹತ್ತು ವಾಹನಗಳನ್ನು ಮತ್ತು ಗಂಟೆಗೆ 149 ಕಿಮೀ ವೇಗದಲ್ಲಿ ಸಂಚರಿಸುವ ವಾಹನಗಳ ಸಂಖ್ಯಾ ಫಲಕ ಸೇರಿದಂತೆ ಇತರ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯವನ್ನು ಈ ಕ್ಯಾಮೆರಾಗಳು ಹೊಂದಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೇ ಸಂಚಾರ ನಿಯಮ ಉಲ್ಲಂಘಿಸಿದರೂ ಸಿಕ್ಕಿ ಬೀಳುವುದು ಗ್ಯಾರಂಟಿ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ್ ಎಂ. ಸಂತೋಷ್, ಜಿ. ಮಂಜುನಾಥ್, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಪಾಲಿಕೆ ಆಯುಕ್ತೆ ರೇಣುಕಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುಥೇಶ್, ಕೆಎಸ್ಆರ್ಟಿಸಿ ಡಿಸಿ ಸಿದ್ದೇಶ್ವರ್, ಸ್ಮಾರ್ಟ್ ಸಿಟಿ ಯೋಜನೆ ಎಂಡಿ ವೀರೇಶ್ ಕುಮಾರ್, ಬೆಸ್ಕಾಂ ಎಇಇ ಚಂದ್ರಾನಾಯ್ಕ, ಪಿಡಬ್ಲ್ಯೂಡಿ ಇಲಾಖೆ ಎಇಇ ಸಿ. ಕುಮಾರ್, ಕೆಎಸ್ಪಿಎಸ್ ಡಿವೈಎಸ್ಪಿ ಪಿ.ಬಿ. ಪ್ರಕಾಶ್ ಉಪಸ್ಥಿತರಿದ್ದರು.