ಕೊಂಡಜ್ಜಿ ಕೆರೆಗೆ ಬಾಗಿನ ಅರ್ಪಿಸಿದ ಸಂಸದೆ ಡಾ|| ಪ್ರಭಾ ಮಲ್ಲಿಕಾರ್ಜುನ್ ಭರವಸೆ
ಕೊಂಡಜ್ಜಿ, ಅ.28- ಭರ್ತಿಯಾಗಿ ಕೋಡಿ ಬಿದ್ದಿರುವ ಕೊಂಡಜ್ಜಿ ಗ್ರಾಮದ 227 ಎಕರೆ ವಿಸ್ತೀರ್ಣದ ಐತಿಹಾಸಿಕ ಕೆರೆಗೆ ಸೋಮವಾರ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಗ್ರಾಮಸ್ಥರ ಸಮ್ಮುಖದಲ್ಲಿ ಗಂಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.
ನಂತರ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಭಾ ಅವರು, ಕೆರೆಗಳನ್ನು ಸಂರಕ್ಷಿಸುವುದು ಮಾತ್ರವಲ್ಲದೆ, ಮುಂದಿನ ಪೀಳಿಗೆಗೂ ನೀರಿನ ಸಂರಕ್ಷಣೆಯ ಬಗ್ಗೆ ತಿಳಿಸುವ ಕೆಲಸ ಮಾಡಬೇಕು. ಎಷ್ಟೋ ಹಳ್ಳಿಗಳಲ್ಲಿ ಇಂದಿನ ನೀರಿನ ಸಂಗ್ರಹ ವ್ಯವಸ್ಥೆ ಇಲ್ಲ, ಜಲಾಶಯದ ನೀರು ಎಲ್ಲಾ ಕಡೆಗಳಲ್ಲಿ ಹರಿಸಲು ಸಾಧ್ಯವಿಲ್ಲ. ಹಾಗಾಗಿ ಕೆರೆಗಳು ಜನ-ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ಆಧಾರವಾಗಿವೆ.
ಈ ನಿಟ್ಟಿನಲ್ಲಿ ಕೆರೆಗಳನ್ನು ಉಳಿಸಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಎಲ್ಲರೂ ಸೇರಿ ಪ್ರಯತ್ನಿಸೋಣ ಎಂದ ಸಂಸದರು, ಕೊಂಡಜ್ಜಿ ಸೇರಿದಂತೆ ಈ ಭಾಗದ ಜನರ ಜೀವ ನಾಡಿಯಾಗಿರುವ ಈ ಕೆೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಭರವಸೆ ನೀಡಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಮಳೆರಾಯನ ಕೃಪೆಯಿಂದ ಈ ವರ್ಷ ಎಲ್ಲಾ ಜಲಾಶಯಗಳು, ಕೆರೆಗಳು ಭರ್ತಿಯಾಗಿ ರೈತರಲ್ಲಿ ಸಂತಸ ಮೂಡಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೈಬಿಟ್ಟು ಅಭಿವೃದ್ಧಿ ಯೋಜನೆಗಳಿಗೆ ಹಣ ನೀಡಿದರೆ, ರಸ್ತೆ ಅಭಿವೃದ್ಧಿ, ಬೈರನಪಾದ ಏತ ನೀರಾವರಿ, ಹರಿಹರ ನಗರಕ್ಕೆ ಕುಡಿಯುವ ನೀರಿನ ಯೋಜನೆ ಎಲ್ಲಾ ಅಗತ್ಯ ಯೋಜನೆಗಳನ್ನು ಜಾರಿಗೊಳಿಸಬಹುದೆಂದರು.
ಮಾಜಿ ಶಾಸಕ ಎಸ್. ರಾಮಪ್ಪ ಮಾತನಾಡಿ, ಸಚಿವರು, ಸಂಸದರು, ಹರಿಹರ ಕ್ಷೇತ್ರದ
ಅಭಿವ ೃದ್ಧಿಗೆ ಹೆಚ್ಚಿನ ನಿಗಾ ವಹಿಸಬೇಕೆಂದರು.
ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕರಿಯಮ್ಮ, ಹಿರಿಯರಾದ ಕಕ್ಕರಗೊಳ್ಳ ಬಸವನಗೌಡ್ರು, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಹನಗವಾಡಿ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಬಿಜೆಪಿ ಮುಖಂಡರಾದ ಚಂದ್ರಶೇಖರ್ ಪೂಜಾರ್, ಹನಗವಾಡಿ ವಿರೇಶ್, ಕಾಂಗ್ರೆಸ್ ಮುಖಂಡರಾದ ಗುತ್ತೂರು ಹಾಲೇಶ್‌ಗೌಡ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.