ಜಗಳೂರು ಶಾಸಕ ದೇವೇಂದ್ರಪ್ಪ ಕರೆ
ಜಗಳೂರು, ಸೆ. 5- ಶಿಕ್ಷಕರು ನಿರಂತರ ಕಲಿಕೆಯ ವಿದ್ಯಾರ್ಥಿಯಾಗಿರಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.
ಪಟ್ಟಣದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 136ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಗ್ಧ ಮನಸ್ಸಿನ ಖಾಲಿ ಕೊಡದಂತಿರುವ ಮಕ್ಕಳಲ್ಲಿ ಶಿಕ್ಷಕರು ಉತ್ತಮ ಅಂಶಗಳನ್ನು ಭರಿಸಬೇಕು. ಶಿಕ್ಷಕರು ಜೀವಂತ ವ್ಯಕ್ತಿಗಳನ್ನು ಸುಂದರ ಮೂರ್ತಿಯನ್ನಾಗಿಸುವ ಶಿಲ್ಪಿಗಳು. ಒಬ್ಬ ವ್ಯಕ್ತಿಯ ಸೃಷ್ಠಿ, ಸ್ಥಿತಿ, ಲಯ ಶಿಕ್ಷಕರ ಕೈಯ್ಯಲ್ಲಿದೆ ಎಂದು ಹೇಳಿದರು.
ಸಮಾಜದಲ್ಲಿ ವ್ಯಕ್ತಿಯು ಒಳಿತು, ಪ್ರಮಾದಗಳಲ್ಲಿ ತೊಡಗಿದಾಗ ಹೊಗಳಿಕೆ, ತೆಗಳಿಕೆಗೆ ಶಿಕ್ಷಕರೇ ಹೊಣೆಯಾಗುತ್ತಾರೆ. ಭವಿಷ್ಯದಲ್ಲಿ ದೇಶದ ನಿರ್ಮಾತೃಗಳನ್ನು ಸೃಷ್ಟಿಸುವ ಶಿಕ್ಷಕ ವರ್ಗ ಸನ್ಮಾರ್ಗದಲ್ಲಿ ನಡೆಯಬೇಕಿದೆ ಎಂದು ಹೇಳಿದರು.
ಎಸ್.ಎಸ್.ಎಲ್.ಸಿ ಫಲಿತಾಂಶಕ್ಕೆ ಆದ್ಯತೆ ನೀಡಿ : ಶಿಕ್ಷಕರು ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತವನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಉತ್ತಮ ಫಲಿತಾಂಶ ಬರುವಂತೆ ಶ್ರಮ ವಹಿಸಬೇಕಿದೆ ಎಂದರು.
ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಮಾತನಾಡಿ, ಸಮಾಜದಲ್ಲಿ ಅಕ್ಷರ ಬೀಜ ಬಿತ್ತುವ ಮೂಲಕ ಶೈಕ್ಷಣಿಕ ಕೃಷಿ ಚಟುವಟಿಕೆಯಲ್ಲಿ ಸಕ್ರಿಯರಾದ, ಉಜ್ವಲ ಭವಿಷ್ಯ ರೂಪಿಸುವ ಶಿಕ್ಷಕ ವೃತ್ತಿ ಪವಿತ್ರವಾದದ್ದು ಎಂದರು.
ಉಪನ್ಯಾಸಕಿ ಸುಮತಿ ಜಯ್ಯಪ್ಪ ವಿಶೇಷ ಉಪ ನ್ಯಾಸ ನೀಡುತ್ತಾ, ಪ್ರಾಚೀನ ಕಾಲದಿಂದಲೂ ಶಿಕ್ಷಕ ವೃತ್ತಿಗೆ ಸೂಕ್ತ ಸ್ಥಾನಮಾನದ ಗೌರವವಿದೆ. ತಂತ್ರಜ್ಞಾನ ಆಧಾ ರಿತ ಶಿಕ್ಷಣಕ್ಕೆ ಶಿಕ್ಷಕರು ಹೊಂದಿಕೊಳ್ಳಬೇಕಿದೆ ಎಂದರು.
ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತರಿಗೆ, 57 ಜನ ನಿವೃತ್ತ ಶಿಕ್ಷಕರಿಗೆ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾದ 4 ಜನರಿಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮುಖಂಡರಾದ ಕೆ.ಪಿ.ಪಾಲಯ್ಯ , ಬಿಇಓ ಹಾಲಮೂರ್ತಿ, ತಾ.ಪಂ.ಇಓ ಕೆಂಚಪ್ಪ, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಬಿ.ನಾಗರಾಜ್, ಬಿ.ಆರ್.ಸಿ ಡಿ ಡಿ.ಹಾಲಪ್ಪ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷೆ ವೀಣಾ ಗೋಗುದ್ದು ರಾಜ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ, ಉಪನ್ಯಾಸಕ ಎ.ಎಲ್. ತಿಪ್ಪೇಸ್ವಾಮಿ ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ ಇತರರು ಉಪಸ್ಥಿತರಿದ್ದರು.