ಗೃಹಲಕ್ಷ್ಮಿ ಯೋಜನೆ ಸ್ಥಗಿತ ಇಲ್ಲ, ಆತಂಕ ಬೇಡ

ಗೃಹಲಕ್ಷ್ಮಿ ಯೋಜನೆ ಸ್ಥಗಿತ ಇಲ್ಲ, ಆತಂಕ ಬೇಡ

ಆನಗೋಡಿನ ಜನಸ್ಪಂದನದಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ 

ದಾವಣಗೆರೆ, ಜೂ.30- ಐದು ಗ್ಯಾರಂಟಿ ಗಳನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಮಹಿಳೆಯರು ಪ್ರತಿಪಕ್ಷಗಳು ಹಬ್ಬಿಸುವ ವದಂತಿಗಳಿಗೆ ಕಿವಿಗೊಡಬೇಡಿ. ನಮ್ಮ ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಭರವಸೆ ನೀಡಿದರು.

ತಾಲ್ಲೂಕಿನ ಆನಗೋಡು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎರಡು ತಿಂಗಳು ಕಳೆಯಿತು, ಸರ್ಕಾರ ಇನ್ನೂ ಗೃಹಲಕ್ಷ್ಮಿ ಹಣವನ್ನು ಮಹಿಳಾ ಫಲಾನುಭವಿಗಳ ಖಾತೆಗೆ ಹಾಕಲಿಲ್ಲ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಳ್ಳದೇ ವಚನ ಭ್ರಷ್ಟ ಸರ್ಕಾರವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿ ಸುತ್ತಿವೆ. ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆ ರದ್ದುಗೊಳಿಸುವುದಿಲ್ಲ. ಕೆಲವು ತಾಂತ್ರಿಕ ತೊಂದರೆಯಿಂದ ವಿಳಂಬವಾಗಿರಬಹುದು. ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಇನ್ನೆರಡು, ಮೂರು ದಿನಗಳಲ್ಲಿ ಮಹಿಳಾ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಹಾಕುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.  ಹೀಗಾಗಿ ಮಾತೆಯರು ಆತಂಕಕ್ಕೆ ಒಳಗಾಗುವುದು ಬೇಡ ಎಂದರು.

ಹೆಚ್ಚು ಆದಾಯ ಇರುವ ಕೆಲವು ಮಹಿಳೆ ಯರು ಯೋಜನೆ ಆರಂಭದಲ್ಲಿಯೇ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಿ ದ್ದಾರೆ. ಅದೇ ರೀತಿ ಆದಾಯ ಹೆಚ್ಚಿರುವ ಉಳಿದವರೂ ಸಹ ಹಣ ಹಿಂತಿರುಗಿಸಿದರೆ ಬಡ ಮಹಿಳೆಯರಿಗೆ ಸಹಾಯವಾಗಲಿದೆ ಎಂದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಗ್ರಾಮ ಗಳಲ್ಲಿ ಇರುವ ಸರ್ಕಾರಿ ಜಮೀನು ಗುರುತಿಸಿದರೆ, ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲೆಲ್ಲಿ ಜಾಗ ಇದೆ, ಅವುಗಳನ್ನು ಗುರುತಿಸುವಂತೆ ಈಗಾಗಲೇ ತಹಸೀಲ್ದಾರ್‌ಗೆ ಸೂಚನೆ ನೀಡಲಾಗಿದೆ. 

ಅಲ್ಲದೇ, ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಆದರೆ, ಆರ್ಥಿಕವಾಗಿ ಸಬಲರಾಗಿರುವಂತವರು ಹೆಚ್ಚು ಭೂಮಿ ಹೊಂದಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ತಹಸೀಲ್ದಾರ್ ಸಾಗುವಳಿ ಪಡೆದವರಲ್ಲಿ ಯಾರು ಹೆಚ್ಚಿನ ಭೂಮಿ ಹೊಂದಿದ್ದಾರೆ, ಅಂತಹ ವರನ್ನು ಪತ್ತೆ ಹಚ್ಚಿ ಭೂಮಿ ಇಲ್ಲದ ಬಡವನಿಗೆ ಭೂಮಿಯ ಹಕ್ಕು ನೀಡುವ ಕೆಲಸ ಮಾಡಬೇಕು ಎಂದು ತಹಸೀಲ್ದಾರ್‌ಗೆ ಸೂಚಿಸಿದರು.

ಆನಗೋಡು ಗ್ರಾಮದಲ್ಲಿ ಲಿಡ್ಕರ್ ವಸತಿ ನಿರ್ಮಾಣಕ್ಕೆ ಮೀಸಲಿಟ್ಟಿರುವ ಜಾಗ ಕೆಲವು ತಾಂತ್ರಿಕ ತೊಂದರೆಯಿಂದ ವಸತಿ ನಿರ್ಮಿಸಲು ಆಗಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್ ಅವರೊಂದಿಗೆ ಚರ್ಚಿಸಿ ಲಿಡ್ಕರ್ ವಸತಿಗಳನ್ನು ನಿರ್ಮಾಣ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ನಕಾಸೆ ದಾರಿ ಒತ್ತುವರಿ ಪ್ರಕರಣಗಳು ಸಾಕಷ್ಟು ಬರುತ್ತಿವೆ. ಕೂಡಲೇ ನಕಾಸೆ ದಾರಿ ಒತ್ತುವರಿ ತೆರವುಗೊಳಿಸಿ ನಕಾಸೆ ದಾರಿ ಒತ್ತುವರಿ ಮುಕ್ತ ಕ್ಷೇತ್ರ ಮಾಡಬೇಕೆಂದು ನಿರ್ಧಾರ ಮಾಡಲಾಗಿದೆ. ಈ ನಿಟ್ಟಿನಲ್ಲಿ ತಹಶೀಲ್ದಾರ್, ಸಂಬಂಧಪಟ್ಟ ಅಧಿಕಾರಿಗಳು ತ್ವರಿತ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂದ್ರಮ್ಮ, ಉಪಾಧ್ಯಕ್ಷ ಬಸವರಾಜ್, ಸದಸ್ಯ ಕರಿಬಸಪ್ಪ, ತಹಸೀಲ್ದಾರ್ ಡಾ.ಎಂ.ಬಿ.ಅಶ್ವತ್ಥ್, ತಾಲ್ಲೂಕು ಪಂಚಾಯತಿ ಇಒ ರಾಮಭೋವಿ, ಉಪ ತಹಸೀಲ್ದಾರ್ ರಾಮಸ್ವಾಮಿ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!