ಭಾರತ ಜ್ಞಾನ ಕೇಂದ್ರವಾಗಲಿ

ಭಾರತ ಜ್ಞಾನ ಕೇಂದ್ರವಾಗಲಿ

ನಳಂದ ನೂತನ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ

ರಾಜಗೀರ್, ಜೂ. 19 – ಭಾರತ ವಿಶ್ವದ ಮುಂಚೂಣಿ ಜ್ಞಾನ ಕೇಂದ್ರವಾಗಬೇಕು ಹಾಗೂ ಉನ್ನತ ಶಿಕ್ಷಣ ವಲಯವು ಸಂಶೋಧನಾ ಕೇಂದ್ರಿತವಾಗಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಶಿಸಿದ್ದಾರೆ.

ನಳಂದ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟಿಸಿ ಅವರು ಮಾತನಾಡಿದರು.

ಜ್ಞಾನವನ್ನು ಬೆಂಕಿಯಿಂದ ನಾಶಮಾಡಲಾಗದು ಎಂಬುದಕ್ಕೆ ನಳಂದವೇ ಸಾಕ್ಷಿಯಾಗಿದೆ. ಭಾರತ 21ನೇ ಶತಮಾನದಲ್ಲಿ ತನ್ನ ಪಾತ್ರ ವಹಿಸಲು ಹೆಜ್ಜೆ ಹಾಕುತ್ತಿದೆ. ಈ ಶತಮಾನವು ಏಷಿಯಾಗೆ ಸೇರಿದ್ದಾಗಿದೆ ಎಂದೂ ಪ್ರಧಾನಿ ಹೇಳಿದ್ದಾರೆ. ನಳಂದ ವಿಶ್ವವಿದ್ಯಾಲಯವನ್ನು 12ನೇ ಶತಮಾನದಲ್ಲಿ ದಾಳಿಕೋರರು ನಾಶಗೊಳಿಸಿದ್ದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಂತರವೇ ಯಾವುದೇ ದೇಶ ಅಭಿವೃದ್ಧಿ ಹೊಂದಲು ಹಾಗೂ ಆರ್ಥಿಕ ಮತ್ತು ಸಾಂಸ್ಕೃತಿಕ ನಾಯಕತ್ವ ಪಡೆಯಲು ಸಾಧ್ಯ ಎಂದು ಮೋದಿ ಹೇಳಿದರು.

ನಮ್ಮ ದೇಶವೂ ಇತಿಹಾಸದಲ್ಲಿ ಈ ರೀತಿಯ ಸ್ಥಾನ ಹೊಂದಿತ್ತು. ನಳಂದ ಹಾಗೂ ವಿಕ್ರಮಶಿಲೆಗಳು ಸಮೃದ್ಧಿಯಾಗಿದ್ದವು. ಭಾರತ ಮತ್ತೆ ವಿಶ್ವದ ಮುಂಚೂಣಿ ಜ್ಞಾನ ಕೇಂದ್ರವಾಗಬೇಕಿದೆ. ಇದಕ್ಕಾಗಿ ನಮ್ಮ ಮಕ್ಕಳಲ್ಲಿ ಆರಂಭದಲ್ಲೇ ಆವಿಷ್ಕಾರದ ಮನೋಭಾವ ಬೆಳೆಸಬೇಕು ಎಂದು ಮೋದಿ ಹೇಳಿದರು.

ಈ ಉದ್ದೇಶಕ್ಕಾಗಿಯೇ ಕೋಟಿ ಮಕ್ಕಳಿಗೆ ಆರಂಭಿಕ ಹಂತದಲ್ಲೇ ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ಮೂಲಕ ಆಧುನಿಕ ತಂತ್ರಜ್ಞಾನ ಪರಿಚಯಿಸಲಾಗುತ್ತಿದೆ. ಗಗನಯಾನ ಹಾಗೂ ಚಂದ್ರಯಾನಗಳು ಬಾಹ್ಯಾಕಾಶ ವಲಯದಲ್ಲಿ ಆಸಕ್ತಿ ಹೆಚ್ಚಿಸುತ್ತಿವೆ ಎಂದವರು ಹೇಳಿದರು.

ದಶಕದ ಹಿಂದೆ ದೇಶದಲ್ಲಿ ಕೇವಲ 100 ನವೋದ್ಯಮಗಳಿದ್ದವು. ಈಗ ಅವುಗಳ ಸಂಖ್ಯೆ 1.30 ಲಕ್ಷಕ್ಕೆ ತಲುಪಿದೆ. ನಾವು ದಾಖಲೆ ಸಂಖ್ಯೆಯ ಪೇಟೆಂಟ್ ಹಾಗೂ ಸಂಶೋಧನಾ ಪ್ರಬಂಧಗಳನ್ನು ದಾಖಲಿಸುತ್ತಿದ್ದೇವೆ ಎಂದೂ ಮೋದಿ ತಿಳಿಸಿದರು.

error: Content is protected !!