ಕೆಎಸ್ಸಾರ್ಟಿಸಿ ಅಧಿಕಾರಿಗಳೊಂದಿಗೆ ಶಾಸಕ ಬಸವಂತಪ್ಪ ಸಭೆ
ದಾವಣಗೆರೆ, ಜೂ.13- ಜಿಲ್ಲೆಯ ಮಾಯಕೊಂಡ ವ್ಯಾಪ್ತಿಯಲ್ಲಿನ ಕೆಲವು ಹಳ್ಳಿಗಳಿಗೆ ಕೆಎಸ್ಆರ್ಟಿಸಿ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಶಾಸಕ ಕೆ.ಎಸ್. ಬಸವಂತಪ್ಪ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚನೆ ನೀಡಿದರು.
ನಗರದ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಸರ್ಕಾರಿ ಬಸ್ ಸೌಲಭ್ಯ ಇಲ್ಲದ ಗ್ರಾಮಗಳಲ್ಲಿ ರೈತರು, ಉದ್ಯೋಗಸ್ಥರು ಹಾಗೂ ವಿದ್ಯಾರ್ಥಿಗಳು ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಸಾಧಿಸಲು ದ್ವಿಚಕ್ರ ವಾಹನ, ಆಟೋ, ಟೆಂಪೋ, ಸರಕು ಸಾಗಣೆ ವಾಹನ ಮತ್ತು ಟ್ರ್ಯಾಕ್ಟರ್ಗಳನ್ನು ಅವಲಂಬಿಸಿದ ಅವ್ಯವಸ್ಥೆ ಬಗ್ಗೆ ವಿವರಿಸಿದರು.
ಬಸ್ ಸೌಲಭ್ಯದಿಂದ ವಂಚಿತರಾದ ಮಾಯಕೊಂಡ ವ್ಯಾಪ್ತಿಯಲ್ಲಿನ ವಿದ್ಯಾರ್ಥಿಗಳು ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲ ಆಗುವ ದೃಷ್ಟಿಯಿಂದ ಕೂಡಲೇ ಈ ಭಾಗಕ್ಕೆ ಸರ್ಕಾರಿ ಬಸ್ ಸೌಲಭ್ಯ ಒದಗಿಸಬೇಕೆಂದು ಕರೆ ನೀಡಿದರು.
ಮಾಯಕೊಂಡದಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ನಿರ್ಧರಿಸಿದ್ದು, ಕೂಡಲೇ ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿಗೆ ಕ್ರಮ ವಹಿಸಬೇಕು ಎಂದು ಹೇಳಿದರು.
ಮಾಯಕೊಂಡ ಬಸ್ ನಿಲ್ದಾಣದಲ್ಲಿ ದಾವಣಗೆರೆ-ಹೊಸದುರ್ಗ ಮಾರ್ಗದಲ್ಲಿ ಸಂಚರಿಸುವ ಬಸ್ಗಳ ನಿಲುಗಡೆಗೆ ವ್ಯವಸ್ಥೆ ಮಾಡುವ ಜತೆಗೆ ಈ ಬಸ್ ನಿಲ್ದಾಣದಲ್ಲಿ ಕಂಟ್ರೋಲರ್ ನೇಮಿಸಿ ನಿರ್ಗಮನ ಮತ್ತು ಆಗಮನ ಬಸ್ಸುಗಳ ಹಾಜರಿ ಹಾಕಲು ಕ್ರಮ ವಹಿಸಬೇಕೆಂದಾಗ, ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಈ ಕುರಿತು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಮಾಯಕೊಂಡ ಮತ್ತು ಬಸವಾಪಟ್ಟಣ ದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಇಲ್ಲಿಂದ ಬೆಂಗಳೂರಿಗೆ ತೆರಳಲು ಬಸ್ ಸೌಲಭ್ಯ ಕಲ್ಪಿಸಬೇಕು ಮತ್ತು ಕೊರೊನಾ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಹಳೇ ಮಾರ್ಗಗಳಲ್ಲಿ ಬಸ್ ಸಂಚಾರ ಪುನರ್ ಆರಂಭ ಮಾಡುವಂತೆ ತಿಳಿಸಿದರು.
ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಮಾರ್ಗವಾಗಿ ಕತ್ತಲಗೆರೆ, ಬೆಳಲಗೆರೆ, ಸಾಗರಪೇಟೆ, ದಾಗಿನಕಟ್ಟೆ, ಕಂಚುಗಾರನಹಳ್ಳಿ ಹಾಗೂ ನಿಲೋಗಲ್ ಮೂಲಕ ಬಸ್ ಸಂಚರಿಸಬೇಕು ಮತ್ತು ಗುಡ್ಡದ ಕುಮಾರನಹಳ್ಳಿ ಮಾರ್ಗವಾಗಿ ಹೊನ್ನಾಳಿ ಮತ್ತು ದಾವಣಗೆರೆ ತಾಲ್ಲೂಕಿನ ಜಮ್ಮಾಪುರ, ಕೆರೆಯಾಗಳಹಳ್ಳಿಗೆ ಬಸ್ ಸಂಚರಿಸಬೇಕು ಹಾಗೂ ಗಿರಿಯಾಪುರ ಮಾರ್ಗವಾಗಿ ಅಣಜಿಗೆ ಹೋಗಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಶಾಸಕರ ಒತ್ತಾಯದ ಮೇರೆಗೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಅವರು ಕೂಡಲೇ ಆ ಮಾರ್ಗಗಳಿಗೆ ಬಸ್ ಸೌಲಭ್ಯ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಣ್ಣ, ಶಂಬಣ್ಣ, ಇದ್ದರು.