ಮನೆ ಖರೀದಿ ಮಾಡುವ ನೆಪ : ನಕಲಿ ದಾಖಲೆಗಳನ್ನು ಸೃಷ್ಟಿಸಿ ಫೈನಾನ್ಸ್ ವ್ಯವಸ್ಥಾಪಕನ ಅಪಹರಣ – ಬಂಧನ

ದಾವಣಗೆರೆ, ಜೂ.13- ಮನೆಯೊಂದನ್ನು ಖರೀದಿ ಮಾಡುವ ನೆಪದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಫೈನಾನ್ಸ್‌ವೊಂದರಿಂದ ಲೋನ್ ಪಡೆದುಕೊಳ್ಳುವ ದುರುದ್ಧೇಶದಿಂದ ಫೈನಾನ್ಸ್ ವ್ಯವಸ್ಥಾಪಕರನ್ನು ಅಪಹರಿಸಿದ ಆರೋಪದಲ್ಲಿ ಪೊಲೀಸರು 7 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಕೆಜೆಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಕಚೇರಿ ವ್ಯವಸ್ಥಾಪಕ ಎಂ.ಎಸ್. ಶರಣು ಅವರನ್ನು ಅಪಹರಿಸಿ, ಹಲ್ಲೆ ನಡೆಸಿ, ಕೊಲೆ ಮಾಡಲು ಯತ್ನಿಸಿದ್ದ ದೂರಿನನ್ವಯ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದಲ್ಲದೇ, ವ್ಯವಸ್ಥಾಪಕ ಶರಣು ಅವರಿಗೆ ಚಿಕಿತ್ಸೆ ಕೊಡಿಸಿ ರಕ್ಷಣೆ ಮಾಡಿದ್ದಾರೆ.

ಹರಿಹರ ತಾಲ್ಲೂಕು ಅಮರಾವತಿ ಗ್ರಾಮದ ಕೆಹೆಚ್‌ಬಿ ಕಾಲೋನಿಯ 174ನೇ ಸಂಖ್ಯೆಯ ಮನೆಯನ್ನು ಖರೀದಿ ಮಾಡುವ ನೆಪದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಆರೋಪಿಗಳ ಪೈಕಿ ಶ್ರೀಮತಿ ಜ್ಯೋತಿ ಶೆಟ್ಟಿ ಕೋಂ ಭೋಜರಾಜ ಶೆಟ್ಟಿ ಫೈನಾನ್ಸ್ ವ್ಯವಸ್ಥಾಪಕರಿಗೆ 49,01,676 ರೂ.ಗಳ  ಲೋನ್  ಮಾಡಿಕೊಡುವಂತೆ ಕೇಳಿಕೊಂಡಿದ್ದರು.

ಜ್ಯೋತಿ ಕೇಳಿಕೊಂಡಂತೆ ಲೋನ್ ಮಂಜೂರು ಮಾಡಿದ್ದ ವ್ಯವಸ್ಥಾಪಕ ಶರಣು, ಲೋನ್ ಹಣಕ್ಕೆ ಸಂಬಂಧಿಸಿದಂತೆ ಚೆಕ್ ನೀಡುವ ಸಂದರ್ಭದಲ್ಲಿ ಆರೋಪಿಗಳು ಹಾಜರುಪಡಿಸಿದ್ದ ದಾಖಲೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಚೆಕ್ ನೀಡಲು ಹಿಂದೇಟು ಹಾಕಿದರು.

ಈ ಹಿನ್ನೆಲೆಯಲ್ಲಿ 2024, ಮೇ 31ರಂದು ಸಂಜೆ ಫೈನಾನ್ಸ್ ಕಚೇರಿಗೆ ಬಂದ ಕರಿಬಸಮ್ಮ ಅಲಿಯಾಸ್ ರೋಜಾ ಎಂಬಾಕೆ ವ್ಯವಸ್ಥಾಪಕ ಶರಣು ಅವರನ್ನು ಭೇಟಿ ಮಾಡಿ, ಲೋನ್‌ಗೆ ಸಂಬಂಧಿಸಿದ ಚೆಕ್ ಕೊಡದಿರುವುದನ್ನು ಪ್ರಶ್ನಿಸಿ ಕಪಾಳಕ್ಕೆ ಹೊಡೆದಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿ, ಕಚೇರಿಗೆ ಹೊರಗೆ ಹೊರಟ ಶರಣು ಅವರನ್ನು ಆರೋಪಿಗಳು ಕಾರಿನಲ್ಲಿ ಅಪಹರಿಸಿದ್ದಾರೆ.

ಕರಿಬಸಮ್ಮ ಅಲಿಯಾಸ್ ರೋಜಾ ಎಂಬಾಕೆ ವ್ಯವಸ್ಥಾಪಕ ಶರಣು ಅವರನ್ನು ಭೇಟಿ ಮಾಡಿ, ಲೋನ್‌ಗೆ ಸಂಬಂಧಿಸಿದ ಚೆಕ್ ಕೊಡದಿರುವುದನ್ನು ಪ್ರಶ್ನಿಸಿ ಕಪಾಳಕ್ಕೆ ಹೊಡೆದಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿ, ಕಚೇರಿಗೆ ಹೊರಗೆ ಹೊರಟ ಶರಣು ಅವರನ್ನು ಆರೋಪಿಗಳು ಕಾರಿನಲ್ಲಿ ಅಪಹರಿಸಿದ್ದರು.

ತಕ್ಷಣವೇ ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಅವರು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಾಕಾಬಂದಿಯನ್ನು ಹಾಕುವಂತೆ ನೀಡಿದ ನಿರ್ದೇಶನದ ಮೇರೆಗೆ, ಹೊನ್ನಾಳಿಯ ವಡ್ಡಿನಕೆರೆ ಹಳ್ಳದ ಬಳಿ ವ್ಯವಸ್ಥಾಪಕ ಶರಣು ಅವರನ್ನು ಆರೋಪಿಗಳು ಅಪಹರಿಸಿಕೊಂಡು ಹೋಗುತ್ತಿದ್ದ  ಕಾರನ್ನು ತಡೆಯುವಲ್ಲಿ ಯಶಸ್ವಿಯಾದರು. 

ಶಿವಮೊಗ್ಗದ ಕಾಶಿಪುರದ ವಾಸಿ ಎನ್ನಲಾದ ಚೇತನ್ ಅಲಿಯಾಸ್ ಚೇತನ್ ರಾಥೋಡ್, ದಾವಣಗೆರೆ ತಾಲ್ಲೂಕು ನೇರ್ಲಿಗೆ ಗ್ರಾಮದ ವಾಸಿ ಎನ್ನಲಾದ ಶ್ರೀಮತಿ ಕರಿಬಸಮ್ಮ ಅಲಿಯಾಸ್ ರೋಜಾ ಯಾನೆ ನೀಲಾ, ಶಿವಮೊಗ್ಗದ ಸೋಮಯ್ಯ ಲೇಔಟ್ ಹಿಂಭಾಗದ ವಾಸಿ ಎನ್ನಲಾದ ಮಂಜ ಯಾನೆ ಮಂಜಾನಾಯ್ಕ, ಶಿಕಾರಿಪುರ ತಾಲ್ಲೂಕು ಹಿರೇಜಂಬೂರು ಗ್ರಾಮದ ವಾಸಿ ಎನ್ನಲಾದ ವಿಶ್ವನಾಥ್ ಮತ್ತು ನಾಗರಾಜ್, ಶಿವಮೊಗ್ಗದ ಬಸವನಗುಡಿ ವಾಸಿ ಎನ್ನಲಾದ ನಜೀರ್ ಖಾನ್ ಅಲಿಯಾಸ್ ನಾಸಿರ್ ಖಾನ್, ಶಿವಮೊಗ್ಗದ  ಬಸವನಗುಡಿ – ಅಮೀರ್ ಅಹ್ಮದ್ ಕಾಲೋನಿ ವಾಸಿ ಎನ್ನಲಾದ ರಾಮು ಬಂಂಧಿತ ಆರೋಪಿಗಳು.

ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಲಾಗಿದ್ದ ಎರಿಟಾ ಮತ್ತು ಸಿಯಾಂಝಾ 2 ಕಾರುಗಳು, ಲ್ಯಾಪ್‌ಟಾಪ್, ಕಂಪ್ಯೂಟರ್, ಚಾಕು ಮತ್ತು ದಾಖಲಾತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಕಾರ್ಯಾಚರಣೆಯು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ವಿಜಯಕುಮಾರ್ ಎಂ. ಸಂತೋಷ್, ಜಿ. ಮಂಜುನಾಥ್, ನಗರ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ಡಿ. ದೊಡ್ಡಮನಿ ಅವರುಗಳ ಮಾರ್ಗದರ್ಶನದಲ್ಲಿ ನಡೆದಿದೆ.

ಕೆಟಿಜೆ ನಗರ ಠಾಣೆ ಪೊಲೀಸ್ ನಿರೀಕ್ಷಕ ಹೆಚ್.ಎಸ್. ಸುನೀಲ್ ಕುಮಾರ್, ಹೊನ್ನಾಳಿ ಠಾಣೆ ನಿರೀಕ್ಷಕ ಮುದ್ದುರಾಜ್, ಕೆಟಿಜೆ ನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಾಗರ್ ಅಕ್ತರ್‌ವಾಲಾ, ಎಎಸ್‌ಐ ಈರಣ್ಣ, ಸಿಬ್ಬಂದಿಗಳಾದ ಪ್ರಕಾಶ್, ಶಂಕರ್ ಜಾಧವ್, ಶಿವರಾಜ್, ಮಂಜಪ್ಪ, ಮಂಜೇಗೌಡ, ಚಂದ್ರಪ್ಪ, ಶ್ರೀನಿವಾಸ್, ಗಿರೀಶ್, ಹರೀಶ್, ಹೊನ್ನಾಳಿ ಠಾಣೆ ಸಿಬ್ಬಂದಿಗಳಾದ ಬಸವರಾಜ್, ಮಲ್ಲೇಶಪ್ಪ, ಜಗದೀಶ್, ಕುಮಾರನಾಯ್ಕ, ಲೋಕೇಶ್, ವೆಂಕಟೇಶ್ ಅವರುಗಳ ಕಾರ್ಯವನ್ನು ಎಸ್ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಡಿಸಿದ್ದಾರೆ.

ಆರೋಪಿಗಳಲ್ಲಿ ಚೇತನ್ ಎಂಬಾತ ಇದೇ ರೀತಿಯಾಗಿ ಸರಿಯಾದ ದಾಖಲೆಗಳನ್ನು ನೀಡದೇ ಮೋಸ ಮಾಡಿ ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ನಿಂದ ಸಾಲವನ್ನು ಮಂಜೂರು ಮಾಡಿಸಿಕೊಂಡಿರುವ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಅಲ್ಲದೇ, ಚೇತನ್ ವಿರುದ್ಧ ಈ ಹಿಂದೆಯೂ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!