ಜಯದೇವ ವೃತ್ತದಲ್ಲಿ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ದಾವಣಗೆರೆ, ಜೂ. 11- ನಗರದ ಜಯದೇವ ವೃತ್ತದಲ್ಲಿ ಇಂದು ಎಐಡಿಎಸ್ಓ ನೇತೃತ್ವದಲ್ಲಿ ನೀಟ್ 2024ರ ಹಗರಣವನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರತಿಭಟನೆ ನಡೆಸಿದರು.
ಎಐಡಿಎಸ್ಓ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರು ಮಾತನಾಡಿ, ಈ ವರ್ಷದ ಫಲಿತಾಂಶದಲ್ಲಿ 67 ಅಭ್ಯರ್ಥಿಗಳು 720ಕ್ಕೆ 720 ಅಂಕಗಳನ್ನು ತೆಗೆದುಕೊಂಡು ಮೊದಲ ಸ್ಥಾನದಲ್ಲಿದ್ದಾರೆ. ನೀಟ್ ಪರೀಕ್ಷೆಯ ಇತಿಹಾಸದಲ್ಲೇ ಕಾಣದಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಈ ಬಾರಿ 720 ಅಂಕಗಳನ್ನು ಪಡೆದಿದ್ದಾರೆ. ಆ ವಿದ್ಯಾರ್ಥಿಗಳಲ್ಲಿ ಹಲವರು ಒಂದೇ ಪರೀಕ್ಷಾ ಕೇಂದ್ರದಲ್ಲಿ ಇರುವುದು ಅಕ್ರಮಗಳ ಕಡೆಗೆ ಬೆರಳು ಮಾಡಿ ತೋರಿಸುತ್ತದೆ ಎಂದು ದೂರಿದರು.
ನೀಟ್ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳಿರುವ ಕಾರಣ ಗಳಿಸಲು ಸಾಧ್ಯವೇ ಇಲ್ಲದಂತಹ 718, 719 ಅಂಕಗಳನ್ನು ಹಲವು ವಿದ್ಯಾರ್ಥಿಗಳು ಪಡೆದಿದ್ದಾರೆ. ಇಲ್ಲಿ ಈ ರೀತಿಯ ಫಲಿತಾಂಶಕ್ಕೆ, ಹಲವು ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿರುವುದಾಗಿ ಹಾಗೂ ಆ ಕಾರಣದಿಂದಾಗಿ ಆ ಫಲಿತಾಂಶಗಳು ಬಂದಿರುವುದಾಗಿ ಎನ್ಟಿಎ ಸಮಜಾಯಿಷಿ ನೀಡಿದೆ. ಆದರೆ ಕೃಪಾಂಕಗಳ ಬಗ್ಗೆ ಈ ಹಿಂದೆ ಎಲ್ಲಿಯೂ ಎನ್ಟಿಎ ಒಂದು ನಿರ್ದಿಷ್ಟ ಮಾದರಿಯನ್ನು ನೀಡಿಲ್ಲ. ಪ್ರಶ್ನೆ ಪತ್ರಿಕೆ ತಡವಾಗಿ ನೀಡಿದ್ದಕ್ಕಾಗಿ ಕೃಪಾಂಕಗಳನ್ನು ನೀಡಿರುವ ಅಸಂಬದ್ಧ ಕಾರಣವನ್ನು ಕೊಟ್ಟಿರುವ ಎನ್ಟಿಎಗೆ ಲಕ್ಷಾಂತರ ವಿದ್ಯಾರ್ಥಿಗಳ ಬಗ್ಗೆ ಇರುವ ನಿರ್ಲಕ್ಷ್ಯ ಮತ್ತು ನಿಷ್ಕಾಳಜಿಯನ್ನು ಇದು ಎತ್ತಿ ತೋರಿಸುತ್ತದೆ.
ಈ ಅಕ್ರಮ ಕೇವಲ ಒಂದು ಹಗರಣವಲ್ಲ, ಅದು ವಿದ್ಯಾರ್ಥಿ ಸಮೂಹಕ್ಕೆ ಎಸಗಿರುವ ಘೋರ ಅಪರಾಧವೇ ಆಗಿದೆ. ಇನ್ನೊಂದೆಡೆ, ಬಿಹಾರ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಕೇಳಿ ಬಂದಿರುವುದು ಆತಂಕಕಾರಿಯಾಗಿದೆ.
ಈ ಪ್ರವೇಶ ಪರೀಕ್ಷೆಗಳ ದಂಧೆಯನ್ನು ಹಾಗೂ ಈ ಬಾರಿ ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳನ್ನು ಮಟ್ಟ ಹಾಕಲು ದೇಶದಾದ್ಯಂತ ಬೃಹತ್ ಹೋರಾಟ ನಡೆಸಲು ವಿದ್ಯಾರ್ಥಿಗಳು ಸಜ್ಜಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕೂಡಲೇ ನ್ಯಾಯಾಂಗ ತನಿಖೆ ನಡೆದು ನೀಟ್ ಪರೀಕ್ಷಾ ಫಲಿತಾಂಶದ ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆ ಆಗಬೇಕು ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ. ಎಸ್., ಉಪಾಧ್ಯಕ್ಷರಾದ ಕಾವ್ಯ ಬಿ. ಯೋಗೇಶ್, ನಂದೀಶ್, ಗೌತಮ್, ಆಕಾಶ್, ಮುಂತಾದ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.