ಸಾಂಸ್ಕೃತಿಕ ರೂವಾರಿ ಈಶ್ವರಪ್ಪಗೆ ನುಡಿ ನಮನ

ಸಾಂಸ್ಕೃತಿಕ ರೂವಾರಿ ಈಶ್ವರಪ್ಪಗೆ ನುಡಿ ನಮನ

ಡಾ. ಎಂ.ಜಿ. ಈಶ್ವರಪ್ಪನವರು ಇನ್ನೂ ಬದುಕಬೇಕಿತ್ತು : ಬಿ.ಎನ್. ಮಲ್ಲೇಶ್

ದಾವಣಗೆರೆ, ಜೂ.2- ದಾವಣಗೆರೆ ಜಿಲ್ಲೆಗೆ ಸಾಂಸ್ಕೃತಿಕ ಜೀವಂತಿಕೆಯ ಕಳೆ ತುಂಬಿದ ಡಾ.ಎಂ.ಜಿ. ಈಶ್ವರಪ್ಪ ಅವರು ಇನ್ನೂ 10 ವರ್ಷಗಳ ಕಾಲ ಬದುಕಬೇಕಿತ್ತು ಎಂದು ಹಿರಿಯ ಪತ್ರಕರ್ತ ಬಿ.ಎನ್‌. ಮಲ್ಲೇಶ್‌ ದುಃಖ ವ್ಯಕ್ತಪಡಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ಸಾಂಸ್ಕೃತಿಕ ರೂವಾರಿ ಡಾ.ಎಂ.ಜಿ. ಈಶ್ವರಪ್ಪನವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಶ್ವರಪ್ಪನವರು ಕೆಟ್ಟವರಲ್ಲೂ ಒಳ್ಳೆತನ ಕಾಣುತ್ತಿದ್ದ ಗುಣವಂತರಾಗಿದ್ದರು. ಯಾರನ್ನೂ ಲಘುವಾಗಿ ಕಾಣದೇ, ಹಿಯಾಳಿಸದೇ ಪ್ರೀತಿಯಿಂದ ಎಲ್ಲರ ಮಧ್ಯೆ ಬೆರೆತಿದ್ದರು ಎಂದು ನೆನಪಿಸಿಕೊಂಡರು.

ಗುರುಗಳಿಗೆ ಇದ್ದಕ್ಕಿದ್ದಂತೆ ಹೀಗಾಗಿದ್ದು ನಂಬಲಾಗುತ್ತಿಲ್ಲ. ಅವರು ಸೇರಿದ್ದ ದವಾಖಾನೆಯ ಕೊಠಡಿಯಲ್ಲಿ ಟಿವಿ, ಮೊಬೈಲ್‌ ಹಾಗೂ ಪತ್ರಿಕೆಗಳು ಇರಲಿಲ್ಲ. ಅವರ ಕೊನೆಯ ಘಳಿಗೆ ಅತ್ಯಂತ ನೋವಿ ನಿಂದ ಕೂಡಿತ್ತು ಎಂದರು.

ಜನ ಸಾಮಾನ್ಯರಿಗೂ ಸಾಂಸ್ಕೃತಿಕ ಅಭಿರುಚಿ ಉಣಬಡಿಸಿದ ಅವರ ಕ್ರಿಯಾಶೀಲತೆ, ಬದ್ಧತೆ ಹಾಗೂ ಅರ್ಹ ನಂಬಿಕೆಯಿಂದ ಎಲ್ಲರ ಹೃದಯ ಗೆದ್ದಿದ್ದಾರೆ ಎಂದು ಸ್ಮರಿಸಿದರು.

ಈ ದುಃಖದ ಸಂಗತಿ ತಿಳಿದ ಎಲ್ಲ ಪರಿಚ ಯಸ್ಥರು ಅಕ್ಷರ ಸಹ ಕಣ್ಣಿರು ಹಾಕಿದ್ದಾರೆ ಎಂದರು.

ಹಿರಿಯ ಪತ್ರಕರ್ತ ಬಾ.ಮ. ಬಸವರಾಜ್‌ ಮಾತನಾಡಿ, ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅನೇಕರನ್ನು ಬೆಳೆಸಿದ ಕೀರ್ತಿ ಈಶ್ವರಪ್ಪನವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಭಾಷಾಕರ್ಮಿ, ರಂಗಕರ್ಮಿಯಾಗಿ ತಾವು ಹೋಗುವ ದಾರಿಯಲ್ಲಿ ಇತರರನ್ನು ಕೈ ಹಿಡಿದು ನಡೆಸಿದ್ದಾರೆ. ಇಂತಹ ಅಪರೂಪ ಹಾಗೂ ಸಂಕೀರ್ಣವಾದ ವ್ಯಕ್ತಿತ್ವ ಎಲ್ಲೂ ಸಿಗದು ಎಂದರು.

ಎಂ.ಜಿ ಅವರು ಹಿಂದೆ ಬಳ್ಳಾರಿ ಜೈಲಿನಲ್ಲಿದ್ದಾಗ ಕೈದಿಗಳಿಂದಲೇ ನಾಟಕ ಪ್ರದರ್ಶನ ಮಾಡಿಸಿದ್ದರು. ಅಂತಹ ಕ್ರಿಯಾಶೀಲತೆ ಅವರಲ್ಲಿತ್ತು ಎಂದು ನಮನ ಸಲ್ಲಿಸಿದರು.

ಜಿಲ್ಲಾ ಕಸಾಪ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಎಂ.ಜಿ. ಈಶ್ವರಪ್ಪನವರ ಸಾಹಿತ್ಯ ಕೃಷಿಗೆ ಎಲ್ಲ ಸಂಘ-ಸಂಸ್ಥೆಗಳು ಗೌರವ ಸಲ್ಲಿಸಿವೆ. ಇಂತಹ ವ್ಯಕ್ತಿತ್ವ ಕಳೆದುಕೊಂಡ ನಂತರ ನಮ್ಮ ಸಾಂಸ್ಕೃತಿಕ ಮೌಲ್ಯ ಕಳೆದಿದೆ ಎಂಬ ಭಾವ ಕಾಡುತ್ತಿದೆ ಎಂದರು.

ವಕೀಲರಾದ ಎಲ್.ಎಚ್. ಅರುಣಕುಮಾರ್ ಮಾತನಾಡಿ, ಅತ್ಯಂತ ಮಾನವೀಯ ಸಂಬಂಧ ಇಟ್ಟುಕೊಂಡಿದ್ದ ನನ್ನ ಗುರು ಅವರು. ಡಿಆರ್ಎಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ನಾಡಿನ ಹೆಸರಾಂತ ಸಾಹಿತಿಗಳು, ವಾಗ್ಮಿಗಳನ್ನು ಕರೆಸಿ ಕಾರ್ಯಕ್ರಮ ನಡೆಸುತ್ತಿದ್ದರು ನೆನಪಿಸಿಕೊಂಡರು.

ವ್ಯಂಗ್ಯ ಚಿತ್ರಕಾರ ಡಾ.ಎಚ್‌.ಬಿ. ಮಂಜುನಾಥ್‌, ಸಾಹಿತಿಗಳಾದ ಎಚ್‌.ಎಸ್‌. ಮಂಜುನಾಥ್‌ ಕುರ್ಕಿ, ಸುಭಾಸ್‌, ದಾದಾಪೀರ್‌ ನವಿಲೇಹಾಳ್‌, ವೈ. ವೃಷಭೇಂದ್ರಪ್ಪ, ನಾ. ರೇವನ್‌, ಮಂಜುನಾಥ್‌, ಆನಂದ್ ಋಗ್ವೇದಿ, ಸುಮತಿ ಜಯಪ್ಪ, ಸಂಧ್ಯಾ ಸುರೇಶ್‌, ಮಲ್ಲಮ್ಮ ನಾಗರಾಜ್‌, ಎಲ್‌.ಜಿ. ಮಧು ಕುಮಾರ್‌, ಹೆಗ್ಗೆರೆ ರಂಗಪ್ಪ, ಟಿ. ಶೈಲಜಾ, ರೇವಣಸಿದ್ದಪ್ಪ ಅಂಗಡಿ, ಜಗದೀಶ್‌ ಕೂಲಂಬಿ, ಮಲ್ಲಿಕಾರ್ಜುನ ಕಲಮರಹಳ್ಳಿ, ಚಿಂದೋಡಿ ಶಂಭುಲಿಂಗಪ್ಪ, ಜಿ.ಟಿ. ಪ್ರಕಾಶ್‌ ಸೇರಿದಂತೆ ಇತರರು ಇದ್ದರು.

error: Content is protected !!