ನಾನು ಯಾರಿಗೂ ಡೀಲ್ ಆಗಿಲ್ಲ; `ಡೀಲ್’ ಆಗಿದ್ದೇ ಕಾಂಗ್ರೆಸ್-ಬಿಜೆಪಿ ನಡುವೆ: ವಿನಯ್‌ಕುಮಾರ್

ನಾನು ಯಾರಿಗೂ ಡೀಲ್ ಆಗಿಲ್ಲ; `ಡೀಲ್’ ಆಗಿದ್ದೇ ಕಾಂಗ್ರೆಸ್-ಬಿಜೆಪಿ ನಡುವೆ: ವಿನಯ್‌ಕುಮಾರ್

 ದಾವಣಗೆರೆ,ಮೇ 8-  ನಾನು ಸ್ವಾಭಿಮಾನಿಯಾಗಿ ಕಣಕ್ಕಿಳಿದಿದ್ದೆ. ಯಾರಿಗೂ ದುಡ್ಡು ಹಂಚಿಲ್ಲ.  ಮತ ಖರೀದಿ ಮಾಡದೇ ಪ್ರಜಾಪ್ರಭುತ್ವ, ಸಂವಿಧಾನದ ಆಶಯದಂತೆ ಚುನಾವಣೆ ನಡೆಸಿದ್ದೇವೆ. ಅಲ್ಲದೇ ಇಲ್ಲಿ ನಾನು ಯಾರಿಗೂ ಡೀಲ್ ಆಗಿಲ್ಲ,  ನಿಜವಾಗಿಯೂ ಡೀಲ್ ಆಗಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಎಂದು ಪಕ್ಷೇತರ ಅಭ್ಯರ್ಥಿ  ಜಿ. ಬಿ. ವಿನಯ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರ ಜೊತೆ ಸಭೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು,  ಮತದಾನದ ಕುರಿತಂತೆ ಮಾಹಿತಿ ನೀಡಿದರು.

ಕಳೆದ ಒಂದು ತಿಂಗಳಿನಿಂದ ಹಗಲಿರುಳು ಶ್ರಮಿಸಿ ಒಂದೊಳ್ಳೆಯ ಫಲಿತಾಂಶದ ಭರವಸೆ ಮೂಡಿಸಿದ್ದೀರಿ.  ಯಶಸ್ವಿಯಾಗಿ ಚುನಾವಣೆ ಮಾಡಿದ ಎಲ್ಲಾ ಅಭಿಮಾನಿಗಳು, ಹಿತೈಷಿಗಳು, ಬಂಧು, ಭಗಿನಿಯರು, ಸಂಘಟನೆ, ಸಂಘ, ಸಂಸ್ಥೆಗಳ ವಿವಿಧ ಸ್ಥರದ ಎಲ್ಲಾ ಪ್ರಮುಖರು, ಸ್ನೇಹಿತರು, ಕುಟುಂಬ ವರ್ಗದವರು, ಅಭಿಮಾನಿಗಳು, ಹಿತೈಷಿಗಳು ಕೆಲಸ ಮಾಡಿದ್ದಾರೆ. ನನ್ನ ಜೊತೆ ನಿಂತಿದ್ದಾರೆ  ಅವರು ತೋರಿದ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ ಎಂದರು.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತದಾನದ ಪ್ರಮಾಣವೂ ಹೆಚ್ಚಳವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ಸ್ವಾಭಿಮಾನಿ ಗೆಲುವು ಆಗಲಿದೆ. ಮತದಾರರು ಕೈಹಿಡಿಯಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು. ಇನ್ನು 2-3 ದಿನಗಳಲ್ಲಿ ದೊಡ್ಡ ಸಭೆ ನಡೆಸಿ, ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಸಾಂತ್ವನ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾರತೀಯ ಜನಕಲಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ  ಪಿ.ಷಣ್ಮುಖ ಸ್ವಾಮಿ ಅವರ ಪುತ್ರಿ ಕು.  ಶಾಂತಲಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು  ವಿನಯ್ ಕುಮಾರ್ ಪಡೆದರು. ಮೃತಳ ಕುಟುಂಬದವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.

error: Content is protected !!