ಮೂರು ದಶಕಗಳಾದರೂ ಸುಸಜ್ಜಿತ ಆಸ್ಪತ್ರೆ, ಹೈಟೆಕ್ ಶಾಲೆ, ಕೈಗಾರಿಕೆಗಳು ಯಾಕೆ ಬಂದಿಲ್ಲ

ಮೂರು ದಶಕಗಳಾದರೂ ಸುಸಜ್ಜಿತ ಆಸ್ಪತ್ರೆ, ಹೈಟೆಕ್ ಶಾಲೆ, ಕೈಗಾರಿಕೆಗಳು ಯಾಕೆ ಬಂದಿಲ್ಲ

ಹೊನ್ನಾಳಿ, ಮೇ 3 – ಜಿಲ್ಲೆಯಲ್ಲಿ ಮೂರು ದಶಕಗಳಾದರೂ ಸುಸಜ್ಜಿತ ಆಸ್ಪತ್ರೆ, ಸರ್ಕಾರಿ ಮೆಡಿಕಲ್ ಕಾಲೇಜು, ಹೈಟೆಕ್ ಶಾಲೆಗಳು, ದೊಡ್ಡ ಕೈಗಾರಿಕೆಗಳು ಯಾಕೆ ಬಂದಿಲ್ಲ ? ಎಂದು   ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಪ್ರಶ್ನಿಸಿದರು. ಹೊನ್ನಾಳಿ-ನ್ಯಾಮತಿ ತಾಲ್ಲೂಕಿನ ಸಾಗರಪೇಟೆಯಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು 35 ವರ್ಷಗಳಿಂದ ಶಾಸಕರಾಗಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿಲ್ಲ. ಹೈಟೆಕ್ ಶಾಲೆಗಳೂ ಆಗಿಲ್ಲ. ದೊಡ್ಡ ಕೈಗಾರಿಕೆಗಳನ್ನು ತರಲು ಸಾಧ್ಯವಾಗಿಲ್ಲ. ಅದೇ ರೀತಿ ಜಿ.ಎಂ. ಸಿದ್ದೇಶ್ವರ ಅವರು ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿ ಹೋಗಿದ್ದರೂ ಪ್ರಯೋಜನ ಮಾತ್ರ ಶೂನ್ಯ ಎಂದು ಅವರು ಕಿಡಿ ಕಾರಿದರು.

ಹೊನ್ನಾಳಿ – ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ ಮೆಕ್ಕೆಜೋಳ, ಈರುಳ್ಳಿ, ಕೆಲವು ಕಡೆಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ತುಂಗಭದ್ರಾ ನದಿ ಹರಿಯುತ್ತದೆ. ಆದರೂ ಈ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಸಮಸ್ಯೆಗಳು ಹಾಗೆಯೇ ಇವೆ. ನೀರಿಲ್ಲದೇ ರೈತರು ಪರದಾಡುತ್ತಿದ್ದಾರೆ. ಮಳೆ ಹೆಚ್ಚು ಬಂದರೆ ಪ್ರವಾಹ ತಲೆದೋರುತ್ತದೆ. ಮನೆಗಳಿಗೆ ನೀರು ನುಗ್ಗುತ್ತದೆ, ಜಮೀನುಗಳು ಜಲಾವೃತಗೊಳ್ಳುತ್ತವೆ. ಎಷ್ಟೋ ಹಳ್ಳಿಗಳಲ್ಲಿ ಸೇತುವೆಗಳು ನಿರ್ಮಾಣ ಆಗಿಲ್ಲ. ಚುನಾವಣೆ ಬಂದಾಗ ನಿಮ್ಮ ಬಳಿ ಎಲ್ಲರೂ ಬರುತ್ತಾರೆ. ಭರವಸೆ ಕೊಡುತ್ತಾರೆ. ಮತ್ತೆ ಬರುವುದು ಮುಂದಿನ ಚುನಾವಣೆಗೆ. ಹಾಗಾಗಿ, ಇಂತಹವರನ್ನು ತಿರಸ್ಕರಿಸಿ, ನನ್ನನ್ನು ಆರಿಸಿ ಕಳುಹಿಸಿ ಎಂದು ಮನವಿ ಮಾಡಿದರು.

ತುಂಗಭದ್ರಾ ನದಿ ಉಕ್ಕಿ ಹರಿದರೆ ಎಷ್ಟೋ ಕಡೆಗಳಲ್ಲಿ ಸೇತುವೆಗಳು ಕುಸಿಯುತ್ತವೆ. ಜನರು ಓಡಾಡಲು ಕಷ್ಟವಾಗುತ್ತದೆ. ರೈತರು, ಜನರು ಎದುರಿಸುವ ಕಷ್ಟಗಳು ಅಷ್ಟಿಷ್ಟಲ್ಲ. ಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗಲು ಆಗುವುದಿಲ್ಲ.

ಸಮಸ್ಯೆಗಳ ಸುಳಿಯಲ್ಲಿ ಬದುಕುವುದಕ್ಕಿಂತ ಸ್ವಾಭಿ ಮಾನಿಗಳಾಗೋಣ. ಅಭಿವೃದ್ಧಿಗೆ ಕೈಜೋಡಿಸೋಣ. ಅಧಿಕಾರಕ್ಕಾಗಿ ಚುನಾವಣೆಗೆ ನಿಲ್ಲುವವರಿಗೆ ತಕ್ಕ ಪಾಠ ಕಲಿಸೋಣ ಎಂಬ ಶಪಥ ಮಾಡಿ. ನಿಮ್ಮ ಮನೆ ಬಾಗಿಲಿಗೆ ಅಭಿವೃದ್ಧಿ ಹುಡುಕಿಕೊಂಡು ಬರುವಂತೆ ಮಾಡಿ ತೋರಿಸುತ್ತೇನೆ ಎಂದು ಭರವಸೆ ನೀಡಿದರು.

error: Content is protected !!