ಗ್ಯಾರಂಟಿ ಹೆಸರಲ್ಲಿ ಬೆಲೆ ಏರಿಕೆ, ಸಾಲ

ಗ್ಯಾರಂಟಿ ಹೆಸರಲ್ಲಿ ಬೆಲೆ ಏರಿಕೆ, ಸಾಲ

ದಾವಣಗೆರೆ, ಮಾ. 15 – ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನರ ಮೇಲೆ ಸಾಲ ಹೇರಿದೆ. ವಿದ್ಯುತ್, ಹಾಲು, ಮದ್ಯ, ಸ್ಟಾಂಪ್ ಶುಲ್ಕ ಗಳನ್ನು ಹೆಚ್ಚಿಸಿದೆ. ಪರಿಶಿಷ್ಟರ ಹಣವನ್ನು ಅನ್ಯ ಉದ್ದೇಶಕ್ಕೆ `ಕದಿಯಲಾಗಿದೆ’ ಎಂದು ಬಿಜೆಪಿ ನಾಯಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಸದ ಜಿ.ಎಂ. ಸಿದ್ದೇಶ್ವರ ಅವರ ಹತ್ತು ವರ್ಷಗಳ ಸಾಧನಾ ಪತ್ರ ಬಿಡುಗಡೆ ಹಾಗೂ ಲೋಕಸಭಾ ಚುನಾವಣಾ ಕಾರ್ಯಾಲಯದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪರಿಶಿಷ್ಟರ ಸಮುದಾಯಕ್ಕಾಗಿ ಮೀಸಲಿಡಬೇಕಿದ್ದ 11 ಸಾವಿರ ಕೋಟಿ ರೂ.ಗಳನ್ನು ಅನ್ಯ ಉದ್ದೇಶಕ್ಕೆ ಬಳಸಲಾ ಗಿದೆ. ಪರಿಶಿಷ್ಟರ ಹಣವನ್ನು ಕದಿಯಲಾಗಿದೆ ಎಂದವರು ಆರೋಪಿಸಿದರು.

ಸಿದ್ದರಾಮಯ್ಯ ಸರ್ಕಾರ ವಿದ್ಯುತ್ ಬೆಲೆ ಏರಿಕೆ ಮಾಡಲಾಗಿದೆ. ಹಾಲು, ಮದ್ಯ, ಸ್ಟಾಂಪ್ ಶುಲ್ಕಗಳನ್ನು ಹೆಚ್ಚಿಸಲಾಗಿದೆ. ರೈತರಿಗೆ ನೀಡಲಾಗುತ್ತಿದ್ದ ವಾರ್ಷಿಕ 4 ಸಾವಿರ ರೂ.ಗಳನ್ನು ನಿಲ್ಲಿಸಲಾಗಿದೆ ಎಂದು ಅಶೋಕ್ ಕಿಡಿ ಕಾರಿದರು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗುತ್ತಿಲ್ಲ . ಬೋರ್‌ ಕೊರೆಸಲೂ ಸರ್ಕಾರದ ಬಳಿ ಹಣ ಇಲ್ಲ. ಸರ್ಕಾರ ಪಾಪರ್ ಆಗಿದೆ, ಇದು ಗತಿಗೆಟ್ಟ ಸರ್ಕಾರ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 1.05 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಪ್ರತಿಯೊಬ್ಬರ ತಲೆಯ ಮೇಲೆ ತಲಾ 97 ಸಾವಿರ ರೂ.ಗಳ ಸಾಲವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಈ ಅವಧಿಯಲ್ಲೇ ಸಾಲ ಮಾಡಿ ರಾಜ್ಯವನ್ನು ಹಳ್ಳಕ್ಕೆ ದೂಡುವ ಯೋಜನೆ ಮಾಡಿದ್ದಾರೆ ಎಂದು ಟೀಕಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಪ್ರಧಾನಿ ಮೋದಿ ಅವರ ಯೋಜನೆಗಳು ಶಾಶ್ವತ ಗ್ಯಾರಂಟಿ ಸ್ವರೂಪದ್ದಾಗಿವೆ. ಸ್ಮಾರ್ಟ್ ಸಿಟಿ ಸೇರಿದಂತೆ ಪ್ರತಿ ತಾಲ್ಲೂಕಿನಲ್ಲೂ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಪ್ರಧಾನಿ ಮೋದಿ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಿ. ಮಹಿಳಾ ಶಕ್ತಿ ಬಲಪಡಿಸಲು ಮಹಿಳೆಯರು ಒಗ್ಗಟ್ಟಿನಿಂದ ತಮಗೆ ಮತ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಮಾಜಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ತಮ್ಮ ಸಮಾಜದ ಮತಗಳನ್ನು ಬಿಜೆಪಿಗೆ ತರಲು ಶ್ರಮಿಸುವುದಾಗಿ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿ ಮುಖ್ಯ ಸಚೇತಕರಾಗಿರುವ ಎನ್.ರವಿಕುಮಾರ್ ಮಾತನಾಡಿ, ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗುವ ಬಗ್ಗೆ ಭಾರತಕ್ಕಷ್ಟೇ ಅಲ್ಲದೇ ಇಡೀ ವಿಶ್ವಕ್ಕೇ ವಿಶ್ವಾಸ ಮೂಡಿದೆ ಎಂದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಿಪಡಿಸಲಾಗುವುದು. ಬೇಸರವಾಗಿ ಮನೆಯಲ್ಲಿ ಕುಳಿತವರನ್ನು ಕರೆ ತಂದು ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ ಎಂದರು.

ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಮಾತನಾಡಿ, ಮತ್ತೆ ಬಿಜೆಪಿಗೆ ಬಂದಿರುವುದು ತವರು ಮನೆಗೆ ವಾಪಸ್ಸಾದಂತಹ ಭಾವನೆ ತಂದಿದೆ. ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಅವರ ಜೊತೆಗೂಡಿ ಬಿಜೆಪಿಗೆ ಜಗಳೂರಿನಲ್ಲಿ ಲಕ್ಷಕ್ಕೂ ಹೆಚ್ಚು ಮತಗಳನ್ನು ತರಲು ಶ್ರಮಿಸುವುದಾಗಿ ಹೇಳಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಪಾಲಿಕೆ ಉಪ ಮೇಯರ್ ಯಶೋಧ ಹೆಗ್ಗಪ್ಪ, ಪಾಲಿಕೆ ಪ್ರತಿಪಕ್ಷದ ನಾಯಕ ಪ್ರಸನ್ನ ಕುಮಾರ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ಮುಖಂಡರಾದ ಶಿವಕುಮಾರ್, ಜಿ.ಎಸ್. ಶಾಮ್, ಬಸವಂತಪ್ಪ, ಅಣಬೇರು ಜೀವನಮೂರ್ತಿ, ಜಿ.ಎಂ ಲಿಂಗರಾಜು, ಜಿ.ಎಸ್. ಅನಿತ್, ರಾಜನಹಳ್ಳಿ ಶಿವಕುಮಾರ್, ಕೆ.ಬಿ. ಕೊಟ್ರೇಶ್, ಸಿರಿಗೆರೆ ನಾಗನಗೌಡ್ರು, ಶ್ರೀನಿವಾಸ ದಾಸಕರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!