ಸುತ್ತೂರು ಮಠ ನಿಸ್ವಾರ್ಥ ಸೇವಾ ಕೇಂದ್ರ

ಸುತ್ತೂರು ಮಠ ನಿಸ್ವಾರ್ಥ ಸೇವಾ ಕೇಂದ್ರ

ಸುತ್ತೂರು: ಪಾರ್ವತಮ್ಮ- ಶಾಮನೂರು ಶಿವಶಂಕರಪ್ಪ ಅತಿಥಿ ಗೃಹ ಉದ್ಘಾಟಿಸಿದ ಷಾ

ಮೈಸೂರು, ಮಾ. 11 – ಸಮೀಪದ ಸುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದವರು ನಿರ್ಮಿಸಿರುವ ಪಾರ್ವತಮ್ಮ- ಶಾಮನೂರು ಶಿವಶಂಕರಪ್ಪ ಅತಿಥಿ ಗೃಹವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಉದ್ಘಾಟಿಸಿದರು.

ಸುತ್ತೂರು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಉದ್ಘಾಟನೆ ನಂತರ ಸಭಾ ಕಾರ್ಯಕ್ರಮ ದಲ್ಲಿ ಮಾತನಾಡಿದ ಅಮಿತ್ ಷಾ, ಸುತ್ತೂರು ಮಠವು ನಿಸ್ವಾರ್ಥ ಸೇವೆ ಹಾಗೂ ಪರೋಪಕಾರದ ಕೇಂದ್ರವಾಗಿದೆ ಎಂದು ಬಣ್ಣಿಸಿದರು.

ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಹಿಂದಿನ ಎಲ್ಲ ಮಠಾಧೀಶರಂತೆ ನಿರಂತರವಾಗಿ ಸೇವಾ ಪರಂಪರೆ ಹಾಗೂ ಸೇವಾ ಯಜ್ಞವನ್ನು ಚಾಲನೆಯಲ್ಲಿರಿಸಿದ್ದಾರೆ ಎಂದರು.

ಸುತ್ತೂರು ಮಠವು ಲಕ್ಷಾಂತರ ಜನರು ಹಾಗೂ ಮಕ್ಕಳ ಜೀವನದಲ್ಲಿ ಬೆಳಕು ಚೆಲ್ಲಿದೆ. ಅದರಲ್ಲೂ ದಿವ್ಯಾಂಗರಿ ಗಾಗಿ ಪಾಲಿಟೆಕ್ನಿಕ್ ತೆರೆದಿರುವುದು ಇಡೀ ದೇಶಕ್ಕೆ ಅತ್ಯಂತ ಆದರ್ಶವಾಗಿದೆ ಎಂದು ಅಮಿತ್ ಷಾ ಹೇಳಿದರು.

ಸುತ್ತೂರಿಗೆ ಯಾವ ಕಾರ್ಯಕ್ರಮಕ್ಕೆ ತೆರಳುತ್ತಿದ್ದೀರಿ ಎಂದು ಪತ್ರಕರ್ತರು ಕೇಳಿದ್ದರು. ಆಗ ನಾನು ದೊಡ್ಡ ಭವನದ ಲೋಕಾರ್ಪಣೆಗಾಗಿ ಬರುತ್ತಿದ್ದೇನೆ ಎಂದು ಭಾವಿಸಿಲ್ಲ, ಶ್ರೀಗಳ ಆಶೀರ್ವಾದ ಪ್ರಾಪ್ತಿಗೆ ಬರುತ್ತಿದ್ದೇನೆ ಎಂದು ಉತ್ತರಿಸಿದ್ದೆ ಎಂದೂ ಅಮಿತ್ ಷಾ ಹೇಳಿದರು.

ಸುತ್ತೂರು ಮಠವು ಅಯೋಧ್ಯೆಯಲ್ಲಿ ತನ್ನ ಶಾಖೆ ತೆರೆಯುವ ನಿರ್ಧಾರ ತೆಗೆದು ಕೊಂಡಿರುವುದಕ್ಕಾಗಿ ಅಭಿನಂದಿಸುತ್ತೇನೆ. ಸುತ್ತೂರು ಮಠದ ಸೇವೆಯನ್ನು ನಾವು ಸದಾ ಭಕ್ತಿಯಿಂದ ಸ್ಮರಿಸುತ್ತೇವೆ ಎಂದೂ ಅವರು ಹೇಳಿದರು.

ಕರ್ನಾಟಕದ ಈ ಪವಿತ್ರ ಮಣ್ಣಿನಲ್ಲಿ ಜನಿಸಿದ ಬಸವೇಶ್ವರರು, ವಿಶ್ವದ ಕೋಟ್ಯಂತರ ಜನರಿಗೆ ಪ್ರೇರಣೆ ಹಾಗೂ ಭಕ್ತಿ ತುಂಬಿ ದ್ದಾರೆ. ಅವರ ವಚನಗಳಿಂದ ಕೋಟ್ಯಂತರ ಜನರಿಗೆ ಮೋಕ್ಷದ ದಾರಿ ದೊರೆತಿದೆ. ಸತ್ಯ ಮಾರ್ಗಕ್ಕೆ ಪ್ರೇರಣೆಯಾಗಿದೆ ಹಾಗೂ ಅನೇಕರಿಗೆ ಶಾಂತಿ ದೊರೆತಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುತ್ತೂರು ಮಠದ ಬಗ್ಗೆ ಭಕ್ತಿ ಹೆಚ್ಚಿದೆ. ಹಾಗೆಯೇ ಅಮಿತ್ ಷಾ ಅವರು ಗೃಹ ಮಂತ್ರಿಯಾಗಿ ಮಾತ್ರವಲ್ಲ, ಮಠದ ಸದ್ಭಕ್ತರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನದಲ್ಲಿ ಅತಿ ಹೆಚ್ಚು ಮಾರ್ಗದರ್ಶನ ಮಾಡಿದವರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಹಾಗೂ ಸುತ್ತೂರು ಶ್ರೀಗಳು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀಗಳು ಅಮಿತ್ ಷಾ ಅವರಿಗೆ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ನೀಡಿ ಗೌರವಿಸಿದರು.

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾದ ಮೂರ್ತಿಯನ್ನು ರೂಪಿಸಿದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಸನ್ಮಾನಿಸಲಾಯಿತು.

ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್, ಸಂಸದ ಪ್ರತಾಪ ಸಿಂಹ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!