ದಾವಣಗೆರೆಯಲ್ಲಿರುವಂತಹ ಸುಂದರ, ಸುಸಜ್ಜಿತ ಕನ್ನಡ ಭವನ ಮೈಸೂರಿನಲ್ಲೂ ಇಲ್ಲ : ಡಾ. ಕೆ. ಚಿದಾನಂದಗೌಡ ಮೆಚ್ಚುಗೆ

ದಾವಣಗೆರೆಯಲ್ಲಿರುವಂತಹ ಸುಂದರ, ಸುಸಜ್ಜಿತ ಕನ್ನಡ ಭವನ ಮೈಸೂರಿನಲ್ಲೂ ಇಲ್ಲ : ಡಾ. ಕೆ. ಚಿದಾನಂದಗೌಡ ಮೆಚ್ಚುಗೆ

ದಾವಣಗೆರೆ, ಫೆ. 4 – ಇಲ್ಲಿರುವಂತಹ ಸುಂದರ ಹಾಗೂ ಸುಸಜ್ಜಿತವಾದ ಕನ್ನಡ ಭವನ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಇಲ್ಲ ಎಂದು ಕುವೆಂಪು ವಿವಿಯ ನಿವೃತ್ತ ಉಪಕುಲಪತಿ ಡಾ.ಕೆ. ಚಿದಾನಂದ ಗೌಡ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಇಂದು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಈ ಕನ್ನಡ ಭವನದಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಕುವೆಂಪು ಅವರ ಆತ್ಮಕ್ಕೂ ತೃಪ್ತಿ ಸಿಗುತ್ತದೆ. ಕುವೆಂಪು ಅವರು ತಮ್ಮ ಮನೆಗೆ ಬರುತ್ತಿದ್ದ ಅತಿಥಿಗಳಿಗೆ `ವಿಶ್ವಮಾನವ ಸಂದೇಶ’ ಕಿರು ಪುಸ್ತಕಗಳನ್ನು ನೀಡಿ ಈ ಜಗತ್ತಿನಲ್ಲಿ ಶಾಂತಿ ನೆಲಸಬೇಕಾದರೆ ವಿಶ್ವಮಾನವ ಸಂದೇಶವನ್ನು ನೀವು ಪಾಲಿಸಬೇಕೆಂದು ಹೇಳುತ್ತಿದ್ದರೆಂದು ಅವರು ತಿಳಿಸಿದರು. 

ಮನಸ್ಸು, ಬುದ್ದಿ, ಆತ್ಮ ವಿಶ್ವಾಸವಾದಾಗ ಮಾತ್ರ ಮನುಷ್ಯ ವಿಶ್ವಮಾನವ ಆಗುತ್ತಾನೆ. ಎಲ್ಲಾ ಜನರು ವಿಕಾಸ ಆಗಬೇಕೆಂದು ಮತ್ತು ಸಮಾಜದಲ್ಲಿ ಸಮನ್ವಯ ಬಯಸುತ್ತೇನೆಂದು ಕುವೆಂಪು ಅವರು ಎಲ್ಲರಿಗೂ ಹೇಳುತ್ತಿದ್ದರು.ಅಂತಹ ಮಹಾನ್‌ ವ್ಯಕ್ತಿಯ ಹೆಸರಿನಲ್ಲಿ ಕನ್ನಡ ಭವನ ನಿರ್ಮಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಚಿದಾನಂದಗೌಡರು, 2002ರಿಂದ 2006ರವರೆಗೆ ನಾನು ಕುವೆಂಪು ವಿವಿಯ ವಿಸಿ ಆಗಿದ್ದಾಗ ದಾವಣಗೆರೆಗೆ ಪ್ರೀತಿಯಿಂದ ಬರುತ್ತಿದ್ದೆ. ಕನ್ನಡ ಭವನಕ್ಕೆ ನಿವೇಶನ ನೀಡುವಂತೆ ಅಂದು ಸಿಂಡಿಕೇಟ್‌ ಸದಸ್ಯರಾಗಿದ್ದ ಎಸ್‌.ಬಿ. ರಂಗನಾಥ್‌ ಅವರ ಆಸಕ್ತಿ ಮತ್ತು ಒತ್ತಡ ಹೆಚ್ಚಾಗಿದ್ದರ ಪರಿಣಾಮ ನಾವು ಈ ಜಾಗವನ್ನು ನೀಡಿದ್ದೆವು. ಈಗ ಕಟ್ಟಡ ನೋಡಿದ, ನಾವು ಒಳ್ಳೆಯ ಕೆಲಸ ಮಾಡಿದೆವು ಎಂಬ ಆತ್ಮತೃಪ್ತಿ ಇದೆ ಎಂದು ಹೇಳಿದರು. ವಿಜ್ಞಾನ-ತಂತ್ರಜ್ಞಾನ ಬೆಳೆದು ವಿದ್ಯುತ್‌ ದೀಪಗಳನ್ನು ಬೆಳಗಿಸುವ ವ್ಯವಸ್ಥೆ ಇದ್ದರೂ ನಾವು ಮಾತ್ರ ಜ್ಞಾನದ ಸಂಕೇತವಾದ ಎಣ್ಣೆ ಹಾಕಿದ ದೀಪವನ್ನೇ ಬೆಳಗಿಸುತ್ತೇವೆ ಎಂದರು.

ವಿಜ್ಞಾನ-ತಂತ್ರಜ್ಞಾನ ಬಳಸಿ ನಮ್ಮ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗಬೇಕಿದ್ದು, ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮವಾಗಿದ್ದರೂ ಶಬ್ಧಗಳ ಕೊರತೆಯನ್ನು ಅನುಭವಿಸುತ್ತದೆ. ಕನ್ನಡದಲ್ಲಿ ಮಾವಿನಕಾಯಿಗೆ 4-5 ಹೆಸರು ಕರೆಯುತ್ತೇವೆ. ಆದರೆ ಇಂಗ್ಲಿಷ್‌ನಲ್ಲಿ ಮ್ಯಾಂಗೋ ಮಾತ್ರ ಅನ್ನುತ್ತೇವೆ. ನಿಮ್ಮ ತಂದೆಗೆ ನೀನು ಎಷ್ಟನೇ ಮಗ ಎಂಬ ಪ್ರಶ್ನೆಯನ್ನು ಇಂಗ್ಲಿಷ್‌ನಲ್ಲಿ ಕೇಳಲು ಪದಗಳೇ ಇಲ್ಲ. ಹಾಗಾಗಿ ಸಮೃದ್ಧವಾದ ನಮ್ಮ ಕನ್ನಡ ಭಾಷೆಯನ್ನು ನಾವು ಹೆಚ್ಚು ಪ್ರೀತಿಸಿ, ಬಳಸೋಣ ಎಂದು ಡಾ. ಕೆ. ಚಿದಾನಂದಗೌಡ ಕರೆ ನೀಡಿದರು.

ಅಭಿನಂದನಾ ನುಡಿಗಳನ್ನಾಡಿದ ನಿವೃತ್ತ ಪ್ರಾಚಾರ್ಯ ನಾ. ಲೋಕೇಶ್‌ ಒಡೆಯರ್‌ ಅವರು, ಅಗಾಧವಾದದ್ದನ್ನು, ಅಪರಿಮಿತವಾದದ್ದನ್ನು ಸಾಧಿಸಿರುವ ಚಿದಾನಂದಗೌಡರು, ಆದರ್ಶ ವ್ಯಕ್ತಿಯಾಗಿದ್ದಾರೆ. 

ಸ್ವಾರ್ಥರಹಿತವಾಗಿ, ನಿಷ್ಪಕ್ಷವಾಗಿ, ಪಾರದರ್ಶಕವಾಗಿ ಕೆಲಸ ಮಾಡಿದ ಕೀರ್ತಿ ಹೊಂದಿರುವ ಚಿದಾನಂದಗೌಡರು, ಕುವೆಂಪು ವಿವಿಯ ಗೌರವ, ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದರು. 

ಸಿಂಡಿಕೇಟ್‌ ಸಭೆಯಲ್ಲಿ ಎಷ್ಟೇ ವಿರೋಧವಿದ್ದರೂ ಎಸ್‌.ಬಿ. ರಂಗನಾಥ್‌ ಅವರ ಒತ್ತಡಕ್ಕೆ ಮಣಿದು, ಈ ಜಾಗವನ್ನು ಚಿದಾನಂದಗೌಡರು ನೀಡಿದ್ದರ ಫಲವಾಗಿ ಇಂದು ನಾವು-ನೀವೆಲ್ಲರೂ ಇಲ್ಲಿ ಕುಳಿತು ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಕೇಳುವ-ನೋಡುವ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿ ಚಿದಾನಂದಗೌಡರನ್ನು ಈ ದಿನ ಕರೆದು ಗೌರವಿಸುವ ಕೆಲಸ ಮಾಡಿರುವ ಜಿಲ್ಲಾ ಕಸಾಪವನ್ನು ಲೋಕೇಶ್ ಒಡೆಯರ್ ಅಭಿನಂದಿಸಿದರು. 

ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷ್ಣಭೇಂದ್ರಪ್ಪ ಮಾತನಾಡಿ 1982 ಇಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯವನ್ನು ಜಾರಿಗೆ ತಂದವರೇ ಡಾ. ಕೆ. ಚಿದಾನಂದ ಗೌಡರು ಎಂದು ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ
ಮಾತನಾಡಿ ಡಾ.ಕೆ. ಚಿದಾನಂದ ಗೌಡರು ತಮ್ಮ ಆಡಳಿತ ವೈಖರಿಗಳಿಂದಾಗಿ ಆದರ್ಶ ಉಪಕುಲಪತಿಗಳಾಗಿದ್ದಾರೆ. ಅವರು ಅಂದು ನಮಗೆ ನೀಡಿದ ಈ ನಿವೇಶನ ಇಂದು ಕನ್ನಡದ ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡಲು ವೇದಿಕೆ ಆಗಿದೆ. ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ ಕೃತಜ್ಞತೆ ಸಲ್ಲಿಸಿದರು. 

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ. ದಿಳ್ಯೆಪ್ಪ, ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿಗಳಾದ ಜಿಗಳಿ ಪ್ರಕಾಶ್,
ಜಗದಿಶ್‌ ಕೂಲಂಬಿ, ದಾವಣಗೆರೆ ತಾಲ್ಲೂಕು ಕಸಾಪ ಅಧ್ಯಕ್ಷರಾದ ಸುಮತಿ
ಜಯ್ಯಪ್ಪ, ರುದ್ರಾಕ್ಷಿ ಬಾಯಿ, ಮಲ್ಲಮ್ಮ, ಬೇತೂರು ಷಡಾಕ್ಷರಪ್ಪ, ಸಿರಿಗೆರೆ ನಾಗರಾಜ್, ದಾಗಿನಕಟ್ಟೆ ಪರಮೇಶ್ವರಪ್ಪ, ಭೈರೇಶ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಹರಿಹರ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್. ಚಂದ್ರಪ್ಪ, ಕಲಾವಿದ ಮಹಾಲಿಂಗಪ್ಪ, ಪ್ರಗತಿ-ಪರ ಚಿಂತಕ
ಆವರಗೆರೆ ರುದ್ರಮುನಿ, ಭಾರತ ಸೇವಾದಳದ ಜಿಲ್ಲಾ ಘಟಕದ ಪಲ್ಲಾಗಟ್ಟಿ ಚನ್ನಪ್ಪ, ಆನೆಕೊಂಡದ ಲಿಂಗರಾಜ್‌, ಮೆಳ್ಳೇಕಟ್ಟಿ ಚನ್ನಪ್ಪ,
ಮೆಳ್ಳೇಕಟ್ಟೆ ನಾಗರಾಜ್‌, ಕೆ.ಸಿ. ಸಿದ್ದೇಶ್‌ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು. ಗಾನ ಲಹರಿ ಸಂಗೀತ ಶಾಲೆಯ ಚೇತನ್‌ ಕುಮಾರ್‌ ಮತ್ತು ಸಂಗಡಿಗರು ಹಾಡಿದ ಹಾಡಿಗಳು ಗಮನ ಸೆಳೆದವು.

error: Content is protected !!