ತಂತ್ರಜ್ಞಾನ ಬದಲಾದರೂ, ಮಾಧ್ಯಮದ ಮೂಲ ಆಶಯ ಬದಲಾಗಿಲ್ಲ

ತಂತ್ರಜ್ಞಾನ ಬದಲಾದರೂ, ಮಾಧ್ಯಮದ ಮೂಲ ಆಶಯ ಬದಲಾಗಿಲ್ಲ

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್‌

ದಾವಣಗೆರೆ, ಫೆ. 4 –  ಅಚ್ಚು ಮೊಳೆಯಿಂದ ಆರ್ಟಿಫಿಷಿಯಲ್ ಇಂಟಲಿಜೆನ್ಸ್‌ವರೆಗೆ ಪತ್ರಿಕಾ ವೃತ್ತಿ ತಾಂತ್ರಿಕವಾಗಿ ಬಹಳ ಬದಲಾವಣೆ ಕಂಡಿದೆ. ಆದರೆ ಮೂಲ ಆಶಯ ಮತ್ತು ಬದ್ದತೆ ಮಾತ್ರ ಬದಲಾಗಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.  

ದಾವಣಗೆರೆ ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ `ಮಾಧ್ಯಮ ಮತ್ತು ಸರ್ಕಾರ’ ಕುರಿತ ಸಂವಾದ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಈಗ ಅಧಿಕಾರಸ್ಥರ ಮತ್ತು ಪತ್ರಕರ್ತರ ನಡುವೆ ಸಂಪರ್ಕ ಅನಿವಾರ್ಯ ಅನ್ನುವ ಸ್ಥಿತಿ ಬಂದಿದೆ. ಮೊದಲೆಲ್ಲಾ ಪತ್ರಕರ್ತರು ಅಧಿಕಾರಸ್ಥರ ಜತೆ ನಿಕಟ ಸಂಪರ್ಕ ಹೊಂದುವುದಕ್ಕೆ ಬಹಳ ಮುಜುಗರ ಅನುಭವಿಸುತ್ತಿದ್ದರು ಎಂದರು.

ಪತ್ರಕರ್ತರು ಮೊದಲು ತಮ್ಮ ಮತ್ತು ತಮ್ಮ ಕುಟುಂಬದ ಆರೋಗ್ಯ, ಯೋಗಕ್ಷೇಮದ ಕಡೆಗೂ ಗಮನ ಹರಿಸಬೇಕು. ಕೆಲಸದ ಒತ್ತಡದ ನಡುವೆಯೂ ಈ ದಿಕ್ಕಿನಲ್ಲೂ ಗಮನ ಹರಿಸಿ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಮತ್ತು ಎರಡನೇ ಬಾರಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಪತ್ರಕರ್ತ ಸಮುದಾಯದ ವೃತ್ತಿಪರತೆ ಮತ್ತು ಪ್ರಗತಿಗೆ ನೆರವು ನೀಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಒದಗಿಸುವ ಕುರಿತು ಗಂಭೀರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಪತ್ರಿಕಾ ವಿತರಕರನ್ನು ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿದ್ದಾರೆ. ಪತ್ರಿಕಾ ವಿತರಕರಿಗೆ ಇ-ಶ್ರಮ್ ವಿಮಾ ಸೌಲಭ್ಯ ಜಾರಿಗೆ ತರಲಾಗಿದೆ ಎಂದರು.

ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ ಮಾತನಾಡಿ, ಸರ್ಕಾರ ಟೀಕಿಸುವ ಸಂದರ್ಭದಲ್ಲಿ ಪತ್ರಿಕೋದ್ಯಮ ದಿಟ್ಟತನ ಉಳಿಸಿಕೊಳ್ಳಬೇಕು. ತನಿಖಾ ಪತ್ರಿಕೋದ್ಯಮ ಮುಖ್ಯ ಎಂದರು.

ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮ ಶಿವಮೊಗ್ಗ ಮಾತನಾಡಿ, ಲಂಕೇಶ್ ಪತ್ರಿಕೆ ಆಡಳಿತ ಪಕ್ಷಕ್ಕೆ ಸಿಂಹಸ್ವಪ್ನವಾಗಿ ಕೆಲಸ ಮಾಡಿತ್ತು. ಮಾಧ್ಯಮಗಳು ಸರ್ಕಾರಕ್ಕೆ ವಿಪಕ್ಷವಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಸಂಘದ ಹಲವು ಪದಾಧಿಕಾರಿಗಳು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!