ಸಾಮಾಜಿಕ ಜಾಲತಾಣಗಳ `ವೈರಲ್‌’ಗೆ ಬೇಕಿದೆ `ವ್ಯಾಕ್ಸಿನ್‌’

ಸಾಮಾಜಿಕ ಜಾಲತಾಣಗಳ `ವೈರಲ್‌’ಗೆ ಬೇಕಿದೆ `ವ್ಯಾಕ್ಸಿನ್‌’

ಸಾಮಾಜಿಕ ಮಾಧ್ಯಮ ಮತ್ತು ವೃತ್ತಿ ವಿಶ್ವಾಸಾರ್ಹತೆ’ ಗೋಷ್ಠಿಯಲ್ಲಿ ರವೀಂದ್ರ ಶೆಟ್ಟಿ

ದಾವಣಗೆರೆ, ಫೆ. 4 – ಸಾಮಾಜಿಕ ಜಾಲತಾಣಗಳಿಂದಾಗಿ ಸುದ್ದಿಗೆ ಈಗ `ವೈರಲ್’ ಆಗುವ ಸೋಂಕು ಬಂದಿದೆ. ಇದಕ್ಕೆ ಸರ್ಕಾರ ನಿರ್ಬಂಧ ಹೇರುವ ಮೂಲಕ `ವ್ಯಾಕ್ಸಿನ್’ ನೀಡಬೇಕಿದೆ ಎಂದು  ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಸ್ಥಾನಿಕ ಸಂಪಾದಕ ರವೀಂದ್ರ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದ `ಸಾಮಾಜಿಕ ಮಾಧ್ಯಮ ಮತ್ತು ವೃತ್ತಿ ವಿಶ್ವಾಸಾರ್ಹತೆ’ ಎಂಬ ವಿಷಯ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಜಾಲತಾಣಗಳು ಬಂದ ನಂತರ ಎಲ್ಲರೂ ಪತ್ರಕರ್ತರಾಗಿದ್ದಾರೆ. ಎಲ್ಲರೂ ತಾವು ವಿಡಿಯೋ ಇಲ್ಲವೇ ಬರಹದ ಮೂಲಕ ಜಾಲತಾಣಗಳಲ್ಲಿ ಸುದ್ದಿಗಳನ್ನು ಹರಿದು ಬಿಡುತ್ತಿದ್ದಾರೆ. ಇದರಿಂದ ಸಾಕಷ್ಟು ಅಡ್ಡ ಪರಿಣಾಮಗಳಾಗಿವೆ ಎಂದು ಹೇಳಿದರು.

ಸುದ್ದಿಗಳನ್ನು ವೈರಲ್ ಮಾಡುವುದು ವ್ಯಸನವಾಗಿದೆ. ಸತ್ಯ – ಸುಳ್ಳು ಗೊತ್ತಾಗದ ಪರಿಸ್ಥಿತಿಯಾಗುತ್ತಿದೆ. ಸುಳ್ಳಿನ ರಾಶಿ ನಡುವೆ ಸತ್ಯ ಹುಡುಕಬೇಕಿದೆ. ಪತ್ರಿಕೆಗಳನ್ನು ಓದದೇ ಸಾಮಾಜಿಕ ಮಾಧ್ಯಮಗಳಲ್ಲಿ ಬರುವುದೇ ಸತ್ಯ ಎಂದು ಭಾವಿಸಿದವರು ಸಮಸ್ಯೆಗೆ ಸಿಲುಕುತ್ತಿದ್ದಾರೆ ಎಂದು ರವೀಂದ್ರ ಶೆಟ್ಟಿ ಹೇಳಿದರು.

ಜ್ಞಾನದ ಮೌಲ್ಯದಿಂದ ದೂರ ಆದವರು, ಸುಳ್ಳು ಸುದ್ದಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಸುದ್ದಿಗಳಿಗೆ ಕಡಿವಾಣ ಬೇಕಿದೆ. ಇದಕ್ಕೆ ಸರ್ಕಾರ ಕಾನೂನು ಚೌಕಟ್ಟು ಕಲ್ಪಿಸುವ ಮೂಲಕ ವ್ಯಾಕ್ಸಿನ್ ನೀಡಬೇಕಿದೆ. ಇದು ಸಾಮಾಜಿಕ ಮಾಧ್ಯಮವನ್ನು ಇನ್ನಷ್ಟು ಬಲಪಡಿಸಲು ನೆರವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಸಂಯುಕ್ತ ಕರ್ನಾಟಕದ ಸಂಪಾದಕ ವಸಂತ ನಾಡಿಗೇರ ಮಾತನಾಡಿ, ವೃತ್ತಿ ವಿಶ್ವಾಸಾರ್ಹತೆ ಎಂಬುದು ಮುದ್ರಣ, ದೃಶ್ಯ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ಸಮಾನವಾಗಿ ಅನ್ವಯವಾಗುತ್ತದೆ. ಜಾಲತಾಣಗಳಲ್ಲಿ ಬರುವುದೆಲ್ಲ ಸತ್ಯವಲ್ಲ ಎಂಬುದು ಜನರಿಗೆ ನಿಧಾನವಾಗಿ ಅರ್ಥವಾಗುತ್ತಿದೆ ಎಂದರು. ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ವಿಷಯಗಳನ್ನು ವಿಶ್ಲೇಷಣೆಗೆ ಒಳಪಡಿಸಿ ವಾಸ್ತವಾಂಶ ಕಂಡುಕೊಳ್ಳುವ ಪರಿಸ್ಥಿತಿ ಇದೆ. ಸತ್ಯವನ್ನು ತಿಳಿಯಲು ಫ್ಯಾಕ್ಟ್ ಚೆಕ್ ಆಪ್‌ಗಳೂ ಬರುತ್ತಿವೆ ಎಂದು ಹೇಳಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ವಿಜಯವಾಣಿ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ ಮಾತನಾಡಿ, ಮಾಧ್ಯಮಗಳು ರೋಚಕತೆ ಬಿಟ್ಟು ಅಭಿವೃದ್ಧಿ ಹಾಗೂ ಜನರ ಒಳಿತಿನ ಸುದ್ದಿಗೆ ಆದ್ಯತೆ ನೀಡಬೇಕು. ಪತ್ರಕರ್ತರ ಸಂಘಗಳು ಯುವ ಪತ್ರಕರ್ತರಿಗೆ ಹೆಚ್ಚಿನ ತರಬೇತಿ ನೀಡಿ, ಜಿಲ್ಲಾ ಮಟ್ಟದಲ್ಲಿ ಶಿಬಿರ ಆಯೋಜಿಸಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕಾ ಗೋಷ್ಠಿಯ ಉದ್ಘಾಟನೆ ನೆರವೇರಿಸಿದರು.

 ದಾವಣಗೆರೆ ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ, ಹಿರಿಯ ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ, ಕನ್ನಡಪ್ರಭದ ಶೇಷಮೂರ್ತಿ ಅವಧಾನಿ, ರಾಯಚೂರುವಾಣಿಯ ಅರವಿಂದ್ ಕುಲಕರ್ಣಿ ಮಾತನಾಡಿದರು.

error: Content is protected !!