ಕನ್ನಡದಲ್ಲಿ ನಾಮಫಲಕ ಅನುಷ್ಠಾನ ಆದೇಶ ಪಾಲಿಸುವಲ್ಲಿ ವಿಫಲ – ಕನ್ನಡ ಪರ ಹೋರಾಟಗಾರ ನಾಗೇಂದ್ರ ಬಂಡೀಕರ್

ಕನ್ನಡದಲ್ಲಿ ನಾಮಫಲಕ ಅನುಷ್ಠಾನ ಆದೇಶ ಪಾಲಿಸುವಲ್ಲಿ ವಿಫಲ – ಕನ್ನಡ ಪರ ಹೋರಾಟಗಾರ ನಾಗೇಂದ್ರ ಬಂಡೀಕರ್

ದಾವಣಗೆರೆ, ಡಿ. 29- ನಾಮಫಲಕಗಳಲ್ಲಿ ಪ್ರತಿಶತ 60 ರಷ್ಟು ಕನ್ನಡ ಬಳಕೆ ಇರಬೇಕೆಂಬ ಸರ್ಕಾರದ ಆದೇಶವಿದ್ದರೂ ಸಹ ನಗರ ಸ್ಥಳೀಯ ಸಂಸ್ಥೆಗಳು ಅನುಷ್ಠಾನಕ್ಕೆ ತರುತ್ತಿಲ್ಲ. ಅನುಷ್ಠಾನಗೊಳಿ ಸಬೇಕಾದ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ನಾಡಿಗೆ ಇಂತಹ ದುಸ್ಥಿತಿ ಬರಲು ಕಾರಣವಾಗಿದೆ ಎಂದು ಕನ್ನಡ ಪರ ಹಿರಿಯ ಹೋರಾಟಗಾರ ನಾಗೇಂದ್ರ ಬಂಡೀಕರ್ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಕರುನಾಡ ಸಮರ ಸೇನೆ ವತಿಯಿಂದ ಇಂದು ಹಮ್ಮಿಕೊಂಡಿದ್ದ ರೈತರಿಗೆ ಅಪಘಾತ ವಿಮೆ ಬಾಂಡ್ ವಿತರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಬಳಕೆ ಇರಬೇಕೆಂಬ ಸರ್ಕಾರದ ಆದೇಶವಿದ್ದರೂ, ಅದರ ಅನುಷ್ಠಾನಕ್ಕಾಗಿ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಈ ಹಿಂದೆ ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಕನ್ನಡ ಪರ ಹೋರಾಟಗಳನ್ನು ಮಾಡಲಾಗುತ್ತಿತ್ತು. ಇದೀಗ ನಿರೀಕ್ಷೆ ಮಟ್ಟದಲ್ಲಿ ಹೋರಾಟಗಳು ನಡೆಯುತ್ತಿಲ್ಲ. ಮಹಾರಾಷ್ಟ್ರ, ಕೇರಳ, ತಮಿಳುನಾಡು ಸೇರಿದಂತೆ, ಎಲ್ಲಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳಿಗೆ ಮಾನ್ಯತೆ ಇದೆ. ಕರ್ನಾಟಕದಲ್ಲಿ ಮಾತ್ರ ಅದು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳು ಸರ್ಕಾರದ ಆದೇಶವನ್ನು ಪಾಲನೆ ಮಾಡಬೇಕಾಗಿದೆ ಎಂದರು. ಉದ್ಯಮಕ್ಕೆ ಪರವಾನಿಗೆ ನೀಡುವಾಗ ಕನ್ನಡ ನಾಮಫಲಕ ಇರಲಿ ಎಂಬುದನ್ನು  ಕಡ್ಡಾಯಗೊಳಿಸಬೇಕು. ಇದಕ್ಕಾಗಿ ಕನ್ನಡ ನಾಡು, ನುಡಿ ಬಗ್ಗೆ ಕಳಕಳಿ ಇರುವ ಸರ್ಕಾರ ಬೇಕಾಗಿದೆ. ಕನ್ನಡ ಪರ ಮನಸ್ಸುಗಳು ರಾಜಕಾರಣಕ್ಕೆ ಅವಶ್ಯ ಎಂದು ಹೇಳಿದರು.

ಡಾ. ರಾಜಕುಮಾರ್ ಅಭಿಮಾನಿ ಗಳ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಜಿ. ಶಿವಕುಮಾರ್ ಮಾತನಾಡಿ, ದಾವಣಗೆರೆ ಜಿಲ್ಲೆ ಮಾತ್ರ ಸಂಪೂರ್ಣ ಕನ್ನಡಮಯವಾಗಿರುವುದು ಹೆಮ್ಮೆಯ ವಿಚಾರ. ಯಾವುದೇ ಕನ್ನಡಪರ ಹೋರಾ ಟಗಳಿಗೆ ಚಾಲನೆ ದೊರಕುವುದು ದಾವಣಗೆರೆಿಯಿಂದಲೇ ಎಂದರು.

ಕನ್ನಡ ಪರ ಸಂಘಟನೆಗಳು ರಾಜ್ಯೋತ್ಸವ ಗಳನ್ನು  ಕೇವಲ ಸಂಗೀತ ಸಂಜೆ, ಸಾಧಕರಿಗೆ ಸನ್ಮಾನ ಮಾಡುವ ಮೂಲಕ ಆಚರಣೆ ಮಾಡುತ್ತವೆ. 

ಆದರೆ ರೈತರಿಗೆ ಅಪಘಾತ ವಿಮೆ ಬಾಂಡ್ ವಿತರಣೆ ಮಾಡುವ ಮೂಲಕ ಆಚರಣೆ ಮಾಡುತ್ತಿರುವ ಐಗೂರು ಸುರೇಶ್ ಅವರ ಕಾರ್ಯ ಶ್ಲ್ಯಾಘನೀಯ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮರ ಸೇನೆ ರಾಜ್ಯಾಧ್ಯಕ್ಷ ಐಗೂರು ಸುರೇಶ್ ಮಾತನಾಡಿ, ದೇಶದ ಬೆನ್ನೆಲುಬು ಎಂದೇಳುವ ರೈತನಿಗೆ ಭದ್ರತೆ ಇಲ್ಲವಾಗಿದೆ. ಅಂತಹ ರೈತರಿಗೆ ಭದ್ರತೆ ನೀಡುವ ಭಾಗವಾಗಿ ಅಪಘಾತ ವಿಮೆ ಬಾಂಡ್‌ಗಳನ್ನು ವಿತರಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು. 

ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸುವ ಮೂಲಕ ಕನಿಷ್ಠ 10 ಲಕ್ಷ ರೂ. ಗಳ ಅಪಘಾತ ವಿಮೆ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಕನ್ನಡ ಪರ ಹೋರಾಟಗಾರರಾದ ಟಿ. ಶಿವಕುಮಾರ್, ಬಸವರಾಜ ಐರಣಿ, ಶಿವನಗೌಡ ಪಾಟೀಲ್, ಪಿ. ಷಣ್ಮುಖಸ್ವಾಮಿ, ಸಮರ ಸೇನೆ ಪದಾಧಿಕಾರಿಗಳಾದ ಎಂ. ಜಾಕೀರ್, ಶ್ರೀಧರ ಮಲ್ಲಾಪುರ, ನಿರ್ಮಲ ಮೈಕಲ್, ಹೊನ್ನಮ್ಮ ದೇವರಬೆಳಕೆೇರೆ, ಶಶಿಕಲಾ, ಜಯಶ್ರೀ ಮುಂತಾದವರು ಭಾಗವಹಿಸಿದ್ದರು.

error: Content is protected !!