ಜಗತ್ತಿಗೆ ಭಾರತದ `ಕಂಪ್ಯೂಟರ್ ಸೈನ್ಸ್‌’ನ ಕೊಡುಗೆ ಅಪಾರ

ಜಗತ್ತಿಗೆ ಭಾರತದ `ಕಂಪ್ಯೂಟರ್ ಸೈನ್ಸ್‌’ನ ಕೊಡುಗೆ ಅಪಾರ

 `ಭಿಕ್ಷೆ ಬೇಡಿ ತಂದು ಗುರುಗಳಿಗೆ ನೈವೇದ್ಯ ಅರ್ಪಿಸಿ, ವಿದ್ಯೆ ಪಡೆದ ನಾಡು ನಮ್ಮದು’ 

– ಎನ್.ಎ.ಮುರುಗೇಶ್

ಬಿಎಸ್‌ಸಿ ಕಾಲೇಜಿನ ಸಮಾರಂಭದಲ್ಲಿ ದಾವಿವಿ ಪ್ರಾಧ್ಯಾಪಕ ಡಾ.ಯು.ಎಸ್ ಮಹಾಬಲೇಶ್ವರ

ದಾವಣಗೆರೆ, ಡಿ.4-  ವ್ಯವಹಾರದಲ್ಲಿ ಯಶಸ್ಸು ಮುಖ್ಯ, ಅದಕ್ಕೆ ಪೂರ್ವ ತಯಾರಿಬೇಕು, ಪಠ್ಯ ಚಟುವಟಿಕೆಗಳ ಜೊತೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಅತೀ ಮುಖ್ಯ ವಾಗಿರುತ್ತವೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಯು.ಎಸ್. ಮಹಾಬಲೇಶ್ವರ  ಹೇಳಿದರು.

ನಗರದ ಬಿ. ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ, ಕ್ರೀಡಾ, ಎನ್ಎಸ್ಎಸ್ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪರಿಪಾಲನೆ, ಮಾತನಾಡುವ ಕೌಶಲ್ಯಗಳು ಮುಖ್ಯ, ಕಂಪ್ಯೂಟರ್ ಸೈನ್ಸ್ ನಲ್ಲಿ ಅತೀ ಹೆಚ್ಚು ಅವಕಾಶಗಳಿದ್ದು ಅವುಗಳನ್ನು ಬಳಸಿಕೊಳ್ಳುವ ಕಡೆ ನಿಮ್ಮ ಗಮನ ಇರಲಿ, ಕಂಪ್ಯೂಟರ್ ಸೈನ್ಸ್ ನಲ್ಲಿ ಜಗತ್ತಿಗೆ ಭಾರತದ ಕೊಡುಗೆ ಅಪಾರವಾದದ್ದು ಎಂದರು. ಅಲ್ಲದೇ, ಗಣಿತಶಾಸ್ತ್ರ ಭಾರತದ ಮಹತ್ವದ ಕೊಡುಗೆ, ನಿಮ್ಮ ಕೆಲಸದಿಂದ ನಿಮ್ಮ ಬಗ್ಗೆ ಮಾತನಾಡಿದವರಿಗೆ ಉತ್ತರಿಸಿ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀ ವಿನಾಯಕ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ  ಎನ್. ಎ. ಮುರುಗೇಶ್, ಮನೆಯೇ ಮೊದಲ ಶಾಲೆ, ತಾಯಿಯೇ ಮೊದಲ ಗುರು, ದೇಶದಲ್ಲಿ ನಾರೀ ಶಕ್ತಿ ಹೆಚ್ಚುತ್ತಿದೆ, ಅದರಂತೆ ಶಿಕ್ಷಣದಲ್ಲೂ ಅವರ ಸಾಧನೆ ಉನ್ನತವಾಗಿದೆ ಎಂದರು, ಭಿಕ್ಷೆ ಬೇಡಿ ತಂದು ಗುರುಗಳಿಗೆ ನೈವೇದ್ಯ ಅರ್ಪಿಸಿ, ನಂತರ ವಿದ್ಯೆ ಪಡೆದ ನಾಡು ನಮ್ಮದು. ಗುರುವಿನ ಗುಲಾಮನಾಗುವವನು ಎಲ್ಲವನ್ನೂ ಕಲಿಯುತ್ತಾನೆ, ಜಗತ್ತಿಗೆ ಶೂನ್ಯ ಪರಿಚಯಿಸಿದ ನಾಡು ನಮ್ಮದು. ಶೂನ್ಯವಿಲ್ಲದ ಎಲ್ಲಾ ಸಂಖ್ಯೆಗಳು ಹೆಚ್ಚು ಮೌಲ್ಯ ಪಡೆಯಲಾರವು ಎಂದರು. 

ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕುಮಾರ್  ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳು ಮುಖ್ಯ. ಅಂತಹ ಕೌಶಲ್ಯಗಳನ್ನು ಬೆಳೆಸುವಲ್ಲಿ ನಮ್ಮ ಕಾಲೇಜು ಸದಾ ಮುಂಚೂಣಿಯಲ್ಲಿದೆ, ನಾವು ನಮ್ಮ ಸಾಮರ್ಥ್ಯವನ್ನು  ತೋರ್ಪಡಿಸಬೇಕು, ಎನ್‌ಸಿಸಿ, ಎನ್‌ಎಸ್‌ಎಸ್,  ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನದ ನೆನಪಿನ ಬುತ್ತಿ ಇವು ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಎಂದರು. 

ಎಸ್.ಬಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಸಿ. ಗುರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ  ಡಾ. ಕೆ. ಷಣ್ಮುಖ, ಅಥಣಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಡಯಾನಾ ದಿವ್ಯ ಉಪಸ್ಥಿತರಿದ್ದರು. 

ಕು.ಸಾಹಿತ್ಯ ನಿರೂಪಿಸಿದರು. ಕು. ಐಶ್ವರ್ಯ ಸ್ವಾಗತಿಸಿದರು. ಕು. ನಯನ ವಂದಿಸಿದರು.

error: Content is protected !!