ಲಿಂ. ಶಿವಕುಮಾರ ಶ್ರೀಗಳ ಆಶೋತ್ತರಗಳನ್ನು ಈಡೇರಿಸಲು ಡಾ. ಜಗದ್ಗುರುಗಳ ಕರೆ

ಲಿಂ. ಶಿವಕುಮಾರ ಶ್ರೀಗಳ ಆಶೋತ್ತರಗಳನ್ನು ಈಡೇರಿಸಲು ಡಾ. ಜಗದ್ಗುರುಗಳ ಕರೆ

ಸಿರಿಗೆರೆ, ಸೆ. 20- ಲಿಂ. ಶಿವಕುಮಾರ ಶ್ರೀಗಳ ಆಶೋತ್ತರಗಳನ್ನು ಈಡೇರಿಸುವ ಸಂಕಲ್ಪ ನಿಮ್ಮದಾಗಲಿ ಎಂದು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಇಲ್ಲಿನ ಬೃಹನ್ಮಠದಲ್ಲಿ ಇಂದಿನಿಂದ ಇದೇ 24ರವರೆಗೆ ನಡೆಯಲಿರುವ ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಯವರ 31ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಣೆಕಟ್ಟು ತುಂಬಿದಾಗ ಕ್ರೆಸ್ಟ್ ಗೇಟ್ ತೆಗೆದಾಗ ಭೋರ್ಗರೆಯುವ ಉತ್ಸಾಹ ನಮ್ಮ ವಿದ್ಯಾರ್ಥಿಗಳಲ್ಲಿದೆ. ನಾಡಿನ ಉತ್ತಮ ನಾಗರಿಕ ರಾಗುವುದರ ಮೂಲಕ ಹಿರಿಯ ಶ್ರೀಗಳ ಆಶೋತ್ತ ರಗಳನ್ನು ಈಡೇರಿಸಿರಿ ಎಂದು ಹೇಳಿದರು.

ಹಿರಿಯರಂತೆ ಪರಿಶುದ್ಧ ಕನ್ನಡ ಮಾತನಾಡುವುದನ್ನು ಕಲಿಯಿರಿ. ನಮ್ಮ ಸಂಸ್ಥೆಗಳಲ್ಲಿ ಓದುತ್ತಿರುವ ನೀವೆಲ್ಲಾ ಜಗತ್ತಿನ ಮುಗಿಲೆತ್ತರಕ್ಕೆ ಬೆಳೆಯಿರಿ ಎಂದು ಆಶಿಸಿದರು.

ಚಂದ್ರಯಾನ-3ರ ಯಶಸ್ವಿಯಾಗಿ ರೋವರ್ ಚಂದ್ರನ ಅಂಗಳಕ್ಕೆ ಇಳಿಯುವ ದೃಶ್ಯ ನೋಡಿದಾಗ ಶ್ರೀರಾಮನ ಬಾಲ್ಯದ ಕಥೆ ನೆನಪಾಗಿತ್ತು ಎಂದ ಶ್ರೀಗಳು, ಶ್ರೀರಾಮನಿಗೆ ಆತನ ತಾಯಿ ಕೌಸಲ್ಯ  ಹಾಲು ಕುಡಿಸುವಾಗ ಚಂದ್ರನನ್ನು ತೋರಿಸುತ್ತಾಳೆ. ಆಗ ಆ ಚಂದ್ರನೇ ಬೇಕು ಎಂದ ಶ್ರೀರಾಮ ಹಠ ಹಿಡಿಯುತ್ತಾನೆ. ಆಗ ಕೈಕೇಯಿ ಕನ್ನಡಿ ತಂದು ಅದರಲ್ಲಿ ಚಂದ್ರನ  ಪ್ರತಿಬಿಂಬ ತೋರಿಸಿ ಸಂತೈಸುತ್ತಾಳೆ ಎಂದು ಕಥೆ ವಿವರಿಸಿದರು.

ಜಗತ್ತಿನಾದ್ಯಂತ ಎಲ್ಲಾ ಮಕ್ಕಳಿಗೂ ಚಂದ್ರನೇ ಆಕರ್ಷಣೆ. ಬಾಲ್ಯದಿಂದಲೂ ಚಂದ್ರನಿಂದ ಆಕರ್ಷಿತರಾದ ಮಕ್ಕಳು ದೊಡ್ಡವರಾಗಿ ವಿಜ್ಞಾನಿಗಳಾಗಿ ಚಂದ್ರನ ಮೇಲೆ ರೋವರ್ ಇಳಿಸಿ, ಭಾರತದ ಧ್ವಜ ಹಾರಿಸಿದ್ದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಶಾಸಕ  ಬಿ.ಪಿ.ಹರೀಶ್ ಮಾತನಾಡಿ, ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ತೆರೆದು ಶಿಕ್ಷಣ ನೀಡಿದ ಮಹಾನೀಯರು ಲಿಂ.ಶಿವಕುಮಾರ ಶ್ರೀಗಳವರು. ಡಾ.ಶ್ರೀಗಳವರು ಸಹ ಇಂದು ಶ್ರೀಮಠವನ್ನು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ತಂದು ಸಿರಿಗೆರೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ದಾಸೋಹ ವ್ಯವಸ್ಥೆ ಮಾಡಿರುತ್ತಾರೆ ಎಂದರು.

ಶಾಸಕ ಕೆ. ಎಸ್.ಬಸವಂತಪ್ಪ ಮಾತನಾಡಿ,  ಸಿರಿಗೆರೆಯ ತರಳಬಾಳು ಮಠ ಕರ್ನಾಟಕದಲ್ಲಿ ಶಿಕ್ಷಣ ದಾಸೋಹದ ಜೊತೆಗೆ ಸೇವಾಮನೋ ಭಾವ ಹೊಂದಿರುವ ಮಠ. ಕನಸಿನಕೂಸಾದ ನೀರಿನ ಯೋಜನೆ ನನಸಾಗಿದೆ. ಜಗಳೂರು ಭಾಗದ 22ಕೆರೆಗಳ ಯೋಜನೆ ಕುಂಠಿತದಲ್ಲಿದ್ದು ಆ ಕಾರ್ಯಕ್ಕೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಶೀಘ್ರವೇ ನೀರು ತರಲು ಶ್ರೀಗಳವರ ಜೊತೆ ಕೈಜೋಡಿಸುವೆ ಎಂದು ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಬಿ.ಡಿ. ಕುಂಬಾರ್ ಮಾತನಾಡಿ, ಲಿಂ.ಶ್ರೀಗಳವರು ಸುಸಂಸ್ಕೃತ ತಳಹದಿ ಹಾಕಿದ್ದರಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ದೊರೆಯುತ್ತಿದೆ. ಅವರ ಕಾರ್ಯವೈಕರಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಕ್ರಾಂತಿ ನಡೆಸಿದ ಧೀರ ಸನ್ಯಾಸಿ ಎಂದು ಶ್ಲ್ಯಾಘಿಸಿದರು.

ಬೇಲೂರು ಶಾಸಕರಾದ ಹೆಚ್.ಕೆ.ಸುರೇಶ್,  ಚಿತ್ರದುರ್ಗ ಜಿಲ್ಲಾಧಿಕಾರಿ ಜಿ.ಆರ್.ಜೆ ದಿವ್ಯಪ್ರಭು, ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿದರು.

ದಾವಣಗೆರೆ ಸುಶ್ರಾವ್ಯ ಸಂಗೀತ ವಿದ್ಯಾಲಯ ನಿರ್ದೇಶಕರಾದ ಯಶಾ ದಿನೇಶ್ ವಚನಗೀತೆ ಹಾಡಿದರು.  

ವೇದಿಕೆಯಲ್ಲಿ ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ. ಎಚ್.ವಿ.ವಾಮದೇವಪ್ಪ, ಪ್ರಧಾನ ಕಾರ್ಯದರ್ಶಿ ಪ್ರೊ. ಎಸ್.ಬಿ.ರಂಗನಾಥ್ ಇದ್ದರು.

error: Content is protected !!