ನೀರು ಸ್ಥಗಿತ ಖಂಡಿಸಿ ಇಂದು ರಾಷ್ಟ್ರೀಯ ಹೆದ್ದಾರಿ ತಡೆ

ನೀರು ಸ್ಥಗಿತ ಖಂಡಿಸಿ ಇಂದು ರಾಷ್ಟ್ರೀಯ ಹೆದ್ದಾರಿ ತಡೆ

ದಾವಣಗೆರೆ, ಸೆ.20- ಭದ್ರಾ ನೀರು ನಿಲುಗಡೆ ಮಾಡಿರುವುದನ್ನು ಖಂಡಿಸಿ, ನಾಳೆ ದಿನಾಂಕ 21ರ ಗುರುವಾರ ಕುಂದುವಾಡದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ಚಳುವಳಿ ನಡೆಸಲು ಭಾರತೀಯ ರೈತ ಒಕ್ಕೂಟ ನಿರ್ಧರಿಸಿದೆ.

ಇಲ್ಲಿನ ನೀರಾವರಿ ಕಚೇರಿ ಆವರಣದಲ್ಲಿ ಇಂದು ನಡೆದ ಸಭೆಯಲ್ಲಿ ಈ ಕುರಿತು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.

ಗುರುವಾರ ಬೆಳಿಗ್ಗೆ 11 ಗಂಟೆಗೆ ಹೆದ್ದಾರಿ ತಡೆ ನಡೆಸಿ, ನಂತರ ದಿನಾಂಕ 22ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಗರದ ಶ್ರೀ ಬೀರೇಶ್ವರ ದೇವಸ್ಥಾನದಿಂದ ಟ್ರ್ಯಾಕ್ಟರ್ ರಾಲಿ ನಡೆಸಲು ನಿರ್ಣಯಿಸಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ರೈತ ಒಕ್ಕೂಟದ ಶಾಮನೂರು ಹೆಚ್.ಆರ್. ಲಿಂಗರಾಜ್, ನಾಲಾ ನೀರು ಸ್ಥಗಿತವಾದರೆ ಕೇವಲ ರೈತರಿಗಷ್ಟೇ ಅಲ್ಲ, ಕುಡಿಯುವ ನೀರಿಗೂ ಪರದಾಡಬೇಕಾಗುತ್ತದೆ. ಈ ಬಾರಿ ಬೆಳೆ ಬಾರದೇ ಇದ್ದರೆ ಬೇರೆಲ್ಲಾ ಆರ್ಥಿಕ ಚಟುವಟಿಕೆಗಳಿಗೂ ಧಕ್ಕೆಯಾಗುತ್ತದೆ ಇದನ್ನು ಜನರು ಅರಿಯಬೇಕು ಎಂದು ಹೇಳಿದರು.

ದೇಶ ಕಾಯುವ ಸೈನಿಕರು ಹಾಗೂ ರೈತರು ಎರಡೂ ಒಂದೇ. ರೈತ ಇಲ್ಲದಿದ್ದರೂ ದೇಶ ನಾಶವಾಗುತ್ತದೆ. ನಾವೆಲ್ಲಾ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಮಾತನಾಡಿ, ನಿರಂತರ 100 ದಿನ ನೀರು ‌ಹರಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದರಿಂದ ದಾವಣಗೆರೆ ಜಿಲ್ಲೆಯಲ್ಲಿ ರೈತರು ಸುಮಾರು 1.5 ಲಕ್ಷ ಎಕರೆ ಭತ್ತದ ನಾಟಿ ಮಾಡಿದ್ದಾರೆ. ನಿನ್ನೆ ಬೆಳಿಗ್ಗೆ 10 ಗಂಟೆಯಿಂದ ನೀರು ನಿಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ರೈತರ ಮೇಲೆ  ಕಾಳಜಿ ಇಲ್ಲ. ನಿನ್ನೆ ನಡೆದ ಐಸಿಸಿ ಸಭೆಯಲ್ಲಿ ಮೌನ ವಹಿಸಿದ್ದಾರೆ. ಇದು ಅವರ ರೈತ ವಿರೋಧಿ ನಿಲುವು ಎಂದು ಆರೋಪಿಸಿದರು.

ಬೆಳವನೂರು ನಾಗೇಶ್ವರರಾವ್ ಮಾತನಾಡಿ, ರೈತರು ಸರ್ಕಾರದ ಆದೇಶ ನಂಬಿ ಸಾಲ ಸೋಲ ಮಾಡಿ ನಾಟಿ ಮಾಡಿದ್ದಾರೆ. ಈಗ ಏಕಾಏಕಿ ನೀರು ನಿಲ್ಲಿಸಿ, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಹೆಚ್.ಎನ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡದ ಗಣೇಶಪ್ಪ, ಆರನೇಕಲ್ಲು ವಿಜಯಕುಮಾರ್‌, ಶಾಗಲೆ ಕ್ಯಾಂಪ್ ಭೋಗೇಶ್ವರರಾವ್, ಕುಂದುವಾಡದ ಜಿಮ್ಮಿ ಹನುಮಂತಪ್ಪ, ಎ.ಪ್ರಕಾಶ್, ಮಹೇಶಪ್ಪ, ಕಲ್ಲುಬಂಡೆ ಪ್ರಸಾದ್, ಕಲ್ಪನಹಳ್ಳಿ ಉಜ್ಜಣ್ಣ, ಶಾಮನೂರು ಕಲ್ಲೇಶಪ್ಪ, ಸತ್ಯನಾರಾಯಣ ಕ್ಯಾಂಪ್ ನಾಗೇಶ್ವರರಾವ್, ಮತ್ತಿ ಜಯಣ್ಣ ಮುಂತಾದವರು ಭಾಗವಹಿಸಿದ್ದರು.

error: Content is protected !!