ಮೊದಲ ಸಲ ಮತದಾನದ ಉತ್ಸಾಹ, ಇಳಿ ವಯಸ್ಸಲ್ಲೂ ಹುಮ್ಮಸ್ಸು

ಮೊದಲ ಸಲ ಮತದಾನದ ಉತ್ಸಾಹ, ಇಳಿ ವಯಸ್ಸಲ್ಲೂ ಹುಮ್ಮಸ್ಸು

ದಾವಣಗೆರೆ, ಮೇ 10 – ಮೊದಲ ಬಾರಿ ಹಕ್ಕು ಚಲಾಯಿಸಲು ಆಗಮಿಸಿದವರಲ್ಲಿ ಉತ್ಸಾಹ, ಇಳಿವಯಸ್ಸಿನಲ್ಲೂ ಮತಗಟ್ಟೆಗಳಿಗೆ ಬಂದವರಲ್ಲಿ ಹುಮ್ಮಸ್ಸು. ಅಂಗವೈಕಲ್ಯದ ನಡುವೆಯೂ ಹಕ್ಕು ಚಲಾಯಿಸಲು ಬಂದವರಲ್ಲಿ ನಿರೀಕ್ಷೆಗಳು…

ಹೌದು, ಜಿಲ್ಲೆಯಾದ್ಯಂತ ಬುಧವಾರ ನಡೆದ ವಿಧಾನ ಸಭಾ ಚುನಾವಣೆಗೆ ತಮ್ಮ ಮುಂದಿನ ವಾರಸುದಾರರನ್ನು ಆಯ್ಕೆ ಮಾಡಲು ಜನರು ಉತ್ಸಾಹದಿಂದಲೇ ಮತಗಟ್ಟೆಗಳಿಗೆ ಆಗಮಿಸಿ, ಹಕ್ಕು ಚಲಾಯಿಸಿದರು.

ಅಂಗವಿಕಲರಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ನೆರವು ಕಲ್ಪಿಸಲು ರಾಂಪ್ ವ್ಯವಸ್ಥೆಯ  ಜೊತೆಗೆ ಪಿಡಬ್ಲೂಡಿ ಮತಗಟ್ಟೆ, ಯುವ ಮತದಾರರ ಸೆಳೆಯಲು ಯುವ ಮತಗಟ್ಟೆ,  ಮಹಿಳೆಯರನ್ನು ಮತಗಟ್ಟೆಗಳ ಕಡೆಗೆ ಸೆಳೆಯಲು `ಪಿಂಕ್ ಬೂತ್’ ಎಂದೇ ಹೆಸರಾಗಿರುವ `ಸಖಿ’ ಮತಗಟ್ಟೆಗಳು ಈ ಬಾರಿಯ ವಿಶೇಷವಾಗಿದ್ದವು.

ದಾವಣಗೆರೆ, ಮಾಯಕೊಂಡ, ಜಗಳೂರು ಕ್ಷೇತ್ರಗಳಿಗೆ ಪತ್ರಕರ್ತರು ಭೇಟಿ ನೀಡಿದಾಗ, ಯುವಕರು, ಹಿರಿಯರು, ಅಂಗವಿಕಲರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡು ಬಂತು. 

ಮಧ್ಯಾಹ್ನ ಬಿಸಿಲಿನ ಹಿನ್ನೆಲೆಯಲ್ಲಿ ಮತದಾನ ತುಸು ಮಂದಗತಿಯಲ್ಲಿತ್ತು. ಜೊತೆಗೆ ಕೆಲ ಹೊತ್ತು ಸುರಿದ ಮಳೆಯಿಂದಾಗಿ ಮತದಾನಕ್ಕೆ ಅಡೆತಡೆ ಉಂಟಾಗಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಮತ್ತೆ ಮತದಾರರು ಮತಗಟ್ಟೆಗಳಿಗೆ ಆಗಮಿಸಿದರು.

ಬೇತೂರು ಗ್ರಾಮದಲ್ಲಿ ಬೆಳಿಗ್ಗೆ 11.20ರ ವೇಳೆಗೆ ಮತದಾರರು ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 21ರಲ್ಲಿ 1485 ಮತದಾರರ ಪೈಕಿ 402 ಮತದಾರರು ಮತ ಚಲಾಯಿಸಿ ಆಗಿತ್ತು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಅಣಜಿ ಗ್ರಾಮದ ಹೆಚ್.ವಿ.ಎಸ್.ಪಿ. ಕಾಲೇಜಿನ  ಮತಗಟ್ಟೆ ಸಂಖ್ಯೆ 17ರಲ್ಲೂ ಮತದಾರ ಉತ್ಸಾಹ ಕಂಡು ಬಂತು. ಮತಗಟ್ಟೆ ಬಳಿ  ಇದ್ದ ಜೆಡಿಎಸ್‌ನ ಅಭ್ಯರ್ಥಿ ಆನಂದಪ್ಪ ಗೆಲುವು ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಳಿಚೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮತಗಟ್ಟೆ 164ರಲ್ಲಿ 894 ಜನರ ಪೈಕಿ 333 ಜನರು ಮತ ಚಲಾಯಿಸಿದ್ದರು. 

ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾಯಕೊಂಡ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಶೇ.41ರಷ್ಟು ಮತದಾನವಾಗಿತ್ತು. 

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಬಸವಂತಪ್ಪ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಕ್ಷೇತ್ರದಲ್ಲಿ ಎಲ್ಲಾ ಮತದಾರರು ಕಾಂಗ್ರೆಸ್ ಪರ ಇದ್ದಾರೆ. ಸ್ಪರ್ಧೆ ಏನಿದ್ದರೂ ಬಿಜೆಪಿ ಹಾಗೂ ನನ್ನ ನಡುವೆ. ಪಕ್ಷೇತರ ಅಭ್ಯರ್ಥಿಗಳು ನನಗೆ ಲೆಕ್ಕಕ್ಕಿಲ್ಲ ಎಂದ ಅವರು, ಗೆಲುವು ನನ್ನದೇ ಎಂದರು.

error: Content is protected !!