ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ

ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ

ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ - Janathavaniಸರಳ ಸಜ್ಜನಿಕೆಗೆ ಹೆಸರಾದ ಮುತ್ಸಧಿ ಹಾಗೂ ಧೀಮಂತ ರಾಜಕಾರಣಿ, ಮೈಸೂರು ರಾಜ್ಯದ ಎರಡನೇ ಮುಖ್ಯಮಂತ್ರಿ, ರಾಜಕೀಯ ಶಕ್ತಿ ಕೇಂದ್ರವಾದ   ವಿಧಾನಸೌಧದ ನಿರ್ಮಾತೃ ಹಾಗೂ ಕರ್ನಾಟಕ ಏಕೀಕರಣದ ಮುಂಚೂಣಿ ನಾಯಕರಾದ ದಿ. ಕೆಂಗಲ್ ಹನುಮಂತಯ್ಯನವರ ಜನ್ಮ ದಿನ ಇಂದು. 

ಹನುಮಂತಯ್ಯನವರು ಇಂದಿನ ರಾಮನಗರ ಜಿಲ್ಲೆಯ ಲಕ್ಕಪ್ಪನಪಳ್ಳಿ ಎಂಬ ಗ್ರಾಮದಲ್ಲಿ 1908 ರ ಫೆಬ್ರವರಿ 14 ರಂದು  ಒಕ್ಕಲಿಗ ಕುಟುಂಬವೊಂದರಲ್ಲಿ ಜನಿಸಿದರು. ಇವರು1930 ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಕಲಾ ಪದವಿಯನ್ನು, 1932 ರಲ್ಲಿ  ಪೂನಾದ ಕಾನೂನು ಕಾಲೇಜಿನಿಂದ ಎಲ್.ಎಲ್.ಬಿ. ಪದವಿಯನ್ನು ಪೂರೈಸಿ, ಅದೇ ವರ್ಷ ಬಾರ್ ಕೌನ್ಸಿಲ್ ಪ್ರವೇಶಿಸಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಕಾಲೇಜು ದಿನಗಳಲ್ಲಿಯೇ ಅವರು ತಮ್ಮ ಉತ್ಸಾಹ ಮತ್ತು ಚುರುಕುತನವನ್ನು ಬಹುವಾಗಿ ಪ್ರದರ್ಶಿಸಿದ್ದಲ್ಲದೆ  ವಿದ್ಯಾರ್ಥಿ ಸಂಘ ಮತ್ತು ಕರ್ನಾಟಕ ಸಂಘಗಳಿಗೆ ಕಾರ್ಯದರ್ಶಿಯಾಗಿ ನೇಮಕಗೊಂಡು ಉತ್ತಮ ಸೇವೆ ಸಲ್ಲಿಸಿದರು. ಆಗಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಡಾ. ಪಿ.ಟoಡನ್ ರವರು  ಕೆಂಗಲ್ ಹನುಮಂತಯ್ಯನವರಿಗೆ ಬಾರ್‌ ನಲ್ಲಿ ತಮ್ಮ ಸಕ್ರಿಯ ಅಭ್ಯಾಸವನ್ನು ತ್ಯಜಿಸಿ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು  ತಾವು ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು. ಇದರ ಜೊತೆಗೆ  ಗಾಂಧೀಜಿಯವರ ಸ್ಫೂರ್ತಿಯೂ ಕೂಡ  ಹನುಮಂತಯ್ಯ ನವರು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮು ಕಲು ಪ್ರೇರಣೆಯಾಯಿತು. ಚಳುವಳಿಯ ಸಮಯದಲ್ಲಿ ಅವರು ಏಳಕ್ಕೂ ಹೆಚ್ಚು ಬಾರಿ ಸೆರೆವಾಸ ಅನುಭವಿಸಬೇಕಾಯಿತು.

ಬ್ರಿಟಿಷರ ವಿರುದ್ಧ ದೀರ್ಘ ಹೋರಾಟದ  ಫಲವಾಗಿ  ಭಾರತ 1947 ರ ಆಗಸ್ಟ್15 ರಂದು ಭಾರತ ಸ್ವತಂತ್ರವಾಯಿತು. ಆ ಹೊತ್ತಿಗೆ ರಾಜಕಾರಣದಲ್ಲಿ ಖ್ಯಾತರಾಗಿದ್ದ ಕೆಂಗಲ್ ಹನುಮಂತಯ್ಯನವರನ್ನು ಒಮ್ಮತದಿಂದ `ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ’ರನ್ನಾಗಿ 1948 ರಲ್ಲಿ ಆರಿಸಲಾಯಿತು. ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯ ಭೇರಿ ಬಾರಿಸಿ ಕೆಂಗಲ್ ಹನುಮಂತಯ್ಯ ನವರನ್ನು ಮೈಸೂರು ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ (1952) ಆಯ್ಕೆ ಮಾಡಿತು. ಇವರು 30 ಮಾರ್ಚ್ 1952 ರಿಂದ 19 ಆಗಸ್ಟ್ 1956ರವರೆಗೆ ಮುಖ್ಯಮಂತ್ರಿಯಾಗಿ ಉತ್ತಮ ಸೇವೆ ಸಲ್ಲಿಸಿದರು. ಇವರು  ಕೃಷಿ, ನೀರಾವರಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಇನ್ನು ಮುಂತಾದ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿ, ರಾಜ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು. ಇದಲ್ಲದೆ ರಾಜ್ಯ ರಾಜಕಾರಣದ ಶಕ್ತಿ ಕೇಂದ್ರವಾದ `ವಿಧಾನಸೌಧ’ವನ್ನು ಬೆಂಗಳೂರಿ ನಲ್ಲಿ ನಿರ್ಮಿಸಿ, ಅಧಿಕ  ಜನಮನ್ನಣೆ ಗಳಿಸಿದರಲ್ಲದೆ,  ಕರ್ನಾಟಕ ಏಕೀಕರಣದ  ರೂವಾರಿಯಾಗಿ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 

ಭಾಷೆಯಾಧಾರಿತ ರಾಜ್ಯ ನಿರ್ಮಾಣವನ್ನು ಬೆಂಬಲಿಸಿ 1955 ರಲ್ಲಿ ‘ಮೈಸೂರು ವಿಧಾಯಕ ಸಭೆ’ಯಲ್ಲಿ ಅವರು ಮಾಡಿದ ಭಾಷಣ ಎಲ್ಲ ಕನ್ನಡಿಗರೂ ಮೆಚ್ಚುವಂತಹದು. ರಾಜಕಾರಣದ ಒಂದು ಭಾಗವಾಗಿ ಭಾರತದ  ಸಂವಿಧಾನದ ಕರಡು ರಚನಾ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದು.

ಕರ್ನಾಟಕ ಏಕೀಕರಣಕ್ಕೆ(1956)ಮೊದಲೇ  ಮುಖ್ಯಮಂತ್ರಿ ಸ್ಥಾನಕ್ಕೆ ತ್ಯಾಗ ಪತ್ರ ನೀಡಿ ರಾಷ್ಟ್ರ  ರಾಜಕಾರಣಕ್ಕೆ ಧುಮುಕಿದರು. 1962, 1967 ಮತ್ತು 1971 ರಲ್ಲಿ ಬೆಂಗಳೂರು ನಗರವನ್ನು ಪ್ರತಿನಿಧಿಸಿ ಮೂರು ಬಾರಿ ಲೋಕಸಭೆಗೆ ಆಯ್ಕೆಯಾದರು. ಈ ಅವಧಿಯಲ್ಲಿ ಅವರು ಕೇಂದ್ರ ಸಚಿವ ಸಂಪುಟದಲ್ಲಿ ರೈಲ್ವೆ ಮತ್ತು ಕೈಗಾರಿಕಾ ಸಚಿವರಾಗಿ ಉತ್ತಮ ಕಾರ್ಯ ನಿರ್ವಹಿಸಿದರು. 1977 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿ ಕೆ.ಎಸ್ . ಹೆಗ್ಡೆ ವಿರುದ್ಧ ನಿಂತು ಸೋತರು. ಅಲ್ಲಿಂದ ಮೂರು ವರ್ಷಗಳ ನಂತರ, ಅಂದರೆ  1980 ಡಿಸೆಂಬರ್ 1 ರಂದು ತಮ್ಮ 73 ನೇ ವಯಸ್ಸಿನಲ್ಲಿ ಮರಣ ಹೊಂದಿದರು.

ಮಾತನಾಡುವುದೇ ಸಾಧನೆಯಾಗ ಬಾರದು. ಆದರೆ ಸಾಧನೆಯೇ  ಮಾತನಾಡ ಬೇಕು ಎಂಬಂತೆ ಕೆಂಗಲ್ ಹನುಮಂತಯ್ಯ ನವರು ತಮ್ಮ ರಾಜಕೀಯ ಜೀವನದಲ್ಲಿ ನಡೆದುಕೊಂಡರು. ಇದಕ್ಕೆ ಉದಾಹರಣೆ ಎಂಬಂತೆ ಅವರು ಬೆಂಗಳೂರಿನಲ್ಲಿ  ನಿರ್ಮಿ ಸಿದ  ವಿಧಾನ ಸೌಧ ಕಟ್ಟಡವೇ ಸಾಕ್ಷಿ.ಇದು ಇಂದು ಹೆಚ್ಚು ಜಗತ್ ಪ್ರಸಿದ್ಧಿ ಪಡೆದಿದೆ. ಇದರಂತೆ ಅವರು ಇನ್ನೂ ಹತ್ತಾರು ಜನಪರ ಕೆಲಸಗಳನ್ನು ಮಾಡಿ, ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯನ್ನು ರಾಜ್ಯ ಇಂದು ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಸ್ಮರಿಸುತ್ತಿದೆ. 

-ಡಾ. ಎಸ್. ಶಿವಯ್ಯ, 

ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.

error: Content is protected !!