ವಿಶ್ವದ ಮೊಟ್ಟ ಮೊದಲ ಶಿಶು ತಜ್ಞ ಎನಿಸಿಕೊಂಡ (Paediatrician) `ಆಚಾರ್ಯ ಕಾಶ್ಯಪ’ರು ತಾಯಿಯ ಸ್ತನ್ಯವನ್ನು ಅಮೃತಕ್ಕೆ ಹೋಲಿಸಿದ್ದಾರೆ. ಪವಿತ್ರ ಕ್ಷೀರ ಸಾಗರವನ್ನು ಮಂಥನ ಮಾಡಿದಾಗ ಅದರಲ್ಲಿನ ಸಕಲ ದ್ರವ್ಯಗಳ ಸಾರವೇ ‘ಅಮೃತ’ವಾಯಿತಂತೆ. ಹಾಗೆಯೇ ದೇಹದ ಎಲ್ಲಾ ಪೋಷಕಾಂಶಗಳ ಸಾರದ ಭಾಗವೇ ಸ್ತನ್ಯವಾಗಿ ಪರಿಣಮಿಸುತ್ತದೆಯೆಂದು ಕಾಶ್ಯಪ ಮಹರ್ಷಿಯು ತಮ್ಮ ಶಿಶು ವೈದ್ಯಕೀಯ ಗ್ರಂಥದಲ್ಲಿ ಅತ್ಯಂತ ವಿಷದವಾಗಿ ವಿವರಿಸಿದ್ದಾರೆ.
ಇಲ್ಲಿ ಅಮೃತವನ್ನು ಕುಡಿದಂತಹ ದೇವತೆಗಳು ಹೇಗೆ ಅಜರಾಮರ [ಸಾವಿಲ್ಲದವರು] ರಾಗಿದ್ದಾರೋ ಹಾಗೆಯೇ ತಾಯಿಯ ಹಾಲು ಮಕ್ಕಳಿಗೆ ರೋಗ ನಿರೋಧಕ ಶಕ್ತಿ ನೀಡುವುದರೊಂದಿಗೆ, ಮಾರಕ ರೋಗಗಳಾದ ವಾಂತಿ, ಭೇದಿ, ಕ್ಷಯ, ಶ್ವಾಸಕೋಶ ಸಂಬಂಧಿ ಕಾಯಿಲೆಗಳನ್ನು ದೂರವಿಡುತ್ತದೆ.
ಧಾತ್ರಿ: ಕಾಶ್ಯಪ ಗ್ರಂಥದಲ್ಲಿ ತಾಯಿಯ ಸ್ಥಾನದಲ್ಲಿ ಧಾತ್ರಿ ಎಂಬ ಶಬ್ದದ ಉಪಯೋಗವನ್ನು ಮಾಡಲಾಗಿದೆ. ಇಲ್ಲಿ ಧಾತ್ರಿ ಎಂದರೆ ದಾದಿ. ಒಂದು ವೇಳೆ ತಾಯಿಯ ಅಥವಾ ಹಾಲಿನ ಅಲಭ್ಯತೆಯಾದಾಗ ಧಾತ್ರಿಯ (ದಾದಿಯ) ನೇಮಕ ಮಾಡಿ ಅವರು ಮಗುವಿಗೆ ಎದೆ ಹಾಲು ಕುಡಿಸಬೇಕೆಂದೂ ಅನ್ಯ ರೀತಿಯ ಹಾಲನ್ನು ಕುಡಿಸಬಾರದೆಂದು ಹೇಳಲಾಗಿದೆ. ಇಲ್ಲು ಕೂಡಾ ಸ್ತ್ರೀ ದುಗ್ದಕ್ಕೇ (ಹಾಲು) ವಿಶಿಷ್ಟ ಪ್ರಾಮುಖ್ಯತೆ ನೀಡಲಾಗಿದೆ.
ಶಿಶು ಪೋಷಣೆಯ ಮೂರು ಹಂತಗಳು:
* ಕ್ಷೀರಾದ: (EXCLUSIVE BREAST FEEDING) ಮಗು ಹುಟ್ಟಿದ ತಕ್ಷಣ ಕ್ಷೀರಾದ ಹಂತವು ಪ್ರಾರಂಭವಾಗುತ್ತದೆ. ಈ ಹಂತದಲ್ಲಿ ಕೇವಲ ಎದೆ ಹಾಲನ್ನು ಮಾತ್ರ ಕೊಡಬೇಕೆಂದು ತಿಳಿಸಲಾಗಿದೆ.
* ಕ್ಷೀರಾನ್ನಾದ: (BREAST MILK WITH SEMISOLID FOOD) ಈ ಹಂತದಲ್ಲಿ ಮಗುವಿಗೆ ಎದೆ ಹಾಲಿನ ಜೊತೆಗೆ ಅನ್ನಾದ ಎಂದರೆ ಮೆತ್ತನೆಯ ಅನ್ನವನ್ನು (ಗಂಜಿ) ಕೊಡಬೇಕು ಎಂದೂ ಜೊತೆ ಜೊತೆಗೆ ಕ್ಷೀರ ಎಂದರೆ ತಾಯಿಯ ಹಾಲನ್ನು ಕುಡಿಸಬೇಕು.
* ಅನ್ನಾದ: ಮೂರನೇಯ ಹಂತವಾದ ಅನ್ನಾದಲ್ಲಿ ಮಗುವಿಗೆ ಮೂರು ವರ್ಷದ ನಂತರ ಕೇವಲ ಅನ್ನವನ್ನು ಉಣಿಸಬೇಕು.
ನವಜಾತ ಶಿಶುಗಳಿಗೆ ತಾಯಿಯ ಮಡಿಲು, ಮೊಲೆ ಹಾಲು ಹಾಗೂ ತಾಯಿ ಪಕ್ಕದಲ್ಲಿಯೇ ಇದ್ದಾಳೆ ಎಂಬ ಭದ್ರತಾ ಭಾವನೆ ಇದ್ದರೇನೇ ಸ್ವರ್ಗ ಸುಖ. ಮಗುವಿಗೆ ತಾಯಿಯ ಎದೆಹಾಲಿಗಿಂತ ಅತ್ಯುತ್ತಮ ಆಹಾರ ಮತ್ತೊಂದಿಲ್ಲ. ಮಗು ಜನಿಸಿದ ಮೊದಲನೇ ದಿನದಿಂದಲೇ ತಾಯಿ ಹಾಗೂ ಮಗುವಿನ ನಡುವೆ ಬಿಡಿಸಲಾರದ ಬಾಂಧವ್ಯ ಸೃಷ್ಟಿಯಾಗುತ್ತದೆ. ತಾಯಿ ಹಾಲು ಉಣಿಸುವ ಮೂಲಕ ಈ ಬಾಂಧವ್ಯ ಮತ್ತಷ್ಟು ಗಟ್ಟಿ ಆಗುತ್ತದೆ.
ಅಮೃತ ಸಮಾನವಾದ ಸಾಕಷ್ಟು ಪೋಷಕಾಂ ಶಗಳನ್ನು ಹೊಂದಿದ ಎದೆ ಹಾಲು ಪ್ರಕೃತಿದತ್ತ ವಾಗಿದ್ದು, ಮಗುವಿಗೆ ಒಂದು ವರದಾನವಾಗಿದೆ ಎಂದು ಪುರಾತನ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿ ಕಾಶ್ಯಪ, ಸುಶ್ರುತ, ಚರಕ ಮಹರ್ಷಿಯವರು ಒತ್ತಿ ಹೇಳಿದ್ದಾರೆ.
ಇತ್ತೀಚಿನ ಸಂಶೋಧನೆಗಳಿಂದ ತಾಯಿಯ ಸ್ತನದಲ್ಲಿ ಇಮ್ಯುನೋ ಗ್ಲೋಬಲಿನ್. ರೋಗ ನಿರೋಧಕ ವಸ್ತುಗಳು ಲೈಸೋಜೋಮ್, ಲ್ಯಾಕ್ಟೋಪೆರಾಕ್ಸಿಡೇಸ್ ಹಾಗೂ ಬಿಳಿ ಕಣಗಳನ್ನು ಹೊಂದಿದೆಯೆಂದು ತಿಳಿಸಿದ್ದಾರೆ.
ಇಷ್ಟೆಲ್ಲಾ ಮಾಹಿತಿಯನ್ನು ತಿಳಿಸಿ ಹೇಳುತ್ತಿದ್ದರೂ ಕೂಡಾ ಎದೆ ಹಾಲಿನ ಬಗ್ಗೆ ಅನಾದರವೇಕೋ ತಿಳಿಯುತ್ತಿಲ್ಲ. ಸರ್ಕಾರ, ಸಂಘ-ಸಂಸ್ಥೆಗಳು ಎಷ್ಟೇ ನಿಯಂತ್ರಣ ಮಾಡಿದರೂ ಹಲವಾರು ಅಂತರರಾಷ್ಟ್ರೀಯ ಹಾಲಿನ ಪುಡಿ ಉತ್ಪಾದನಾ ಕಂಪನಿಗಳು, ತಮ್ಮ ವಿಶೇಷ ಜಾಹೀರಾತುಗಳನ್ನು ಪ್ರಚಾರ ಮಾಡುತ್ತಿವೆ. ಈ ಜಾಹೀರಾತುಗಳಿಂದ ತಾಯಂದಿರು ತಮ್ಮ ಎದೆ ಹಾಲಿಗಿಂತ ಒಳ್ಳೆಯದಿರಬಹುದೇನೋ ಎಂದು ಮೋಸ ಹೋಗುತ್ತಾರೆ.
ವಿಶ್ವ ಸ್ತನ್ಯ ಪಾನ ಸಪ್ತಾಹ: ಆಗಸ್ಟ್ 1 ರಿಂದ 7ರ ವರೆಗೆ ಜಗತ್ತಿನಾದ್ಯಂತ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ. ಈ ಸಪ್ತಾಹದಲ್ಲಿ ಎದೆ ಹಾಲಿನ ಮಹತ್ವ ಮತ್ತು ಸ್ತನ್ಯಪಾನ ಪ್ರೋತ್ಸಾಹದ ಬಗ್ಗೆ ಚಳುವಳಿಯ ಮಾದರಿಯಲ್ಲಿ ಸಂಘಟನೆ ಮಾಡಲಾಗುತ್ತಿದೆ. ವಿಶ್ವದ ಸಾಕಷ್ಟು ಜನರಿಗೆ ತಾಯಂದಿರಿಗೆ ಸ್ತನ್ಯ ಪಾನದ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ತರಬೇತಿಯನ್ನು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) BFHI BPNI ಮುಂತಾದ ಸಂಘ ಸಂಸ್ಥೆಗಳು ಹಲವಾರು ಶಿಶು ಸ್ನೇಹಪರ ಕಾರ್ಯಕ್ರಮಗಳನ್ನು ನಡೆಸುತ್ತಿವೆ.
ತಾಯಂದಿರೇ ಇಷ್ಟೆಲ್ಲಾ ಆರೋಗ್ಯ ಸಂಪದ್ಭರಿತವಾದ, ಯಾವುದೇ ಖರ್ಚಿಲ್ಲದೇ ಯಾವುದೇ ರೋಗಾಣು ಉತ್ಪನ್ನ ಮಾಡುವ ರೋಗಾಣು ಇಲ್ಲದೇ, 24 ಗಂಟೆಗಳೂ ಲಭ್ಯವಿರುವ ತಾಜಾ ಹಾಗೂ ಸುಲಭವಾಗಿ ಜೀರ್ಣವಾಗಬಲ್ಲ ದೈವದತ್ತವಾದ ತಾಯಿ ಹಾಲು ಕುಡಿಸಲು ಸಂಘ-ಸಂಸ್ಥೆಗಳು, ಮಕ್ಕಳ ತಜ್ಞರು, ವಿಶ್ವ ಆರೋಗ್ಯ ಸಂಸ್ಥೆ ಮುಂತಾದವುಗಳ ಶಿಫಾರಸ್ಸು ಹಾಗೂ ಮಧ್ಯಸ್ಥಿಕೆ ಬೇಕೆ ?
ಡಾ|| ಮೃತ್ಯುಂಜಯ ಎನ್. ಹಿರೇಮಠ
ಛೇರ್ಮನ್, ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ದಾವಣಗೆರೆ.