ಇಂದು ವಿಶ್ವ ಐವಿಎಫ್ ದಿನಾಚರಣೆ

ಇಂದು ವಿಶ್ವ ಐವಿಎಫ್ ದಿನಾಚರಣೆ

ಜುಲೈ 25 ರಂದು, ವಿಶ್ವ ಐವಿಎಫ್ ದಿನಾಚರಣೆ ಮತ್ತು  ಮೊದಲ “ಟೆಸ್ಟ್-ಟ್ಯೂಬ್” ಮಗುವಾದ  ಲೂಯಿಸ್  ಬ್ರೌನ್    ಹುಟ್ಟುಹಬ್ಬದ ಪ್ರಯುಕ್ತ, ಪುನರುತ್ಪತ್ತಿ  ಎಂಡೊಕ್ರಿನಾಲಜಿ  ಮತ್ತು ಸಂತಾನ ಲಾಭಕ್ಕೆ  ಸಂಬಂಧಿಸಿದ  ಕ್ಷೇತ್ರದಲ್ಲಿ  ಆದ  ವೈಜ್ಞಾನಿಕ  ಪ್ರಗತಿಯನ್ನು  ಅವಲೋಕಿಸಲಾಗುವುದು.

ವಿಶ್ವ ಐವಿಎಫ್ (IVF )ದಿನದ ಇತಿಹಾಸ : ಐವಿಎಫ್ ಯಾತ್ರೆಯು 1978 ರಲ್ಲಿ  ಬ್ರಿಟಿಷ್ ಸಂಶೋಧಕರಾದ ರಾಬರ್ಟ್ ಎಡ್ವರ್ಡ್ಸ್, ಪ್ಯಾಟ್ರಿಕ್ ಸ್ಟೆಪ್ಟೋ ಮತ್ತು ಜೀನ್ ಪರ್ಡಿ ಅವರಿಂದ ಪ್ರಾರಂಭವಾಯಿತು, ಲೂಯಿಸ್ ಬ್ರೌನ್, ವಿಶ್ವದ ಮೊದಲ “ಟೆಸ್ಟ್-ಟ್ಯೂಬ್ ಶಿಶು” ಜನನದೊಂದಿಗೆ ಇತಿಹಾಸವನ್ನು ಸೃಷ್ಟಿಸಿದರು. 1978ರಲ್ಲಿ ಯಶಸ್ವಿಯಾಗಿ ಪ್ರಾರಂಭವಾದ ನಂತರ, ಐವಿಎಫ್ (ಇನ್ ವಿಟ್ರೋ ಫರ್ಟಿಲೈಸೇಶನ್) ತಂತ್ರಜ್ಞಾನವು ಹಸುರುಸಿಗೆಯಾಗಿ ಪರಿವರ್ತನೆಗೊಂಡಿದೆ. ಇದು ಸಂತಾನೋತ್ಪತ್ತಿ ಸಮಸ್ಯೆಗಳಿಂದ ಬಳಲುತ್ತಿರುವ ಲಕ್ಷಾಂತರ ವ್ಯಕ್ತಿಗಳು ಮತ್ತು ದಂಪತಿಗಳಿಗೆ ಪೋಷಕತ್ವದ ಬಾಗಿಲನ್ನು ತೆರೆಯುತ್ತಿದೆ ಮತ್ತು  ಕೇವಲ ಕನಸು ಎಂದು ಭಾವಿಸಿದ್ದನ್ನು ಸಾಧಿಸಲು ಸಹಾಯ ಮಾಡುತ್ತಿದೆ

ಗರ್ಭಧಾರಣೆ ಸಮಸ್ಯೆಗಳ ಪ್ರಮಾಣ (Infertility Rate)

ಸುಮಾರು  10-15% ದಂಪತಿಗಳು ಗರ್ಭಧಾರಣೆಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.      

ಮಕ್ಕಳಿಗಾಗಿ ಪ್ರಯತ್ನಿಸುತ್ತಿರುವ ಪ್ರತಿ 100 ಜೋಡಿಗಳಲ್ಲಿ, ಸುಮಾರು 84 ಮಹಿಳೆಯರು ಒಂದು ವರ್ಷದೊಳಗೆ ಗರ್ಭವತಿ ಆಗುತ್ತಾರೆ, 92 ಮಹಿಳೆಯರು 2 ವರ್ಷದೊಳಗೆ ಗರ್ಭವತಿ ಆಗುತ್ತಾರೆ , ಮತ್ತು 93 ಮಹಿಳೆಯರು 3 ವರ್ಷದೊಳಗೆ  ಗರ್ಭವತಿ ಆಗುತ್ತಾರೆ. 3 ವರ್ಷಗಳ ನಂತರವು ಗರ್ಭಿಣಿಯಾಗದಿದ್ದರೆ, ಮುಂದಿನ ವರ್ಷದಲ್ಲಿ ಗರ್ಭಧಾರಣೆ ನಡೆಯುವ ಸಂಭವನೀಯತೆ 25% ಅಥವಾ ಅದಕ್ಕಿಂತ ಕಡಿಮಯಾಗುತ್ತದೆ. 

ಪುರುಷರು ಮತ್ತು ಮಹಿಳೆಯರಲ್ಲಿ ಗರ್ಭಧಾರಣೆಯ ಸಮಸ್ಯೆಗಳು  : ಗರ್ಭಧಾರಣೆಯ ಸಮಸ್ಯೆಗಳು ಪುರುಷರಲ್ಲೂ ಮತ್ತು ಮಹಿಳೆಯರಲ್ಲೂ ಸಮಾನ ಪ್ರಮಾಣದಲ್ಲಿ ಕಂಡುಬರುತ್ತವೆ.

  • ಪುರುಷರಲ್ಲಿ 40-50% ಗರ್ಭಧಾರಣೆಯ ಸಮಸ್ಯೆಗಳು: ವೀರ್ಯ ಪ್ರಮಾಣ ಕಡಿಮೆ, ವೀರ್ಯಗುಣ ಕೆಟ್ಟಿರುವುದು, ಅಥವಾ ವೀರ್ಯೋತ್ಪತ್ತಿಯ ಸಮಸ್ಯೆಗಳು.
  • ಮಹಿಳೆಯರಲ್ಲಿ 40-50% ಗರ್ಭಧಾರಣೆಯ ಸಮಸ್ಯೆಗಳು:  30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಗರ್ಭಧಾರಣೆಯ ಪ್ರಮಾಣ ಕಡಿಮೆ ಆಗುತ್ತಿದೆ, ಪಾಲಿಸಿಸ್ಟಿಕ್ ಓವರಿಯನ್ ಡಿಸೀಸ್ (PCOD), ಹಾರ್ಮೋನ್‌ ಅಸಮತೋಲನ, ಟ್ಯೂಬಲ್  ಬ್ಲಾಕ್(Tubal Blockage), ಕಡಿಮೆ ಅಂಡಾನುಗಳ ಉತ್ಪತ್ತಿ, ಎಂಡೊಮೆಟ್ರಿಯೋಸಿಸ್ ಇ೦ತಹ ಸಮಸ್ಯೆಗಳಿಗೆ ಐವಿಎಫ್ ಒ೦ದು ಆಶಾ ಕಿರಣವಾಗಿದೆ

ಐವಿಎಫ್ ತಂತ್ರಜ್ಞಾನದ ಪ್ರಗತಿ -ನಿರಂತರ ಸಂಶೋಧನೆಯಿ೦ದಾಗಿ ಐವಿಎಫ್ ತಂತ್ರಜ್ಞಾನದಲ್ಲಿ ಬಹಳ ಪ್ರಗತಿಯಾಗಿದೆ. ಉದಾಹರಣೆಗೆ ಇಂಟ್ರಾಸೈಟೊಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ICSI), ಪ್ರಿ-ಇಂಪ್ಲಾಂಟೇಶನ್ ಜೆನೆಟಿಕ್ ಟೆಸ್ಟಿಂಗ್ (PGT),ಅಸಿಸ್ಟೆಡ್ ಹ್ಯಾಚಿಂಗ್ ಮತ್ತು ಗ್ಯಾಮೇಟ್ಸ್/ಭ್ರೂಣಗಳ ಕ್ರಯೋಪ್ರೀಸರ್ವೇಷನ್, ಮುಂತಾದ ವೈದ್ಯಕೀಯ ಮಧ್ಯಪ್ರವೇಶಗಳಿ೦ದಾಗಿ ಅನೇಕ ದಂಪತಿಗಳ ಜೀವನದಲ್ಲಿ ಮಕ್ಕಳ ನಗುವಿನಿಂದ ಸಂತೋಷ ತಂದಿವೆ. 

ವಿಶ್ವ ಐವಿಎಫ್ ದಿನದ ಪ್ರಾಮುಖ್ಯತೆ : ಮೊದಲನೆಯದಾಗಿ, ಇದು ಬಂಜೆತನ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ, ಈ ಆಳವಾದ ವೈಯಕ್ತಿಕ ಹೋರಾಟದ ಸುತ್ತಲಿನ ಮೌನ ಮತ್ತು ಕಳಂಕವನ್ನು ಮುರಿಯುತ್ತದೆ. ವಿಶ್ವ IVF ದಿನವು ಫಲವತ್ತತೆ ಚಿಕಿತ್ಸೆಗಳಿಗೆ ಒಳಗಾಗುವ ವ್ಯಕ್ತಿಗಳು ಮತ್ತು ದಂಪತಿಗಳು ಎದುರಿಸುತ್ತಿರುವ ಭಾವನಾತ್ಮಕ ಮತ್ತು ಆರ್ಥಿಕ ಸವಾಲುಗಳನ್ನು ಬಿ೦ಬಿಸುತ್ತದೆ ಹಾಗು IVF ಮೂಲಕ ಜನಿಸಿದ ಪ್ರತಿಯೊಂದು ಮಗುವು ಪ್ರೀತಿ, ನಿರ್ಣಯ ಮತ್ತು ವಿಜ್ಞಾನದ ಶಕ್ತಿಗೆ ಸಾಕ್ಷಿಯಾಗಿದೆ ಎಂಬುದನ್ನು ನಾವು ನೆನಪಿನಲ್ಲಿಡೋಣ. 

ಬಂಜೆತನವನ್ನು ತಪ್ಪಿಸಲು ಪುರುಷರು ಮತ್ತು ಸ್ತ್ರೀಯರು ಅನುಸರಿಸಬಹುದಾದ ಕೆಲವು ಸಲಹೆಗಳು:

  •  ಆಹಾರ ಕ್ರಮ – ಸಮತೋಲನ ಆಹಾರ, ತಾಜಾ ಹಣ್ಣು, ತರಕಾರಿ, ಧಾನ್ಯಗಳು ಮತ್ತು ಪ್ರೋಟೀನ್‌ ಸಮೃದ್ಧ ಆಹಾರ ಸೇವಿಸಬೇಕು.
  •  ತೂಕ ನಿಯಂತ್ರಣ –ತೈಲ ,ಜಂಕ್ ಫುಡ್ ಮತ್ತು ಸಕ್ಕರೆ ಪ್ರಮಾಣ ಕಡಿಮೆ ಮಾಡಬೇಕು,
  •  ವ್ಯಾಯಾಮ- ದಿನನಿತ್ಯ 30 ನಿಮಿಷ -ನಡೆಗೆ, ಜಾಗಿಂಗ್, ಸೈಕ್ಲಿಂಗ್ ಅಥವಾ ಯೋಗ ಮಾಡಬೇಕು
  •  ಮಾನಸಿಕ ಒತ್ತಡದ ನಿಯ೦ತ್ರಣ -ಧ್ಯಾನ, ಯೋಗ ಮತ್ತು ಪ್ರಾಣಾಯಾಮದ ಅಭ್ಯಾಸ ಮಾಡಬೇಕು
  • ನಿದ್ರೆ -ಪ್ರತಿದಿನ 7-8 ಗಂಟೆ ಗುಣಮಟ್ಟದ ನಿದ್ರೆ ಮಾಡಬೇಕು
  • ಮಾದಕ ವ್ಯಸನಗಳಿಂದ ದೂರ -ಧೂಮಪಾನ ಮತ್ತು ಮದ್ಯಪಾನ ಸಂಪೂರ್ಣವಾಗಿ ಬಿಡಬೇಕು. ಅಕ್ರಮ ಮಾದಕ ವಸ್ತು ಬಳಕೆಯನ್ನು ತಪ್ಪಿಸಬೇಕು.
  • ಹಾರ್ಮೋನಲ್ ಬದಲಾವಣೆ (Hormonal Changes)- ಹಾರ್ಮೋನ್ ಅಸಮತೋಲನ ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ
  • ಪುರುಷರಿಗೆ- ಈ ಮೆಲಿನ ಸಲಹೆ ಜೊತೆಯಾಗಿ ಸಡಿಲ ಬಟ್ಟೆಗಳನ್ನು, ವಿಶೇಷವಾಗಿ ಒಳಬಟ್ಟೆಗಳನ್ನು ಧರಿಸಿ, ಹಾಟ್ ವಾಟರ್ ಬಾತ್ಸ್ ಬಳಸದಿರಿ , ಲ್ಯಾಪ್‌ಟಾಪ್‌ಗಳನ್ನು ತೊಡೆಯ ಮೇಲಿಟ್ಟುಕೊಳ್ಳುವುದರಿ೦ದ ಶಾಖಕ್ಕೆ ಸಂಪರ್ಕಕ್ಕೆ ಬಂದಾಗ ವೀರ್ಯೋತ್ಪತ್ತಿ ಕಡಿಮೆಯಾಗುತ್ತದೆ.

ಹೀಗೆ ಬಂಜೆತನದ ಸವಾಲುಗಳನ್ನು ಎದುರಿಸುತ್ತಿರುವ ಅಸಂಖ್ಯಾತ ದಂಪತಿಗಳು ಮತ್ತು ವ್ಯಕ್ತಿಗಳಿಗೆ ಐವಿಎಫ್ ತಂದ ಭರವಸೆ ಮತ್ತು ಸಂತೋಷದ ಜ್ಞಾಪನೆಯಾಗಿ ವಿಶ್ವ ಐವಿಎಫ್ ದಿನಾಚರಣೆಯು ಕಾರ್ಯನಿರ್ವಹಿಸುತ್ತದೆ.

ಇಂದು ವಿಶ್ವ ಐವಿಎಫ್ ದಿನಾಚರಣೆ - Janathavani– ಡಾ. ವರ್ಷಿತ ವರುಣ್ ಆಲೂರು, ಎಂ.ಎಸ್., (ಓಬಿಜಿ.), ಎಫ್.ಆರ್.ಎಂ., ಬಂಜೆತನ ಮತ್ತು ಪ್ರನಾಳ ಶಿಶು ತಜ್ಞರು, ದಾವಣಗೆರೆ.

error: Content is protected !!