ಕೊಟ್ಟೂರು, ಮಾ. 8 – ತಾಲ್ಲೂಕಿನ ಗಾಣಗಟ್ಟೆ ಗ್ರಾಮದ ಆದಿಶಕ್ತಿ ಶ್ರೀ ಮಾಯಮ್ಮ ದೇವಿ ರಥೋತ್ಸವವು ಸಕಲ ವಾದ್ಯ ಮೇಳಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ಬುಧವಾರ ಸಂಜೆ ಅದ್ಧೂರಿಯಾಗಿ ಜರುಗಿತು. ರಥೋತ್ಸವಕ್ಕೂ ಮೊದಲು ಶ್ರೀ ಮಾಯಮ್ಮ ದೇವಿಗೆ ಬೇವಿನ ಎಲೆಯ ಜೊತೆಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿದ ನಂತರ ಶ್ರೀ ದೇವಿಯ ಪಟಾಕ್ಷಿ ಹರಾಜು ಪ್ರಕ್ರಿಯೆ ನಡೆಯಿತು.
ಕೊಟ್ಟೂರು ತಾಲ್ಲೂಕು ಗಾಣಗಟ್ಟೆ ಗ್ರಾಮದ ತಳವಾರ ಓಬಳೇಶ್ ಅವರು 3,10,101 ಲಕ್ಷ ರೂಪಾಯಿಗೆ 2023 ರ ಈ ವರ್ಷದ ಮಾಯಮ್ಮ ದೇವಿಯ ಪಟಾಕ್ಷಿಯನ್ನು ಪಡೆದುಕೊಂಡರು.
ನಂತರ ರಥೋತ್ಸವಕ್ಕೆ ಚಾಲನೆ ದೊರಕಿತು. ತೇರು ಏರುವ ಸಮಯದಲ್ಲಿ ನೆರೆದಿದ್ದ ಸಹಸ್ರಾರು ಭಕ್ತರು ಜಯಘೋಷ ಕೂಗುತ್ತಿದ್ದಂತೆ ಆಯಗಾರ ಬಳಗದ ಭಕ್ತರಿಂದ ತೇರನ್ನು ಕೈಯಿಂದ ತಳ್ಳುವ ಮೂಲಕ ಚಾಲನೆಗೊಂಡಿತು.
ಶ್ರೀದೇವಿಯ ಭಕ್ತರು ಬಾಳೆಹಣ್ಣು, ಹೂವು, ದವನವನ್ನು ರಥಕ್ಕೆ ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.