ದಾವಣಗೆರೆ, ಏ. 18- ತಾಲ್ಲೂಕಿನಲ್ಲಿ ನುಸಿ ರೋಗದ ಬಾಧೆ ಹೆಚ್ಚುತ್ತಿದ್ದು, ಶ್ಯಾಗಲೆ, ಆನಗೋಡು, ಬಿಸಲೇರಿ, ಓಬೇನಹಳ್ಳಿ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ನುಸಿ ರೋಗದ ಲಕ್ಷಣಗಳು ಹೆಚ್ಚಾಗಿ ಕಂಡುಬಂದಿದ್ದು, ಇದರ ನಿರ್ವಹಣೆಗೆ ತೋಟಗಾರಿಕೆ ಇಲಾಖೆ ರೈತರಿಗೆ ಸಲಹೆ ನೀಡಿದೆ.
ಕೀಟವು ಸೂಕ್ಷ್ಮ ಜೇಡರ ನುಸಿಗಳಾಗಿದ್ದು, ಕೆಂಪು ಅಥವಾ ಬಿಳಿ ಬಣ್ಣದ್ದಾಗಿರುತ್ತವೆ. ಈ ಕೀಟಗಳು ಅಡಿಕೆ ಎಲೆಗಳ ಕೆಳಭಾಗದಲ್ಲಿ ಗುಂಪಾಗಿ ಕಂಡುಬರುತ್ತವೆ. ಇವು ಗರಿಗಳಲ್ಲಿ ರಸಹೀರುವುದರಿಂದ ಕೀಟ ಬಾಧೆಗೊಳಗಾದ ಎಲೆಗಳು ಹಳದಿ ಮಿಶ್ರಿತ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಒಮ್ಮೊಮ್ಮೆ ಕಾಯಿಗಳೂ ಕೀಟ ಬಾಧೆಗೆ ತುತ್ತಾಗುತ್ತವೆ. ತೆಂಗಿನಲ್ಲಿ ಕಾಯಿಗಳ ಮೇಲೆ ತ್ರಿಕೋನಾಕಾರದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ನಂತರ ಕಾಯಿಗಳು ಬಿರುಕು ಮೂಡಿ ಉದುರುತ್ತವೆ. ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತದೆ.
ಕೀಟ ಬಾಧೆ ನಿಯಂತ್ರಿಸಲು ವಹಿಸಬೇಕಾದ ಕ್ರಮಗಳೆಂದರೆ ಕೀಟ ಬಾಧೆಗೊಳಗಾದ ಸಸಿಗಳನ್ನು ನಾಟಿಗೆ ಬಳಸಬಾರದು. ಕೀಟ ಬಾಧೆ ಹೆಚ್ಚಿದ್ದಲ್ಲಿ ಪ್ರತಿ ಲೀಟರ್ ನೀರಿಗೆ ಡೈಕೋಫಾಲ್ ಬೆರೆಸಿ, ಎಲೆಯ ಕೆಳಭಾಗಕ್ಕೆ ಸಿಂಪಡಿಸಬೇಕು. ಅವಶ್ಯಕತೆ ಇದ್ದಲ್ಲಿ 15 ದಿನಗಳ ಅಂತರದಲ್ಲಿ ಮತ್ತೊಮ್ಮೆ ಸಿಂಪಡಿಸಬೇಕು ಎಂದು ತೋಟಗಾರಿಕೆ ಉಪನಿರ್ದೇಶಕ ಲಕ್ಷ್ಮಿಕಾಂತ್ ಬೊಮ್ಮಣ್ಣನವರ್ ತಿಳಿಸಿದ್ದಾರೆ.