ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜನರಿಗೆ ತಲುಪಿಸುವುದು ಜನಪ್ರತಿನಿಧಿಗಳ ಕರ್ತವ್ಯ

ಹರಪನಹಳ್ಳಿ ತಾಲ್ಲೂಕು ಕಂಚಿಕೇರಿಯಲ್ಲಿ ಎಂ.ಟಿ. ಸುಭಾಷ್ ಚಂದ್ರ

ಹರಪನಹಳ್ಳಿ, ಏ.18-  ಜನಸಾಮಾನ್ಯರಿಗೆ ಪ್ರಜಾಪ್ರಭುತ್ವದ  ನಿಜವಾದ ಮೌಲ್ಯಗಳನ್ನು ತಲುಪಿಸಬೇಕಾಗಿರುವುದು  ಚುನಾಯಿತ ಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕಂಚಿಕೇರಿ ಎಂ.ಟಿ. ಸುಭಾಷ್ ಚಂದ್ರ ಹೇಳಿದರು.

ತಾಲ್ಲೂಕಿನ  ಕಂಚಿಕೇರಿ ಗ್ರಾಮದಲ್ಲಿ ಸಮತ ಗ್ರಾಮೀಣಾಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಸಮತ ವಿದ್ಯಾಲಯದ ಆವರಣದಲ್ಲಿ  ಕಂಚಿಕೇರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಸದಸ್ಯರಿಗೆ ಹಾಗೂ ಪರಾಜಿತಗೊಂಡ ಅಭ್ಯರ್ಥಿಗಳಿಗೆ ಪಕ್ಷಾತೀತವಾಗಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗೆಲುವು ಸಾಧಿಸಿದ ಸದಸ್ಯರು ಅಧಿಕಾರದ ಅಮಲನ್ನು ತಲೆಗೆ ಹತ್ತಿಸಿಕೊಳ್ಳದೆ ಜನಗಳ ಸೇವೆ ಮಾಡುವ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು. ಕಳೆದ ಎರಡು ಅವಧಿಯಲ್ಲೂ ಕೂಡ ನಾನು ಹರಪನಹಳ್ಳಿ ವಿಧಾನಸಭಾಕ್ಷೇತ್ರದ ಶಾಸಕ ಸ್ಥಾನದ  ಆಕಾಂಕ್ಷಿಯಾಗಿದ್ದು ಈ ಬಾರಿ ಕೂಡ ಕಾಂಗ್ರೆಸ್ ಪಕ್ಷದಿಂದ ನಾನು ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಜಯಲಕ್ಷ್ಮಿ ಮಾತನಾಡಿ, ಗ್ರಾಮದ ಅಭಿವೃದ್ಧಿ ಹಾಗೂ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಹೊಣೆಗಾರಿಕೆ ಮಹಿಳೆಯರ ಮೇಲಿದೆ ಎಂದರು. ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬೂದಿಹಾಳ್ ಮಂಜುನಾಥ್ ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕಿಂತ ಇಂದು ಶಿಕ್ಷಣ ಸಂಸ್ಥೆಗಳನ್ನು ಕಟ್ಟಬೇಕಿದೆ. ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ವೀರಣ್ಣ, ಪುರಸಭೆ ಮಾಜಿ ಅಧ್ಯಕ್ಷೆ ಪುಷ್ಪಾ ದಿವಾಕರ್, ರತ್ನಮ್ಮ ತಿಪ್ಪೇಸ್ವಾಮಿ, ವಕೀಲರಾದ ನಾಗರಾಜ, ಹಲಗೇರಿ ಮಂಜುನಾಥ್‌, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮಂಜುನಾಥ, ಮುಖಂಡರಾದ  ಹಳ್ಳಿಕೇರಿ ಪರಸಪ್ಪ,  ದಾನಹಳ್ಳಿ ಕೊಟ್ರೇಶಪ್ಪ, ಕಡತಿ ತಿಪ್ಪೇಸ್ವಾಮಿ, ಬೆಂಡಿಗೇರಿ ಬಾಬಣ್ಣ, ಚೆನ್ನವೀರಯ್ಯ, ಕಬ್ಬಳ್ಳಿ ಪರಸಪ್ಪ, ಗುಡಿಹಳ್ಳಿ ಹಾಲೇಶ್‌, ಯಂಕಪ್ಪ, ಪತ್ರಕರ್ತ ವೆಂಕಟೇಶ್,  ಡಿ.ಕೆ. ಶಿವಕುಮಾರ, ವಿಜೇಯ, ದಿವಾಕರ ಸೇರಿದಂತೆ ಇನ್ನಿತರರಿದ್ದರು.

error: Content is protected !!