ಕೊಟ್ಟೂರು, ಮಾ.13- ತಾಲ್ಲೂಕಿನ ಗಾಣಗಟ್ಟೆ ಗ್ರಾಮದಲ್ಲಿ ಮಾಯಮ್ಮ ದೇವಿಯ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಿನ್ನೆ ಸಂಜೆ ವಿಜೃಂಭಣೆಯಿಂದ ಜರುಗಿತು.
ವಿಜಯನಗರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಆಂಧ್ರಪ್ರದೇಶದ ನಾನಾ ಭಾಗಗಳಿಂದ ಭಕ್ತರು ರಥೋತ್ಸವಕ್ಕೆ ಆಗಮಿಸಿದ್ದರು. ಕೆಲ ಭಕ್ತರು ಪಾದಯಾತ್ರೆಯ ಮೂಲಕ ಸನ್ನಿಧಿಗೆ ಆಗಮಿಸಿ ಹರಕೆ ತೀರಿಸಿದರು.
ರಥೋತ್ಸವಕ್ಕೂ ಮೊದಲು ದೇವಿ ಉತ್ಸವ ಮೂರ್ತಿಯನ್ನು ರಥದ ಸುತ್ತ ಮೂರು ಸಾರಿ ಪ್ರದಕ್ಷಿಣೆ ಹಾಕಿ ಧಾರ್ಮಿಕ ಕಾರ್ಯ ನೆರವೇರಿ ಸಿದ ಬಳಿಕ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಇದೇ ಸಂದರ್ಭದಲ್ಲಿ ಹರಾಜು ಹಾಕಲಾದ ಮಾಯಮ್ಮ ದೇವಿಯ ಪಟವನ್ನು 3,01,001 ರೂ.ಗಳಿಗೆ ಅಂಜಿನಪ್ಪ ಪಡೆದುಕೊಂಡರು. ನಂತರ ರಥವು ಮುಂದೆ ಸಾಗುತ್ತಿದ್ದಂತೆ ಭಕ್ತರು ಜಯಘೋಷ ಹಾಕಿ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಕೂಡ್ಲಿಗಿ ಕ್ಷೇತ್ರದ ಶಾಸಕ ಶ್ರೀನಿವಾಸ್, ಚಳ್ಳಕೆರೆ ಶಾಸಕ ರಘು ಮೂರ್ತಿ, ಜಗಳೂರು ಶಾಸಕ ದೇವೇಂದ್ರಪ್ಪ, ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಮಾಜಿ ಶಾಸಕ ರಾಮಚಂದ್ರಪ್ಪ ದೇವಿಯ ದರ್ಶನ ಪಡೆದು ರಥೋತ್ಸವದಲ್ಲಿಪಾಲ್ಗೊಂಡಿದ್ದರು.