ಇದು ದೇಶಕ್ಕೆ ಮಾರಕ : ಶಾಸಕ ಬಿ.ಪಿ. ಹರೀಶ್ ಆತಂಕ
ದಾವಣಗೆರೆ, ಮಾ. 9- ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿರುವ 16 ನೇ ಬಜೆಟ್ ಕೇವಲ ಅಲ್ಪಸಂಖ್ಯಾತರ ಓಲೈಕೆಯ ಬಜೆಟ್ ಆಗಿದೆ. ಇದು ದೇಶಕ್ಕೆ ಮಾರಕ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಯಾವುದೋ ಒಂದು ಧರ್ಮದ ಪರವಾಗಿ ಬಜೆಟ್ ಮಂಡನೆ ಮಾಡಿರುವುದು ಸರಿಯಲ್ಲ. ರಾಜ್ಯದ ಸರ್ವ ಜನಾಂಗದ ಬಗ್ಗೆ ಗಮನಹರಿಸಬೇಕಾದ ಸಿಎಂ ಸಿದ್ಧರಾಮಯ್ಯ ಕೇವಲ ಅಲ್ಪಸಂಖ್ಯಾತರ ಮತಗಳ ಕಡೆಗೆ ಗಮನಹರಿಸಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿಯಾದರೆ ರಾಜ್ಯದ ಅಭಿ ವೃದ್ಧಿಯಾಗುತ್ತದೆ ಎಂಬ ಭ್ರಮೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಅನೇಕ ಹಿಂದುಳಿದ ಸಮುದಾಯ ಗಳಿದ್ದರೂ ಅವುಗಳ ಕಡೆ ಗಮನಹರಿಸಿಲ್ಲ. ಇದಲ್ಲದೇ ಪರಿಶಿಷ್ಟರ ನಿಗಮದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ಅವರಿಗೆ ಅನ್ಯಾಯ ಎಸಗಿದ್ದಾರೆಂದು ಕಿಡಿಕಾರಿದರು.
ಚುನಾವಣಾ ಪೂರ್ವದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ. 90 ರಷ್ಟು ಭರವಸೆಗಳು ಹುಸಿಯಾಗಿವೆ. ಗುತ್ತಿಗೆದಾರರ ಹಣ ಬಿಡುಗಡೆ ಮಾಡದ, ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡದ ಸ್ಥಿತಿಯನ್ನು ಕಾಂಗ್ರೆಸ್ ತಲುಪಿದೆ. ಯಾವುದೇ ಕೊಡುಗೆ ಇಲ್ಲದ ಬಜೆಟ್ ಇದಾಗಿದೆ ಎಂದರು.
ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯೋಜನೆಗಳನ್ನು ರೂಪಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲವಾಗಿದೆ. ಬಜೆಟ್‌ಗೂ ಮುನ್ನ ಜಿಲ್ಲೆಯ ಎಲ್ಲಾ ಶಾಸಕರ ಸಭೆ ಕರೆದು ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು. ಸಚಿವರು ಭ್ರಷ್ಠಾಚರದಲ್ಲಿ ತೊಡಗಿದ್ದಾರೆಂದು ದೂರಿದರು.
ಸಚಿವ ಮಲ್ಲಿಕಾರ್ಜುನ್ ಅವರು ಬೇರೆಯವರ ಬಗ್ಗೆ ಟೀಕೆ ಮಾಡುವಾಗ ಯೋಚನೆ ಮಾಡಬೇಕಾದ ಅಗತ್ಯವಿದೆ. ಶಾಮನೂರು ಶಿವಶಂಕರಪ್ಪ ಅವರು ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿಯಾಗಲು ದಿ. ಆಲೂರು ಚಂದ್ರಶೇಖರ್ ಹಾಗೂ ನನ್ನ ತಂದೆ ದಿ. ಪಿ. ಬಸವನಗೌಡ ಕಾರಣ. ಆಲೂರು ಚಂದ್ರ ಶೇಖರಪ್ಪ ಹಾಗೂ ಬಸವನಗೌಡ ಅವರ ಮನೆತನವನ್ನು ನೆನಪಿಸಿಕೊಳ್ಳಬೇಕು ಎಂದರು.
ಮಲ್ಲಿಕಾರ್ಜುನ್ ಅವರು ಅವರ ಉದ್ಯಮಗಳ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆಯೇ ಹೊರತು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಿಂಚಿತ್ತು ಕಾಳಜಿ ವಹಿಸಿಲ್ಲ. ಭ್ರಷ್ಠಾಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಯಾವ ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಳ್ಳುತ್ತಿಲ್ಲ. ಕ್ಷೇತ್ರದ ಜನತೆ ಪರ ಕೆಲಸ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ನಿಮ್ಮದೇ ಆದ ಪಕ್ಷದ ಶಾಸಕರಿಗೆ ಮಂತ್ರಿ ಸ್ಥಾನ ಕೊಡಿಸಿ ಎಂದು ಹೇಳಿದರು.
ವೀರೇಶ ಆದಾಪುರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.