ದಾವಣಗೆರೆ, ಫೆ.11- ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲ್ ಅವರ ಭಾವಚಿತ್ರವನ್ನು ಲೋಕಸಭೆಯಲ್ಲಿ ಅನಾವರಣ ಮಾಡುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಕಬ್ಬು ನಿಯಂತ್ರಣ ಮಂಡಳಿ ನಾಮ ನಿರ್ದೇಶಿತ ಸದಸ್ಯರೂ ಆದ ರೈತ ಮುಖಂಡ ತೇಜಸ್ವಿ ಪಟೇಲ್ ಮನವಿ ಮಾಡಿದ್ದಾರೆ. ಈ ಸಂಬಂಧ ಅವರು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಜಾತಿ, ಧರ್ಮ, ಪಕ್ಷಪಾತ ಮಾಡದ ಮಾಜಿ ಜೆ.ಎಚ್ ಪಟೇಲ್ ಅವರ ಅಪಾರ ಅಭಿಮಾನಿಗಳು ಈಗಲೂ ಸ್ಮರಿಸುತ್ತಾರೆ. ಆದರೆ ಪಟೇಲರು ಮತ ತರುವಂತಹ ನಾಯಕತ್ವ ಆಗಿರದ ಕಾರಣ, ಅವರ ನಂತರದ ಸರ್ಕಾರಗಳು ಅವರನ್ನು ಗೌರವಪೂರ್ವಕವಾಗಿ ನೆನಪಿಸಿಕೊಳ್ಳುವಂತಹ ಕೆಲಸ ಮಾಡದಿರುವುದು ಬೇಸರದ ಸಂಗತಿ ಆಗಿದೆ.
1967ರಲ್ಲಿ ಶಿವಮೊಗ್ಗ ಲೋಕಸ ಭಾ ಕ್ಷೇತ್ರದ ಪ್ರಥಮ ಕಾಂಗ್ರೆಸ್ಸೇತರ ಸಂಸದರಾಗಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಆಯ್ಕೆಯಾಗಿ ಕನ್ನಡದಲ್ಲಿಯೇ ಮಾತನಾಡಿದ್ದರ ಪ್ರಯುಕ್ತ ಕನ್ನಡ ಸೇರಿದಂತೆ ದೇಶದ ಎಲ್ಲ ಭಾಷೆಗಳು ಸಂಸತ್ತಿನಲ್ಲಿ ಮಾತನಾಡಲು ಅವಕಾಶವಾಯಿತು. ಮುಖ್ಯಮಂತ್ರಿಗಳಾಗಿಯೂ ಜನಪರ ಕಾರ್ಯಗಳನ್ನು ಅವರು ಮಾಡಿದ್ದಾರೆ. ಹಾಗಾಗಿ ಪಟೇಲರ ಭಾವಚಿತ್ರವನ್ನು ಲೋಕಸಭೆಯಲ್ಲಿ ಅನಾವರಣ ಮಾಡುವ ಮೂಲಕ ಗೌರವ ಸಲ್ಲಿಸಬೇಕು ಎಂದು ತೇಜಸ್ವಿ ಪಟೇಲ್ ಹೇಳಿದ್ದಾರೆ.