ನಂದಿಗಾವಿ ಶ್ರೀನಿವಾಸ್ ನೇತೃತ್ವದಲ್ಲಿ ಡಿಸಿ ಭೇಟಿ : ಟಾಸ್ಕ್‌ಫೋರ್ಸ್ ರಚನೆಗೆ ಒತ್ತಾಯ
ಮಲೇಬೆನ್ನೂರು, ಫೆ.3- ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಟ್ಟು ತಿಂಗಳು ಸಮೀಪಿಸುತ್ತಿದ್ದರೂ ಅಚ್ಚುಕಟ್ಟಿನ ಕೊನೆ ಭಾಗಕ್ಕೆ ಇದುವರೆಗೆ ಕನಿಷ್ಟ ನೀರು ಹರಿದು ಬರುತ್ತಿಲ್ಲ ಎಂದು ಕೊನೆ ಭಾಗದ ರೈತರು ಮಲೇಬೆನ್ನೂರಿನ ನೀರಾವರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜಲಾಶಯದಿಂದ ಬಲದಂಡೆ ನಾಲೆಗೆ 2650 ಕ್ಯೂಸೆಕ್ಸ್ ನೀರು ಹರಿಸುತ್ತಿದ್ದರೂ ಕೊನೆ ಭಾಗಕ್ಕೆ ಮಾತ್ರ ನೀರು ಹರಿಯುತ್ತಿಲ್ಲ. ಭದ್ರಾವತಿ, ಚನ್ನಗಿರಿ ತಾಲ್ಲೂಕುಗಳಲ್ಲಿ ನಾಲೆಗೆ ಅಳವಡಿಸಿರುವ ಸಾವಿರಾರು ಅಕ್ರಮ ಪಂಪ್‌ಸೆಟ್‌ಗಳು ನಾಲೆಯಲ್ಲಿ ಹರಿಯುವ ಅರ್ಧದಷ್ಟು ನೀರನ್ನು ಎತ್ತುತ್ತಿವೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಹೊಳೆಸಿರಿಗೆರೆ, ಭಾನುವಳ್ಳಿ, ಪಾಳ್ಯ, ಕೆ.ಎನ್.ಹಳ್ಳಿ, ಕಮಲಾಪುರ, ಯಲವಟ್ಟಿ, ಜಿಗಳಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರು, ರೈತರ ಸಮಸ್ಯೆ ಆಲಿಸಿ, ಭದ್ರಾ ಮುಖ್ಯ ಇಂಜಿನಿಯರ್ ಮತ್ತು ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡಿ, ಸಮಸ್ಯೆ ವಿವರಿಸಿ, ಪರಿಹಾರಕ್ಕೆ ಆಗ್ರಹಿಸಿದರು.
ಮಲೇಬೆನ್ನೂರಿನ ನೀರಾವರಿ ಕಚೇರಿಯಲ್ಲಿ ಇಂಜಿನಿಯರ್‌ಗಳು ಹಾಗೂ ಸಿಬ್ಬಂದಿ ಕೊರತೆ ಸಾಕಷ್ಟು ಇದೆ. ಕಾಲುವೆಗಳ ಮೇಲೆ ಸುತ್ತಾಡಿ ನೀರಿನ ನಿರ್ವಹಣೆ ಮಾಡುವವರು ಯಾರೆಂದು ನಂದಿಗಾವಿ ಶ್ರೀನಿವಾಸ್ ಭದ್ರಾ ಅಧೀಕ್ಷಕ ಇಂಜಿನಿಯರ್ ಅವರನ್ನು ಪ್ರಶ್ನಿಸಿದರು.
ದಿನಗೂಲಿ ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಹೀಗಾದರೆ ಅವರಿಂದ ಕೆಲಸ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ರೈತರು ವ್ಯಕ್ತಪಡಿಸಿ, ಬಸವಾಪಟ್ಟಣ ಬಳಿ ಆರ್ 2 ನಲ್ಲಿ ನೀರಿನ ಮಟ್ಟ ಕಡಿಮೆ ಇದ್ದು, ಇದಕ್ಕೆ ಯಾರು ಹೊಣೆ ? ಎಂದು ಪ್ರಶ್ನಿಸಿದರು.
ಅಕ್ರಮ ಪಂಪ್‌ಸೆಟ್‌ಗಳನ್ನು ಬಂದ್ ಮಾಡದ ಹೊರತು ಕೆಳಭಾಗಕ್ಕೆ ನೀರು ಬರುವುದು ಅಸಾಧ್ಯ ಎಂದು ರೈತರು ಹೇಳಿದಾಗ, ಶ್ರೀನಿವಾಸ್ ಅವರು ರೈತರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರು.
ಟಾಸ್ಕ್‌ಫೋರ್ಸ್ ರಚನೆ : ಭದ್ರಾ ಅಚ್ಚುಕಟ್ಟಿನ ಕೊನೆ ಭಾಗಕ್ಕೆ ನೀರು ಬರುತ್ತಿಲ್ಲ. ಇದರಿಂದ ರೈತರಿಗೆ ಬಹಳ ತೊಂದರೆ ಆಗುತ್ತಿದೆ. ನೀರಿಲ್ಲದೇ ತೋಟಗಳು ಒಣಗುತ್ತಿವೆ. ನಾಟಿ ಮಾಡಲು ನೀರಿಲ್ಲ ಎಂಬ ಅಂಶವನ್ನು ನಂದಿಗಾವಿ ಶ್ರೀನಿವಾಸ್ ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ವೈ.ದ್ಯಾವಪ್ಪರೆಡ್ಡಿ ಅವರು, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರ ಗಮನಕ್ಕೆ ತಂದು ಕೂಡಲೇ ಟಾಸ್ಕ್‌ಫೋರ್ಸ್ ಕಾರ್ಯಾ ಚರಣೆಗೆ ಒತ್ತಾಯಿಸಿದರು.
ರೈತರ ಮನವಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಈ ಹಿಂದೆ ರಚಿಸಿದ ಮಾದರಿಯಲ್ಲೇ ಟಾಸ್ಕ್‌ಫೋರ್ಸ್ ಸಮಿತಿ ಇವತ್ತು ರಾತ್ರಿಯಿಂದಲೇ ನಾಲೆಗಳ ಮೇಲೆ ಕಾರ್ಯಾಚರಣೆ ಆರಂಭಿಸುವಂತೆ ಚನ್ನಗಿರಿ, ಹರಿಹರ, ದಾವಣಗೆರೆ, ಹೊನ್ನಾಳಿ ತಾಲ್ಲೂಕುಗಳ ತಹಶೀಲ್ದಾರ್‌ಗಳ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಬೆಸ್ಕಾಂ ಇಲಾಖೆ, ನೀರಾವರಿ ಇಲಾಖೆಗಳು ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ನಂದಿಗಾವಿ ಶ್ರೀನಿವಾಸ್ `ಜನತಾವಾಣಿ’ಗೆ ಮಾಹಿತಿ ನೀಡಿದರು.
ಹೊಳೆಸಿರಿಗೆರೆಯ ತಿಪ್ಪೇರುದ್ರಪ್ಪ, ಬಸವನಗೌಡ, ನಾಗರಾಜ್, ಹೊರಟ್ಟಿ ಕರಿಬಸಪ್ಪ, ನಾಗರಾಜ್, ಎಳೆಹೊಳೆ ಕರಿಬಸಪ್ಪ, ಭಾನುವಳ್ಳಿಯ ನಾರಾಯಣಪ್ಪ, ಪವಾಡಿ ಬಸವರಾಜ್ ಮತ್ತು ಮಲೇಬೆನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ, ಕೆ.ಪಿ.ಗಂಗಾಧರ್, ಪಿ.ಹೆಚ್.ಶಿವಕುಮಾರ್, ಪ್ರಭಾರಿ ಇಇ ಮಂಜುನಾಥ್, ಮಲೇಬೆನ್ನೂರು ಎಇಇ ಕೃಷ್ಣಮೂರ್ತಿ ಮತ್ತು ಬಸವಾಪಟ್ಟಣ ಎಇಇ ಧನಂಜಯ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.