ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕ್ರಮ
ನವದೆಹಲಿ, ಫೆ. 2 – ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್) ಪರಿಶೀಲನಾ ಸಮಿತಿ ಅಧ್ಯಕ್ಷ ಹಾಗೂ ಆರು ಸದಸ್ಯರು ಸೇರಿ ದಂತೆ 10 ಜನರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೋ ಬಯಾಲಜಿ ವಿಭಾಗದಲ್ಲಿ ಸೀನಿ ಯರ್ ಪ್ರೊಫೆಸರ್ ಆಗಿರುವ ಗಾಯತ್ರಿ ದೇವರಾಜ್, ಜೆ.ಎನ್.ಯು. ಉಪನ್ಯಾಸಕ ಹಾಗೂ ಆಂಧ್ರ ಪ್ರದೇಶದ ಗುಂಟೂರಿನ ಕೆ.ಎಲ್.ಇ. ಎಫ್. (ಕೊನೇರು ಲಕ್ಷ್ಮಯ್ಯ ಎಜುಕೇಷನ್ ಫೌಂಡೇಷನ್) ಉಪಕುಲಪತಿ ಹಾಗೂ ಇಬ್ಬರು ಕಾರ್ಯಕಾರಿ ಅಧಿಕಾರಿಗಳು ಸಹ ಬಂಧನಕ್ಕೆ ಒಳಗಾಗಿದ್ದಾರೆ.
ಸಿಬಿಐ ದಾಖಲಿಸಿದ ಎಫ್.ಐ.ಆರ್.ನಲ್ಲಿ ಕೆ.ಎಲ್.ಇ.ಎಫ್. ಅಧ್ಯಕ್ಷ ಸತ್ಯನಾರಾಯಣ ನಾಯಕ್, ಮಾಜಿ ಉಪ ಸಲಹೆಗಾರ ಎಲ್.ಮಂಜುನಾಥ ರಾವ್, ಬೆಂಗಳೂರು ವಿಶ್ವ ವಿದ್ಯಾಲಯದ ಉಪನ್ಯಾಸಕ ಎಂ. ಹನುಮಂತಪ್ಪ ಹಾಗೂ ಶಾಮ ಸುಂದರ್ ಅವರ ಹೆಸರುಗಳಿವೆ. ಆದರೆ, ಇವ ರನ್ನು ಇದುವರೆಗೂ ಬಂಧಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆಎಲ್ಇಎಫ್ ಉಪಕುಲಪತಿ ಜಿ.ಪಿ. ಶರದಿವರ್ಮ, ಕೆಎಲ್ಇಎಫ್ ಉಪಾಧ್ಯಕ್ಷ ಕೊನೇರು ರಾಜ ಹರೀನ್, ಕೆ.ಎಲ್. ವಿಶ್ವವಿದ್ಯಾಲಯದ ನಿರ್ದೇಶಕ ಎ. ರಾಮಕೃಷ್ಣ ಅವರು ಎ++ ಮಾನ್ಯತೆ ಪಡೆಯಲು ನ್ಯಾಕ್ ಪರಿಶೀಲನ ಸಮಿತಿ ಸದಸ್ಯರ ಜೊತೆ ಭ್ರಷ್ಟಾಚಾರ ನಡೆಸಿದ್ದರು ಎಂದು ಸಿಬಿಐ ಆರೋಪಿಸಿದೆ.
ನ್ಯಾಕ್ ಪರಿಶೀಲನ ಸಮಿತಿ ಅಧ್ಯಕ್ಷ ಸಮರೇಂದ್ರ ನಾಥ ಸಹಾ ಅವರನ್ನು ಬಂಧಿಸಲಾಗಿದೆ. ಅವರು ರಾಮಚಂದ್ರ ಚಂದ್ರವಂಶಿ ವಿಶ್ವವಿದ್ಯಾಲಯದ ಉಪಕುಲಪತಿಯೂ ಆಗಿದ್ದಾರೆ.
ಸಮಿತಿಯ ಸದಸ್ಯರಾದ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಉಪನ್ಯಾಸಕ ರಾಜೀವ್ ಸಿಜರಿಯ, ಭರತ್ ಕಾನೂನು ಸಂಸ್ಥೆಯ ಡೀನ್ ಡಿ. ಗೋಪಾಲ್, ಜಾಗರಣ್ ಲೇಕ್ ಸಿಟಿ ವಿಶ್ವವಿದ್ಯಾಲಯದ ಡೀನ್ ರಾಜೇಶ್ ಸಿಂಗ್ ಪವಾರ್, ಜಿ.ಎಲ್. ಬಜಾಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ನಿರ್ದೇಶಕ ಮಾನಸ್ ಕುಮಾರ್ ಮಿಶ್ರಾ, ದಾವಣಗೆರೆ ವಿಶ್ವವಿದ್ಯಾಲಯದ ಪ್ರೊ. ಗಾಯತ್ರಿ ದೇವರಾಜ ಹಾಗೂ ಸಂಬಲ್ಪುರ ವಿಶ್ವವಿದ್ಯಾಲಯದ ಪ್ರೊ. ಡಿ. ಮಹಾರಾಣ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾಕ್ ಪರಿಶೀಲನ ತಂಡದ ಸದಸ್ಯರಿಗೆ ಲಂಚ ನೀಡಲಾಗಿತ್ತು. ಹಣ, ಬಂಗಾರ, ಮೊಬೈಲ್ ಫೋನ್ ಹಾಗೂ ಲ್ಯಾಪ್ಟಾಪ್ಗಳನ್ನು ಶೋಧ ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ವಕ್ತಾರರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ, ಬೆಂಗಳೂರು, ವಿಜಯವಾಡ, ನವದೆಹಲಿ ಸೇರಿದಂತೆ 20 ಕಡೆ ದಾಳಿ ನಡೆಸಲಾಗಿತ್ತು.