ಮಲೇಬೆನ್ನೂರು, ಫೆ.2- ಯಲವಟ್ಟಿಯ ಶ್ರೀ ಗುರುಸಿದ್ಧಾಶ್ರಮದಲ್ಲಿ ಪ್ರತಿ ತಿಂಗಳು ಅಮಾವಾಸ್ಯೆ ದಿನದಂದು ನಡೆಯುವ ಸತ್ಸಂಗ ಕಾರ್ಯಕ್ರಮ ವನ್ನು ಆನ್ಲೈನ್ನಲ್ಲಿ ವೀಕ್ಷಣೆ ಮಾಡುತ್ತಿದ್ದ ಕೆನಡಾ ದೇಶದಲ್ಲಿರುವ ಹೈದರಾಬಾದ್ ಮೂಲಕ ಶ್ರೀಮತಿ ಗೀತಾ ಮತ್ತು ಶ್ರೀನಿವಾಸ್ ಯಲಮಂಚಿ ದಂಪತಿ ಶ್ರೀಮಠದಲ್ಲಿ ಜರುಗಿದ ಮೌನಿ ಅಮಾವಾಸ್ಯೆ ಸತ್ಸಂಗ ಕಾರ್ಯಕ್ರಮದ ದಾಸೋಹಿಗಳಾಗಿ ಗಮನ ಸೆಳೆದರು.
ಅಷ್ಟೇ ಅಲ್ಲದೇ, ಸತ್ಸಂಗ ಕಾರ್ಯಕ್ರಮದಲ್ಲಿ ಮೊಬೈಲ್ ಮೂಲಕ ಕೆನಡಾದಿಂದ ಮಾತನಾಡಿದ ಶ್ರೀಮತಿ ಗೀತಾ ಮತ್ತು ಶ್ರೀನಿವಾಸ್ ದಂಪತಿಗಳು ಸತ್ಸಂಗ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಹುಬ್ಬಳ್ಳಿಯ ಸಿದ್ಧಾರೂಢ ಮಠ ಬರುವ ಸಂಕಲ್ಪ ಇದ್ದು ಈ ವೇಳೆ ಯಲವಟ್ಟಿ ಮಠಕ್ಕೂ ಬರುವುದಾಗಿ ಹೇಳಿದರು.
ಸತ್ಸಂಗ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಾತ್ಮ ಚಿಂತಕ ಸಿರಿಗೆರೆಯ ಡಾ. ಸಿದ್ದೇಶ್ ಅವರು, ಹೊಳೆಸಿರಿಗೆರೆಯ ಸಾಫ್ಟ್ವೇರ್ ಇಂಜಿನಿಯರ್ ವೆಂಕಟೇಶ್ಗೌಡ ಅವರಿಗೆ ಪರಿಚಿತರಾಗಿರುವ ಕೆನಡಾ ದೇಶದಲ್ಲಿ ಉದ್ಯೋಗ ಮಾಡುತ್ತಿರುವ ಶ್ರೀಮತಿ ಗೀತಾ ಮತ್ತು ಶ್ರೀನಿವಾಸ್ ದಂಪತಿಗಳು ಮೊದಲಿನಿಂದಲೂ ಗುರುಪರಂಪರೆ ಯನ್ನು ಮೈಗೂಡಿಸಿಕೊಂಡು ಬಂದಿದ್ದಾರೆ.
ಸಿದ್ಧಾರೂಢರ ಆತ್ಮ ಚರಿತ್ರೆಯನ್ನು 98 ಬಾರಿ ಪಾರಾಯಣ ಮಾಡಿರುವ ಅವರು, 108ನೇ ಪಾರಾಯಣವಾದ ನಂತರ ಹುಬ್ಬಳ್ಳಿ ಮಠಕ್ಕೆ ಬರುವುದಾಗಿ ಹೇಳಿದ್ದಾರೆ ಎಂದು ವೆಂಕಟೇಶ್ಗೌಡ ತಮ್ಮ ಭಾಷಣದಲ್ಲಿ ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಯೋಗಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕಡಲಾಚೆಯೂ ಸಿದ್ಧಾರೂಢರ ಭಕ್ತರಿದ್ದಾರೆಂಬ ವಿಷಯ ತಿಳಿದು ಸಂತೋಷವಾಯಿತು.
ಸೇವೆ, ದಾನ, ಧರ್ಮದಲ್ಲಿ ಬಹಳ ಪುಣ್ಯ ಇದ್ದು, ಆಗಾಧ ಶಕ್ತಿ ಇರುವ `ಓ ನಮಃ ಶಿವಾಯ’ ಎಂಬ ಪಂಚಾಕ್ಷರಿ ಮಹಾಮಂತ್ರವನ್ನು ನಿತ್ಯ ಪಠಿಸಿ ಎಂದು ಸ್ರಾಮೀಜಿ ಭಕ್ತರಿಗೆ ಹೇಳಿದರು.
ಸಿದ್ಧಾರೂಢ ರಥಯಾತ್ರೆ ಫೆ.8ರ ಸಂಜೆ 7 ಗಂಟೆಗೆ ಹರಿಹರಕ್ಕೆ ಆಗಮಿಸಲಿದೆ ಎಂದು ಸ್ವಾಮೀಜಿ ತಿಳಿಸಿದರು.
ಹೊಳೆಸಿರಿಗೆರೆಯ ಕುಂದೂರು ಮಂಜಪ್ಪ ಕವಿತೆ ಹಾಡಿದರೆ, ಕುಂಬಳೂರು ಕುಬೇರಪ್ಪ, ಹೊಳೆಸಿರಿಗೆರೆಯ ವೆಂಕಟೇಶಗೌಡ ಭಕ್ತಿಗೀತೆ ಹಾಡಿದರು.
ಗ್ರಾಮದ ಹಿರಿಯ ಮುಖಂಡ ಡಿ.ಯೋಮಕೇಶ್ವರಪ್ಪ, ಜಿ.ಆಂಜನೇಯ, ಜಿಗಳಿ ಆನಂದಪ್ಪ, ಬಿ.ಸೋಮೇಶೇಖರಾಚಾರಿ, ರಂಗಪ್ಪ, ಯಲವಟ್ಟಿಯ ಎ.ಸುರೇಶ್, ಹೊಸಮನಿ ಮಲ್ಲಪ್ಪ, ಟಿ.ಮಂಜಪ್ಪ, ಡಿ.ರಾಜಪ್ಪ, ಸುಬೇದಾರ್ ಶಿವಕುಮಾರ್, ಸಿರಿಗೆರೆಯ ಜಿ.ವಿ.ಹನುಮಂತಗೌಡ, ರೇವಣಸಿದ್ದಯ್ಯ, ಮಾಗೋಡ ಸಿದ್ದಣ್ಣ, ಅಶೋಕಪ್ಪ, ಕುಂಬಳೂರಿನ ಸದಾಶಿವ, ಭೂಪಾಲಪ್ಪ, ನಾಗರಾಜ್, ಪತ್ರಕರ್ತರಾದ ಜಿಗಳಿ ಪ್ರಕಾಶ್, ನಾಗೇಂದ್ರಪ್ಪ, ಸದಾನಂದ್ ಭಾಗವಹಿಸಿದ್ದರು.
ಅಮೃತ, ಆರಾಧ್ಯ ಪ್ರಾರ್ಥಿಸಿದರು. ಪಿಎಸಿಎಸ್ ಸಿಇಓ ಶೇಖರಪ್ಪ ಸ್ವಾಗತಿಸಿದರು.