ಚನ್ನಗಿರಿ ಲೈಂಗಿಕ ದೌರ್ಜನ್ಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ: ಪ್ರಮೋದ್ ಮುತಾಲಿಕ್

ದಾವಣಗೆರೆ, ಫೆ. 2- ಚನ್ನಗಿರಿಯ ಮೆಡಿಕಲ್ ಶಾಪ್‌ನ ಅಮ್ಜದ್ ಎಂಬ ರಾಕ್ಷಸಿ ಪ್ರವೃತ್ತಿಯ ವ್ಯಕ್ತಿಯು ವ್ಯವಸ್ಥಿತವಾಗಿ ನೂರಾರು ಮಹಿಳೆಯರು, ವಿದ್ಯಾರ್ಥಿನಿ ಯರು, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಶ್ರೀರಾಮ ಸೇನೆಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವ ರೀತಿಯಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದರೆ, ನ್ಯಾಯಾಲ ಆತನಿಗೆ ತಕ್ಕ ಶಿಕ್ಷೆ ನೀಡಲಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಚನ್ನಗಿರಿಯಲ್ಲಿ ಜ. 30 ರಂದು ಆರೋಪಿ ಅಮ್ಜದ್ ಎಂಬಾತನನ್ನು ಬಂಧಿಸಿದ್ದು, ಆತನ ಬಳಿ ಹಲವಾರು ಅತ್ಯಾಚಾರದ ವಿಡಿಯೋ ತುಣುಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 56 ವರ್ಷದ ಈ ಆರೋಪಿ ತನ್ನ ಮೆಡಿಕಲ್ ಶಾಪ್‌ನಲ್ಲಿ ರಾಕ್ಷಸಿ ಕೃತ್ಯ ನಡೆಸಿದ್ದು, ಇದರ ಹಿಂದೆ ವ್ಯವಸ್ಥಿತ ಸಂಘಟನೆಗಳು ಇರುವ ಶಂಕೆ ಇದೆ. ಈ ಘಟನೆ ಕುರಿತಂತೆ ರಾಜ್ಯ ಸರ್ಕಾರ, ಗೃಹ ಇಲಾಖೆ, ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಆರೋಪಿ ಯಾವುದೇ ಕಾರಣಕ್ಕೂ ಪ್ರಕರಣದಿಂದ ತಪ್ಪಿಸಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಅಮ್ಜದ್ ಪ್ರಕರಣ ಕುರಿತಾಗಿ ಆತನ ಮೊದಲ ಹೆಂಡತಿ ಈ ಹಿಂದೆಯೇ ಈ ರೀತಿಯ ಅತ್ಯಾಚಾರ ಪ್ರಕರಣಗಳಲ್ಲಿ ತನ್ನ ಪತಿ ಇದ್ದ ಬಗ್ಗೆ ದೂರು ನೀಡಿದ್ದರು. ಎರಡು ವರ್ಷಗಳ ಹಿಂದೆ ಈ ವ್ಯಕ್ತಿ ಬಗ್ಗೆ ತನಿಖೆ ನಡೆಸಿದ್ದರೇ ಅವತ್ತೇ ಈ ವ್ಯಕ್ತಿಯು ಕಾಮಪುರಾಣ ಬಯಲಾಗುತ್ತಿತ್ತು. ಆದರೆ, ಅಂದು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದೇ ರಾಜಿ ಸಂಧಾನ ಮಾಡಿದ್ದರ ಹಿನ್ನೆಲೆಯಲ್ಲಿ ಇಷ್ಟೆಲ್ಲಾ ಪ್ರಕರಣಗಳಿಗೆ ಕಾರಣ ಆಗಿದೆ ಎಂದು ಆಕ್ರೋಶ  ವ್ಯಕ್ತಪಡಿಸಿದರು.

ಈ ಪ್ರಕರಣ ಕುರಿತು ಶ್ರೀರಾಮ ಸೇನೆಯಿಂದ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇದೇ ದಿನಾಂಕ 6 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪರಶುರಾಮ ನಡುಮನಿ, ಮಣಿ ಸರ್ಕಾರ್, ಚನ್ನಗಿರಿಯ ವಿನಯ್, ನಿತೀನ್, ಪಿ. ಸಾಗರ್, ಶ್ರೀಧರ್, ಶಿವಕುಮಾರ್, ಅಜಯ್, ಪ್ರಭು ಇದ್ದರು. 

error: Content is protected !!