ನವ ವಧುವಿನಂತೆ ಸಿಂಗಾರಗೊಂಡ ಕೆರೆ
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಗ್ರಾಮದ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ದೀಪೋತ್ಸವ ಮತ್ತು ತೆಪ್ಪೋತ್ಸವ ಇಂದು ಸಂಜೆ 6 ಗಂಟೆಯಿಂದ ವೈಭವದೊಂದಿಗೆ ಜರುಗಲಿದೆ.
ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಐತಿಹಾಸಿಕ ಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಕೊಮಾರನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಾದಿಗಳ ಸಹಕಾರಗೊಂದಿಗೆ ಕೆರೆಯಲ್ಲಿ ಈ ದೀಪೋತ್ಸವ ಮತ್ತು ತೆಪ್ಪೋತ್ಸವವನ್ನು ಹಮ್ಮಿಕೊಂಡಿದ್ದಾರೆ.
ಕೆರೆಯ ಇತಿಹಾಸದಲ್ಲಿ ಇದು 3ನೇ ಬಾರಿಗೆ ನಡೆಯುತ್ತಿರುವ ತೆಪ್ಪೋತ್ಸವ ಆಗಿರುವುದರಿಂದ ಗ್ರಾಮಸ್ಥರು ಬಹಳ ಆಸಕ್ತಿ ವಹಿಸಿ, ಈ ತೆಪ್ಪೋತ್ಸವ ಕಾರ್ಯಕ್ರಮವನ್ನು ಸಂಘಟಿಸಿದ್ದು, ಎಲ್ಲಾ ಸಿದ್ಧತೆಗಳು ಗುರುವಾರ ಸಂಜೆಗೆ ಪೂರ್ಣಗೊಂಡಿವೆ.
ಈ ವಿಶೇಷ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೊಮಾರನಹಳ್ಳಿ ಗ್ರಾಮವನ್ನು ಹಾಗೂ ಕೆರೆಯನ್ನು ನವ ವಧುವಿನಂತೆ ಸಿಂಗಾರ ಮಾಡಲಾಗಿದ್ದು, ಸ್ವಾಗತ ಕೋರುವ ಬೃಹತ್ ಮಂಟಪ ಮತ್ತು ವಿದ್ಯುತ್ ದೀಪಾಲಂಕಾರ ಹಾಗೂ ಕೇಸರಿ ಬಾವುಟಗಳು ಎಲ್ಲರ ಕಣ್ಮನ ಸೆಳೆಯುತ್ತಿವೆ.
ಕೆರೆಯ ಸುತ್ತಲಿನ ಜಾಗವನ್ನು ಸ್ವಚ್ಛಗೊಳಿಸಿ, ಕಲ್ಲುಗಳಿಗೆ ಸುಣ್ಣ ಬಳಿಸಲಾಗಿದ್ದು, ಕೆರೆಯ ಸುತ್ತಲು ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ತೆಪ್ಪೋತ್ಸವ ಆರಂಭವಾಗಲು ಸ್ಥಳದಲ್ಲಿ ತಾತ್ಕಾಲಿಕ ಮಂಟಪ ನಿರ್ಮಿಸಲಾಗಿದ್ದು, ಆ ಸ್ಥಳದಲ್ಲೇ 12 ತೆಪ್ಪಗಳನ್ನು ನಿಲ್ಲಸಲಾಗಿದೆ.
ಅಲ್ಲದೇ, ಶುಕ್ರವಾರ ಪ್ರವಾಸೋದ್ಯಮ ಇಲಾಖೆಯಿಂದ 2 ಬೋಟ್ಗಳು ಬರಲಿದ್ದು, ಪ್ರವಾಸಿಗರನ್ನು ಕೆರೆಯಲ್ಲಿ ಸುತ್ತಾಡಲಿವೆ. ಲಕ್ಷ್ಮಿ ರಂಗನಾಥ ಸ್ವಾಮಿ ಸಮುದಾಯ ಭವನದಲ್ಲಿ ಶುಕ್ರವಾರ ಇಡೀ ದಿನ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.
ಸುಮಾರು 30 ಸಾವಿರ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ಥ್ ವ್ಯವಸ್ಥೆ ಮಾಡಲಾಗಿದೆ ಎಂದು ಪಿಎಸ್ಐ ಪ್ರಭು ಕೆಳಗಿನಮನೆ ತಿಳಿಸಿದ್ದಾರೆ.
ತಹಶೀಲ್ದಾರ್ ಗುರುಬಸವರಾಜ್, ಉಪತಹಶೀಲ್ದಾರ್ ಆರ್.ರವಿ, ಕಂದಾಯ ನಿರೀಕ್ಷಕ ಆನಂದ್ ಮತ್ತಿತರರು ಗುರುವಾರ ಬೆಳಿಗ್ಗೆ ತೆಪ್ಪೋತ್ಸವ ನಡೆಯುವ ಸ್ಥಳವನ್ನು ಪರಿಶೀಲಿಸಿದರು.
ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ ಅವರು ಪ್ರತ್ಯೇಕವಾಗಿ ಕೊಮಾರನಹಳ್ಳಿ ಕೆರೆಗೆ ಆಗಮಿಸಿ, ತೆಪ್ಪೋತ್ಸವದ ಸಿದ್ಧತೆ ವೀಕ್ಷಣೆ ಮಾಡಿ, ಅಗತ್ಯ ಸಲಹೆ, ಸಹಕಾರ ನೀಡಿದರು.
ಗ್ರಾಮದ ಜಿ.ಮಂಜುನಾಥ್ ಪಟೇಲ್, ಐರಣಿ ಅಣ್ಣಪ್ಪ, ಐರಣಿ ಮಹೇಶ್ವರಪ್ಪ, ಸುರೇಶ್ ಶಾಸ್ತ್ರಿ, ದಾನಪ್ಳ ಅರುಣ್, ಎಸ್.ಎಂ.ಮಂಜುನಾಥ್, ಮಡಿವಾಳರ ಬಸವ ರಾಜ್, ರಾಮಣ್ಣ ಸ್ವಾಮಿ, ಸಿ.ರಂಗನಾಥ್, ಚಿಟ್ಟಕ್ಕಿ ನಾಗರಾಜ್ ಮತ್ತಿತರರು ಸಿದ್ಧತೆಯ ಉಸ್ತುವಾರಿ ವಹಿಸಿದ್ದರು.