ಮಾಜಿ ಸಂಸದ ಸಿದ್ದೇಶ್ವರ ಬಳಿಯ ಸಾವಿರ ಕೋಟಿ ಬಗ್ಗೆ ತನಿಖೆ ನಡೆಸಲು ಒತ್ತಾಯ

ದಾವಣಗೆರೆ, ನ. 27 – ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾವಿರ ಕೋಟಿ ರೂಪಾಯಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ಹುಟ್ಟುಹಬ್ಬ ಕಾರ್ಯಕ್ರಮದ ಸಂದರ್ಭದಲ್ಲಿ ತಿಳಿಸಿದ್ದು, ಸಾವಿರ ಕೋಟಿ ರೂಪಾಯಿ ಎಲ್ಲಿಂದ ಬಂತು? ಹೇಗೆ ಬಂತು? ಎಂಬುದರ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ಕಾಂಗ್ರೆಸ್ ಮುಖಂಡ ಎಂ.ಟಿ. ಸುಭಾಷ್ ಚಂದ್ರ ಹಾಗೂ ಮಾಜಿ ನಗರ ಸಭೆ ಅಧ್ಯಕ್ಷ ಬಿ. ವಿರಣ್ಣ ಒತ್ತಾಯಿಸಿದ್ದಾರೆ.

ಸಿದ್ದೇಶ್ವರ ಅವರು ಸಾವಿರ ಕೋಟಿ ರೂಪಾಯಿ ಮಾಡಿದ್ದಾರೆ ಎಂದಾದರೆ, ಅವರ ಸರ್ಕಾರದ ಅವಧಿಯಲ್ಲಿ ಸಚಿವರು ಎಷ್ಟು ಕೋಟಿಗಟ್ಟಲೆ ಕೊಳ್ಳೆ ಹೊಡೆದಿರಬಹುದು? ಎಂದು ಕೇಳಿರುವ  ಅವರು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಘೋಷಣೆ ಹೇಳುವ ಪ್ರಧಾನಿ ಮೋದಿ ಅವರೇ, ಭ್ರಷ್ಟಾಚಾರದ ಬಗ್ಗೆ ರೇಣುಕಾಚಾರ್ಯ ಸಾರ್ವಜನಿಕವಾಗಿ ನೀಡಿರುವ ಹೇಳಿಕೆಗಿಂತ ನಿಮಗೆ ಇನ್ನು ಯಾವ ಸಾಕ್ಷಿ ಬೇಕು ? ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

ಬಿ.ವೈ. ವಿಜಯೇಂದ್ರ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ ಎಂದು ರೇಣುಕಾಚಾರ್ಯ ಹೇಳಿದ್ದು, ಮೊದಲು ಬಿಜೆಪಿಯಲ್ಲಿನ ಒಡಕು ಸರಿ ಮಾಡಿಕೊಳ್ಳಿ, ತದ ನಂತರ ಮುಂದಿನ ಮುಖ್ಯಮಂತ್ರಿ ಬಗ್ಗೆ ಯೋಚನೆ ಮಾಡಬೇಕೆಂದು ಸಲಹೆ ನೀಡಿದ್ದಾರೆ.

ಬಸವನಗೌಡ ಪಾಟೀಲ್ ಯತ್ನಾಳ್ ಅವರು ಪಾದಯಾತ್ರೆ ಮಾಡುತ್ತಿದ್ದಾರೆ.  ರೇಣುಕಾಚಾರ್ಯ ಹೇಳಿಕೆ ನೀಡಿರುವಂತೆ ಬಿಜೆಪಿ ಭ್ರಷ್ಟಾಚಾರದ ಬಗ್ಗೆಯೂ   ಈ ಸಂದರ್ಭದಲ್ಲಿ ಮಾತನಾಡಬೇಕಾಗಿ ವಿನಂತಿ ಮಾಡಿದ್ದಾರೆ. ಬಿಜೆಪಿ ಪಕ್ಷದೊಳಗೆ ಇಂತಹ ಭ್ರಷ್ಟಾಚಾರ ಇದ್ದರೂ ಕೂಡ ಬಸನಗೌಡ ಪಾಟೀಲ ಯಾವ ನೈತಿಕತೆಯಿಂದ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಯೋಚಿಸಬೇಕಾಗಿದೆ ಎಂದಿದ್ದಾರೆ.

error: Content is protected !!